ನ್ಯೂಸ್

ಎಫ್​ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ನಾಳೆ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

arunakunigal

ಬೆಂಗಳೂರು: ನಾಳೆ(ಜ.24) ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ.

2020ರ ಜನವರಿ 31ರ ಅಧಿಸೂಚನೆಯನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ನಾಳೆ ಅಂದರೆ 2021ರ ಜನವರಿ 24ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಲಾಗಿತ್ತು.

ಪರೀಕ್ಷೆಗೂ ಮುನ್ನಾದಿನ ಅಂದ್ರೆ ಶನಿವಾರವೇ ಭಾನುವಾರ ಎರಡು ಅಧಿವೇಶನಗಳಲ್ಲಿ ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಕೆಲವೊಂದು ದುಷ್ಕರ್ಮಿಗಳ ಕೈಸೇರಿರುವುದು ತಿಳಿದು ಬಂದಿದೆ. ಹಾಗಾಗಿ ಭಾನುವಾರ ನಡೆಯಬೇಕಿದ್ದ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಪರೀಕ್ಷೆಗಳನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಫ್​ಡಿಎ ಪರೀಕ್ಷೆ ನಡೆಯುವ ದಿನಾಂಕವನ್ನು ಮರುನಿಗದಿ ಮಾಡಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.