ನ್ಯೂಸ್

ಪೊಲೀಸರ ಭಯದಿಂದ 2 ಆಟೋಗಳಲ್ಲಿ 1400 ಕಿ.ಮೀ ಪ್ರಯಾಣ: ಸಹೋದರರಿಬ್ಬರ ಕತೆ ಕೇಳಿದ್ರೆ ಮನಕಲಕುತ್ತೆ! Brothers

Brothers : ಒಂದು ಭರವಸೆ ಕ್ಯಾನ್ಸರ್ ರೋಗಿಯನ್ನೂ ಜೀವಂತವಾಗಿರಿಸುತ್ತದೆ. ಅದೇ ರೀತಿ ಭಯವು ಹುಣ್ಣು ರೋಗಿಯನ್ನು ಸಹ ಕೊಲ್ಲುತ್ತದೆ... ಇದು ಸಿನಿಮಾವೊಂದರ ಡೈಲಾಗ್​. ಈಗೇಕೆ ಈ ಮಾತು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಗುರುಗ್ರಾಮ್‌ ಮೂಲದ ಇಬ್ಬರು ಆಟೋ ಚಾಲಕರಾದ ಇಸ್ರೇಲ್​ ಮತ್ತು ಅಶ್ರಫುಲ್ ಬಗ್ಗೆ ತಿಳಿದುಕೊಂಡರೆ ಅದಕ್ಕೆ ಉತ್ತರ ಸಿಗಲಿದೆ.

ಸಾಮಾನ್ಯವಾಗಿ, ಎಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಕಾರಿನಲ್ಲಿ ನೂರು ಕಿಲೋಮೀಟರ್ ಪ್ರಯಾಣಿಸುವ ಮುನ್ನು ಎರಡು ಬಾರಿ ಯೋಚಿಸುತ್ತೇವೆ. ಆದರೆ ಮೇಲೆ ತಿಳಿಸಲಾದ ಇಬ್ಬರು ಸಹೋದರರ ಕುಟುಂಬ ಸದಸ್ಯರು ಎರಡು ಆಟೋಗಳಲ್ಲಿ ಒಟ್ಟಿಗೆ 1400 ಕಿಲೋಮೀಟರ್ ಪ್ರಯಾಣಿಸಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದಾರೆ. ಅವರೇನೂ ಆ ಪ್ರಯಾಣವನ್ನು ಮೋಜಿಗಾಗಿ ಅಥವಾ ಥ್ರಿಲ್‌ಗಾಗಿ ಮಾಡಲಿಲ್ಲ. ಅದರ ಹಿಂದೆ ಒಂದು ಬಲವಾದ ಕಾರಣ ಇದೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.

ಇಸ್ರೇಲ್ ಮತ್ತು ಅಶ್ರಫುಲ್ ಸಹೋದರರು. ಅವರು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಗಜೋಲ್ ಪಟ್ಟಣದಿಂದ 16 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ದೆಹಲಿ ಬಳಿಯ ಗುರುಗ್ರಾಮ್‌ಗೆ ವಲಸೆ ಹೋದರು. ಅವರು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಎರಡು ಆಟೋಗಳನ್ನು ಖರೀದಿಸುವ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದರು. ಇನ್ನು ಇಸ್ರೇಲ್​ ಮತ್ತು ಅಶ್ರಫುಲ್​ ಅವರ ಹೆಂಡತಿಯರು ಗುರುಗ್ರಾಮ್‌ನ ಸೆಕ್ಟರ್ 49 ರಲ್ಲಿರುವ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಇಸ್ರೇಲ್‌ಗೆ 9 ವರ್ಷದ ಮಗನಿದ್ದಾನೆ. ಅವರ ಜೀವನ ಸುಗಮವಾಗಿ ನಡೆಯುತ್ತಿತ್ತು. ಆದರೆ, ಕಳೆದ 15 ದಿನಗಳ ಹಿಂದೆ ಅವರ ಜೀವನವು ಹದಗೆಟ್ಟಿತು.

ಬಾಂಗ್ಲಾದೇಶದಿಂದ ಅಕ್ರಮ ವಲಸೆ ಬಂದಿರುವ ಶಂಕೆಯ ಮೇಲೆ ಇಸ್ರೇಲ್ ಮತ್ತು ಅಶ್ರಫುಲ್ ಅವರ ಸಂಬಂಧಿಯನ್ನು ಪೊಲೀಸರು ಬಂಧಿಸಿದರು. ಎರಡು ದಿನಗಳ ನಂತರ ಪೊಲೀಸರು ಅವರನ್ನು ಬಿಡುಗಡೆ ಮಾಡಿದರು. ಆದರೆ, ಈ ಇಬ್ಬರು ಸಹೋದರರು ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದರು. ಮನೆ ಮಾಲೀಕರು ಅವರು ವಾಸಿಸುತ್ತಿದ್ದ ಮನೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದರು. ಇದರ ನಡುವೆ ಪೊಲೀಸರ ಭಯವೂ ಹೆಚ್ಚಾಯಿತು.

