ನ್ಯೂಸ್

'ನಂಗೆ ಮನೆಯಲ್ಲೇ ಪ್ರೈವೆಸಿ ಇಲ್ಲ' ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳ್ಕೊಂಡ ಮಗ; ಅಪ್ಪ ಮಾಡಿದ್ದೇನು?

ನವದೆಹಲಿ: ಮಕ್ಕಳು ಹೆಚ್ಚಾಗಿ ಇತರರೊಂದಿಗೆ ಆಟ-ಪಾಠದಲ್ಲಿ ಬೆರೆತರೂ ಒಂದಷ್ಟು ಖಾಸಗಿತನ ಬಯಸುತ್ತಾರೆ ಎಂಬುದು ಕೂಡ ನಿಜ. ಆದರೆ ಇಲ್ಲೊಬ್ಬ ಹದಿನಾರು ವರ್ಷದ ಹುಡುಗ ನನಗೆ ಮನೆಯಲ್ಲೇ ಪ್ರೈವೆಸಿ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾನೆ.

ಮನೆಯಲ್ಲಿನ ತನ್ನ ಕೊಠಡಿಯ ಫೋಟೋ ಸೋಷಿಯಲ್ ಮೀಡಿಯಾ ಆ್ಯಪ್ ಆಗಿರುವ ರೆಡ್ಡಿಟ್​ನಲ್ಲಿ ಈ ಹುಡುಗ ಹಂಚಿಕೊಂಡಿದ್ದು, ತನ್ನ ಅಳಲನ್ನು ಸಾರ್ವಜನಿಕವಾಗಿ ತೋಡಿಕೊಂಡಿದ್ದಾನೆ. ಹದಿಹರೆಯದ ಯಾರ್ಯಾರು ತಮಗೆ ಪ್ರೈವೆಸಿ ಇಲ್ಲ ಎಂದು ಅಂದುಕೊಂಡಿದ್ದೀರೋ ಅಂಥವರು ಒಮ್ಮೆ ನನ್ನ ಹಾಗೂ ನನ್ನ ಸಹೋದರರ ರೂಮ್ ನೋಡಿ. ನಮ್ಮ ಕೋಣೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ ಎಂದು ಈ ಹುಡುಗ ಫೋಟೋ ಸಹಿತ ಹೇಳಿಕೊಂಡಿದ್ದಾನೆ.

ಈತನ ತಂದೆಯೇ ಈ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ಅದಕ್ಕೊಂದು ಕಾರಣವೂ ಇದೆ. ಒಂದು ವರ್ಷದ ಹಿಂದೆ ಸಹೋದರನ ರೂಮ್​ನಲ್ಲಿ ಈ ಹುಡುಗ ಬೆಳಗಿನ ಜಾವ 4 ಗಂಟೆಗೆ ಪ್ಲೇಸ್ಟೇಷನ್​ ವಿಡಿಯೋ ಗೇಮ್ ಆಡುವಾಗ ತಂದೆಯ ಕೈಗೆ ಸಿಕ್ಕಿಬಿದ್ದಿದ್ದನಂತೆ. ಆದರೆ ನಾನು ಅದಕ್ಕೂ ಮೊದಲು ಮೂರು ಗಂಟೆ ಓದಿದ್ದರೂ ಅಪ್ಪ ಅದನ್ನು ಒಪ್ಪಿರಲಿಲ್ಲ. ಆಮೇಲೆ ನನ್ನ ಬರ್ತ್​ಡೇ ದಿನ ಇನ್ನೊಮ್ಮೆ ಪ್ಲೇಸ್ಟೇಷನ್ ಆಡುವಾಗ ಅಪ್ಪ ನೋಡಿದರು ಎಂದೂ ಈ ಹುಡುಗ ಹೇಳಿಕೊಂಡಿದ್ದಾನೆ. ಇದರಿಂದ ಸಿಟ್ಟಾದ ಅಪ್ಪ ಮಕ್ಕಳಿಬ್ಬರ ರೂಮ್​​ಗೂ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರಂತೆ.

ನಾನು ಟಾಪ್ ಸ್ಟುಡೆಂಟ್, ಯಾವಾಗಲೂ ಶೇ. 90 ಮೇಲೆಯೇ ಅಂಕಗಳನ್ನು ಪಡೆಯುತ್ತೇನೆ. ಹೀಗಿರುವಾಗ ನಾನು ರಾತ್ರಿಯಲ್ಲಿ ಒಂದಷ್ಟು ಹೊತ್ತ ವಿಡಿಯೋ ಗೇಮ್ ಆಡಿದರೆ ಅದೇನೂ ದೊಡ್ಡ ಸಂಗತಿಯಲ್ಲಿ ಎಂದು ಹೇಳುವ ಈ ಹುಡುಗ, ತನ್ನ ತಂದೆಯ ನಡೆಯ ವಿರುದ್ಧ ಸಮಾಧಾನ ವ್ಯಕ್ತಪಡಿಸಿದ್ದಾನೆ. -ಏಜೆನ್ಸೀಸ್