Accident: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರಕ್‌ಗೆ ಎಸ್‌ಯುವಿ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಶುಕ್ರವಾರ (ಸೆ. 19) ವರದಿಯಾಗಿದೆ.
ಸಿಧಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬಹ್ರಿ ಬೈಪಾಸ್ ಬಳಿ ಗುರುವಾರ ಸಂಜೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ಥಳೀಯರಾದ ಗೀತಾ ಜೈಸ್ವಾಲ್ (55), ಧರ್ಮೇಂದ್ರ ಜೈಸ್ವಾಲ್ (25), ಪ್ರಿನ್ಸ್ ಜೈಸ್ವಾಲ್ (30) ಹಾಗೂ ಸಾಗರ್ ಜಿಲ್ಲೆಯ ಸೋಹೆಬ್ ಖಾನ್(18) ಸಾವನ್ನಪ್ಪಿದ್ದಾರೆ. ಅಜಯ್ ಜೈಸ್ವಾಲ್, ಬಾಲಕೃಷ್ಣ ಪ್ರಜಾಪತಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಅಮನ್ ಮಿಶ್ರಾ, ಇಂದು (ಶುಕ್ರವಾರ) ನಿಗದಿಯಾಗಿದ್ದ ಸಿಎಂ ಮೋಹನ್ ಯಾದವ್ ಅವರ ಕಾರ್ಯಕ್ರಮಕ್ಕಾಗಿ ಟೆಂಟ್‌ಗೆ ಬೇಕಾದ ಉಪಕರಣಗಳನ್ನು ಇಳಿಸಲು ಟ್ರಕ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಎಸ್‌ಯುವಿ ಟ್ರಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಹೇಳಿದ್ದಾರೆ.
ಹಾಗೆಯೇ ಎಸ್‌ಯುವಿ ವಾಹನದಲ್ಲಿದ್ದ ಮೂವರು ಗಾಯಗೊಂಡು ಪರಿಣಾಮ ರೇವಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಕರೆದೊಯ್ಯಲಾಯಿತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರು ಲಾರಿಯಿಂದ ಉಪಕರಣ ಇಳಿಸುತ್ತಿದ್ದ ವ್ಯಕ್ತಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಅಪಘಾತದ ಬಗ್ಗೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಟ್ವೀಟ್ ಮಾಡಿದ್ದು, ನಿಗದಿಯಾಗಿದ್ದ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಮೃತರಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)