ಮನೆ ಮಾಲೀಕರು ನಮ್ಮನ್ನು ಖಾಲಿ ಮಾಡಲು ಕೇಳಿಕೊಂಡರು. ನಮ್ಮಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಎಲ್ಲ ದಾಖಲೆಗಳಿವೆ. ಪೊಲೀಸರು ನಮ್ಮನ್ನು ಕೂಡ ಕರೆದುಕೊಂಡು ಹೋಗುತ್ತಾರೆ ಎಂದು ನಾವು ಹೆದರುತ್ತಿದ್ದೆವು. ಅಂತಹ ಅನಿಶ್ಚಿತತೆಯಲ್ಲಿ, ನಾವು ಗುರುಗ್ರಾಮ್ ಬಿಡಲು ಬಯಸಿದ್ದೆವು. ಆದರೆ, ನಮ್ಮ ಜೀವನೋಪಾಯವಾಗಿದ್ದ ನಮ್ಮ ಆಟೋಗಳನ್ನು ಬಿಡಲು ನಾವು ಬಯಸಲಿಲ್ಲ. ನಾವು ಆಟೋಗಳಲ್ಲಿ ಗಜೋಲ್‌ಗೆ ಹಿಂತಿರುಗಲು ಬಯಸಿದೆವು ಎಂದು ಇಸ್ರೇಲ್ ಹೇಳಿದ್ದಾರೆ.

ಇಬ್ಬರು ಸಹೋದರರು, ಕೆಲವು ಪ್ರಮುಖ ವಸ್ತುಗಳನ್ನು ಪ್ಯಾಕ್ ಮಾಡಿ, ಆಗಸ್ಟ್ 1 ರಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಗುರುಗ್ರಾಮ್‌ನಿಂದ ಬಂಗಾಳಕ್ಕೆ ಎರಡು ಆಟೋಗಳಲ್ಲಿ ಪ್ರಯಾಣ ಬೆಳೆಸಿದರು. ಆದರೆ, ಅವರ ಪ್ರಯಾಣ ಸರಾಗವಾಗಿ ಸಾಗಲಿಲ್ಲ. ಹೆದ್ದಾರಿಗಳಲ್ಲಿ ಪೊಲೀಸರನ್ನು ನೋಡಿದಾಗಲೆಲ್ಲಾ ಅವರು ಭಯದಿಂದ ನಡುಗುತ್ತಿದ್ದರು. ಉತ್ತರ ಪ್ರದೇಶದ ಮೂಲಕ ಹಾದುಹೋಗುವಾಗ, ಕೆಲ ಪೊಲೀಸರಿಗೆ ಲಂಚ ನೀಡಿ ಮುಂದೆ ಸಾಗಿದರು.

ಹೀಗೆ ಪ್ರಯಾಣ ಸಾಗುತ್ತಿರುವಾಗ ಸಹೋದರರು ಬಿಹಾರದಲ್ಲಿ ದಾರಿ ತಪ್ಪಿದರು. ಉತ್ತರ ದಿನಾಜ್‌ಪುರದ ರಾಯ್‌ಗಂಜ್‌ಗೆ ಹೋದ ನಂತರ ಅವರು ತಮ್ಮ ಮಾರ್ಗವನ್ನು ಬದಲಾಯಿಸಿದರು. ಕೊನೆಗೆ, ದಕ್ಷಿಣ ದಿನಾಜ್‌ಪುರದ ಬುನಿಯಾದ್‌ಪುರದಲ್ಲಿ ಸಂಚಾರ ಪೊಲೀಸರ ಸಹಾಯದಿಂದ, ಅವರು ಸರಿಯಾದ ಹಾದಿಗೆ ಮರಳಿದರು. ಎಲ್ಲಿಯೂ ವಿಶ್ರಾಂತಿ ಪಡೆಯದೆ, ಎರಡೂವರೆ ದಿನಗಳಲ್ಲಿ ಆಟೋಗಳಲ್ಲಿ 1400 ಕಿಲೋಮೀಟರ್ ಪ್ರಯಾಣಿಸಿ ತಮ್ಮ ಊರನ್ನು ತಲುಪಿದರು. ಮಾಲ್ಡಾ ಜಿಲ್ಲಾ ಅಧಿಕಾರಿಗಳಿಗೆ ಸಹೋದರರ ಬಗ್ಗೆ ಮಾಹಿತಿ ತಿಳಿದಕೂಡಲೇ ಪ್ರತಿಕ್ರಿಯೆ ನೀಡಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಹೋದರರು ತಮ್ಮ ಊರಿಗೆ ಹಿಂದಿರುಗಿದ ನಂತರ, ಮತ್ತೆ ಅವರಿಗೆ ಭವಿಷ್ಯದ ಬಗ್ಗೆ ಆತಂಕ ಎದುರಾಯಿತು. ಕೆಲಸಕ್ಕಾಗಿ ಮತ್ತೆ ಗುರುಗ್ರಾಮ್‌ಗೆ ಹಿಂತಿರುಗಲು ಬಯಸಿದ್ದಾರೆ. ಆದರೆ, ಅಲ್ಲಿನ ಪೊಲೀಸರ ಕಿರುಕುಳ ಕಡಿಮೆಯಾಗುವವರೆಗೆ ಕಾಯುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೊಲೀಸರ ಭಯದಿಂದಾಗಿ ಈ ಇಬ್ಬರು ಸಹೋದರರು ದೊಡ್ಡ ಅಪಾಯವನ್ನು ಲೆಕ್ಕಿಸದೇ ಆಟೋಗಳಲ್ಲಿ ತಮ್ಮ ಊರಿಗೆ ಮರಳಿದ್ದಾರೆ. (ಏಜೆನ್ಸೀಸ್​)