ಪಾಕಿಸ್ತಾನದಲ್ಲಿದ್ರೆ ನಮ್ಮ ಮನೆಯಲ್ಲಿದ್ದಂತೆ ಭಾಸವಾಗುತ್ತೆ: ರಾಹುಲ್​ ಗಾಂಧಿ ಆಪ್ತ ಸ್ಯಾಮ್​ ಪಿತ್ರೋಡಾ ಹೇಳಿಕೆ! Sam Pitroda

Sam Pitroda
Published on

Sam Pitroda : ಸದಾ ವಿವಾದಗಳಿಂದಲೇ ಸುದ್ದಿಯಾಗುವ ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಹುಲ್ ಗಾಂಧಿಯವರ ಆಪ್ತ ಸಹಾಯಕ ಸ್ಯಾಮ್​ ಪಿತ್ರೋಡಾ, ಪಾಕಿಸ್ತಾನದಲ್ಲಿದ್ದರೆ ನಮ್ಮ ಮನೆಯಲ್ಲಿ ಇದ್ದಂತೆ ಭಾಸವಾಗುತ್ತದೆ ಎನ್ನುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಐಎಎನ್‌ಎಸ್‌ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಪಿತ್ರೋಡಾ, ನೆರೆಹೊರೆ ರಾಷ್ಟ್ರದಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನೆಯ ಸಮಸ್ಯೆಗಳ ಹೊರತಾಗಿಯೂ, ಭಾರತವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗೆ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ನಮ್ಮ ವಿದೇಶಿ ನೀತಿ ಖಂಡಿತವಾಗಿ ನಮ್ಮ ನರೆಹೊರೆಯವರ ಮೇಲೆ ಮೊದಲು ಗಮನವಿಡಬೇಕು. ನಮ್ಮ ನೆರೆಹೊರೆಯವರೊಂದಿಗಿನ ಸಂಬಂಧವನ್ನು ನಾವು ನಿಜವಾಗಿಯೂ ಗಣನೀಯವಾಗಿ ಸುಧಾರಿಸಬಹುದೇ? ಅವರೆಲ್ಲ ಕಷ್ಟಕರ ಸನ್ನಿವೇಶದಲ್ಲಿ ಸಾಗುತ್ತಿದ್ದಾರೆ ಮತ್ತು ಅವರೊಂದಿಗೆ ಜಗಳದ ಅವಶ್ಯಕತೆ ಇಲ್ಲ. ಅಲ್ಲಿ ಹಿಂಸೆ ಮತ್ತು ಭಯೋತ್ಪಾದನೆಯ ಸಮಸ್ಯೆಗಳಿವೆ ಆದರೆ, ನಮ್ಮ ನೆರೆಹೊರೆಯಲ್ಲಿ ಒಂದು ಸಾಮಾನ್ಯ ಜೀನ್ ಪೂಲ್ ಇದೆ ಎಂದು ಪಿತ್ರೋಡಾ ಹೇಳಿದರು.

ಇದೇ ಸಂದರ್ಭದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಈ ಹಿಂದೆ ಭೇಟಿ ನೀಡಿದ ಕ್ಷಣಗಳನ್ನು ನೆನಪಿಸಿಕೊಂಡ ಪಿತ್ರೋಡಾ, ಅಂತಹ ಪ್ರವಾಸಗಳ ಸಮಯದಲ್ಲಿ ತಾವು ಯಾವಾಗಲೂ ಮನೆಯಲ್ಲಿರುವಂತೆ ಭಾಸವಾಗುತ್ತಿತ್ತು ಎಂದಿದ್ದಾರೆ.

ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ. ಇಲ್ಲಿ ನಾನೊಂದು ವಿಚಾರವನ್ನು ಹೇಳಲೇಬೇಕು. ಪಾಕಿಸ್ತಾನದಲ್ಲಿದ್ದಾಗ ನನ್ನ ಮನೆಯಲ್ಲೇ ಇದ್ದ ಹಾಗೇ ಫೀಲ್​ ಆಯಿತು. ನಾನು ಬಾಂಗ್ಲಾದೇಶ, ನೇಪಾಳಕ್ಕೂ ಭೇಟಿ ನೀಡಿದ್ದೆ. ಅಲ್ಲೆಲ್ಲೂ ನನಗೆ ವಿದೇಶ ಎಂಬಂತೆ ಭಾಸವಾಗಲೇ ಇಲ್ಲ. ಅವರೆಲ್ಲ ನನ್ನಂತೆಯೇ ಕಾಣುತ್ತಿದ್ದರು, ನನ್ನಂತೆಯೇ ಮಾತನಾಡುತ್ತಿದ್ದರು, ನನ್ನ ಹಾಡುಗಳನ್ನು ಇಷ್ಟಪಡುತ್ತಿದ್ದರು ಮತ್ತು ನನ್ನ ಆಹಾರಗಳನ್ನು ತಿನ್ನುತ್ತಿದ್ದರು. ನಾವೆಲ್ಲ ಶಾಂತಿ ಮತ್ತು ಸೌಹಾರ್ದತೆಯಿಂದ ಜೀವಿಸುವುದನ್ನು ಕಲಿಯಬೇಕೆಂದು ಪಿತ್ರೋಡಾ ಅವರು ಹೇಳಿದ್ದಾರೆ.

