ನ್ಯೂಸ್

1 ಕೋಟಿ ಹಣದೊಂದಿಗೆ ಮಾತು ಬಾರದ, ಕಿವಿ ಕೇಳದ ದಿನಗೂಲಿ ನೌಕರನನ್ನು ಹುಡುಕಿ ಬಂದ ಅದೃಷ್ಟ ಲಕ್ಷ್ಮೀ! Wage laborer

Wage laborer : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ಮಗನ ಮನೆಯಲ್ಲಿ ಹಾಲು ಕರೆಯುವಾಗಲೇ ಅದೃಷ್ಟ ದೇವತೆ ತಂದೆಯನ್ನು ಹುಡುಕಿ ಬಂದಿದ್ದಾಳೆ. ಭೀಮನಾಡ್ ಪೆರಿಂಬದರಿ ಪುತನ್‌ಪಲ್ಯಲ್ಯದ ಕೃಷ್ಣನ್‌ಕುಟ್ಟಿ ಎಂಬುವರು ಕೇರಳ ಸರ್ಕಾರದ ಸಮೃದ್ಧಿ ಲಾಟರಿಯಲ್ಲಿ ಪ್ರಥಮ ಬಹುಮಾನ ಗೆದ್ದಿದ್ದಾರೆ. ಅಂದಹಾಗೆ, ಮೊದಲ ಬಹುಮಾನದ ಮೊತ್ತ 1 ಕೋಟಿ ರೂಪಾಯಿ. ನಿನ್ನೆ ನಡೆದ ಡ್ರಾನಲ್ಲಿ ಕೃಷ್ಣನ್​ ಕುಟ್ಟಿ ಗೆಲುವು ಸಾಧಿಸಿದ್ದಾರೆ.

ಅಂದಹಾಗೆ, ಕೃಷ್ಣನ್‌ ಕುಟ್ಟಿ ಓರ್ವ ಕೂಲಿ ಕಾರ್ಮಿಕ. ಅವರಿಗೆ ಮಾತನಾಡಲು ಬರುವುದಿಲ್ಲ. ಅಲ್ಲದೆ, ಕಿವಿಯೂ ಕೇಳಿಸಲ್ಲ. ಆಗಾಗ್ಗೆ ಮೂರು ಅಥವಾ ನಾಲ್ಕು ಜನರ ಗುಂಪುಗಳಲ್ಲಿ ಕೃಷ್ಣನ್​ ಅವರು ಟಿಕೆಟ್ ಖರೀದಿ ಮಾಡುತ್ತಾರೆ. ಈ ಹಿಂದೆ ಸಣ್ಣ ಬಹುಮಾನಗಳನ್ನು ಸಹ ಗೆದ್ದಿದ್ದಾರೆ. ಕೃಷ್ಣನ್ ಕುಟ್ಟಿ ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ. ನಿನ್ನೆ, ಅವರು ತಮ್ಮ ಹಿರಿಯ ಮಗ ಅನೀಶ್ ಬಾಬು ಅವರ ಮನೆಯಲ್ಲಿ ಹಾಲು ಕರೆಯುತ್ತಿದ್ದರು. ಈ ವೇಳೆ ಲಾಟರಿ ಬಹುಮಾನ ಸುದ್ದಿ ಸಿಕ್ಕಿ ತುಂಬಾ ಖುಷಿಯಾಗಿದ್ದಾರೆ.

ಪೆರಿಂಬತ್ತರಿಯ ಲಾಟರಿ ಮಾರಾಟಗಾರ ಮಾಂಬಟ ಅಬ್ದು ಅವರಿಂದ ಅವರು ಖರೀದಿಸಿದ್ದ MV122462 ಸಂಖ್ಯೆಯ ಲಾಟರಿಗೆ ಬಹುಮಾನ ಬಂದಿದೆ. ಕೃಷ್ಣನ್​ ಅವರು ನಾಲ್ಕು ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದರು. ಅವುಗಳಲ್ಲಿ ಒಂದನ್ನು ಗೆದ್ದಿರುವುದಾಗಿ ಅಬ್ದು ಸ್ವತಃ ಘೋಷಿಸಿದ್ದಾರೆ. ಟಿಕೆಟ್ ಅನ್ನು ಸೌತ್ ಇಂಡಿಯನ್ ಬ್ಯಾಂಕ್‌ಗೆ ಹಸ್ತಾಂತರಿಸಲಾಗಿದೆ. ತೆರಿಗೆ ಎಲ್ಲ ಕಡಿತವಾಗಿ ಉಳಿದ ಹಣ ಕೃಷ್ಣನ್​ ಅವರ ಕೈಸೇರಲಿದೆ. (ಏಜೆನ್ಸೀಸ್​)