ಅಂದಹಾಗೆ, ಯುವಕರ ನೇತೃತ್ವದ ಪ್ರತಿಭಟನೆಗಳ ನಂತರ ನೇಪಾಳ ಮತ್ತು ಬಾಂಗ್ಲಾದೇಶಗಳು ಆಡಳಿತದಲ್ಲಿ ಬದಲಾವಣೆಗಳನ್ನು ಕಂಡರೆ, 2022 ರಲ್ಲಿ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಸ್ಥಾನದಿಂದ ಹಠಾತ್ತನೆ ಪದಚ್ಯುತಗೊಳಿಸಿದ ನಂತರ ಪಾಕಿಸ್ತಾನವು ಸಹ ಹಿಂಸಾಚಾರದ ಅವಧಿಯನ್ನು ಕಂಡಿತು. ನೆರೆಯ ದೇಶದಲ್ಲಿ ಹಿಂಸಾಚಾರ ಸಾಮಾನ್ಯವಾಗಿದೆ. ಆದರೆ, ಪಿತ್ರೋಡಾ ಅವರು ಶಾಂತಿಯ ಪ್ರತೀಕವಾಗಿರುವ ಭಾರತಕ್ಕೆ ಸಲಹೆ ನೀಡುತ್ತಿರುವುದು ನಿಜಕ್ಕೂ ಹಾಸ್ಯಸ್ಪದವಾಗಿದೆ.

ಕುತೂಹಲಕಾರಿ ಸಂಗತಿ ಏನೆಂದರೆ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಮೃತಪಟ್ಟ ಕೆಲವೇ ತಿಂಗಳುಗಳಲ್ಲಿ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸಲು ಪಿತ್ರೋಡಾ ಕರೆ ನೀಡಿದ್ದಾರೆ. ಈ ಭೀಕರ ದಾಳಿಯ ಹಿಂದೆ ಪಾಕ್​ ಕೈವಾಡ ಇರುವುದು ಜಗಜ್ಜಾಹೀರಾಗಿದೆ. ಪಹಲ್ಗಾಮ್​ ದಾಳಿಗೆ ಪ್ರತೀಕಾರವಾಗಿ ಭಾರತ, ಆಪರೇಷನ್​ ಸಿಂಧೂರ ಕಾರ್ಯಾಚರಣೆ ನಡೆಸಿ, ನೂರಾರು ಉಗ್ರರನ್ನು ಸೆದೆಬಡಿದಿದೆ. ಅಂದಿನಿಂದ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಪಿತ್ರೋಡಾ ಅವರು ಪಾಕಿಸ್ತಾನದ ಜೊತೆ ಸಂಬಂಧ ಸುಧಾರಣೆಗೆ ಕರೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಪಿತ್ರೋಡಾ ಅವರ ಹೇಳಿಕೆಗೆ ಬಿಜೆಪಿ ಖಡಕ್​ ಪ್ರತಿಕ್ರಿಯೆ ನೀಡಿದೆ. 166 ಜನರ ಸಾವಿಗೆ ಕಾರಣವಾದ 26/11 ಮುಂಬೈ ದಾಳಿಯ ನಂತರ ಯುಪಿಎ ಪ್ರತಿಕ್ರಿಯೆಗೂ ಪಿತ್ರೋಡಾ ಹೇಳಿಕೆಗೂ ಸಂಬಂಧವಿದೆ. ರಾಹುಲ್ ಗಾಂಧಿಯವರ ನೀಲಿ ಕಣ್ಣಿನ ಹುಡುಗ ಸ್ಯಾಮ್ ಪಿತ್ರೋಡಾ ಪಾಕಿಸ್ತಾನದಲ್ಲಿ 'ಮನೆಯಲ್ಲಿರುವಂತೆ ಭಾಸವಾಗುತ್ತಿದೆ' ಎಂದು ಹೇಳುತ್ತಾರೆ. ಈ ಹೇಳಿಕೆ ನೋಡಿದರೆ, 26/11ರ ದಾಳಿಯು ನಂತರವೂ ಸಂದಿನ ಯುಪಿಎ ಸರ್ಕಾರ, ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net