ನ್ಯೂಸ್

ಯುದ್ಧಪೀಡಿತ ಅಫ್ಘಾನಿಸ್ತಾನ ಮೇಲೆ ಮಾರಕ ಕರೊನಾ ವೈರಸ್ ದಾಳಿ

 ನವದೆಹಲಿ: ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಇದುವರೆಗೆ 13,036 ಕರೊನಾ ಕೇಸುಗಳು ದಾಖಲಾಗಿದ್ದು, 235 ಮಂದಿ ಮೃತಪಟ್ಟಿದ್ದಾರೆ. ಈ ಸರ್ಕಾರಿ ಅಂಕಿ-ಅಂಶಗಳ ಬಗ್ಗೆ ಅನೇಕರಲ್ಲಿ ಅನುಮಾನಗಳಿವೆ. ದೇಶದಲ್ಲಿ ಮೊದಲ ಕೇಸು ಹೆರಾತ್ ಪ್ರಾಂತ್ಯದಲ್ಲಿ ಫೆ. 24ರಂದು ಬೆಳಕಿಗೆ ಬಂದಿತ್ತು. ಮಾರ್ಚ್ ತಿಂಗಳಲ್ಲಿ ಹೆರಾತ್ ಪ್ರಾಂತ್ಯದ ಇಸ್ಲಾಂ ಖಲಾ ಗಡಿಯಲ್ಲಿ 1,50,000 ಆಫ್ಘನ್ನರು ಇರಾನ್​ನಿಂದ ಮರಳಿದರು. ನಿತ್ಯವೂ 1000ಕ್ಕೂ ಹೆಚ್ಚು ಮಂದಿ ಗಡಿ ದಾಟಿ ದೇಶಕ್ಕೆ ಬಂದರು. ಮಾರ್ಚ್ ಮತ್ತು ಏಪ್ರಿಲ್ ನಡುವೆ ಹೆರಾತ್ ಪ್ರಾಂತ್ಯದಲ್ಲಿ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದವು. ಚಮನ್ ಮತ್ತು ಟೋರ್ಖಾಮ್ ಗಡಿಗಳಲ್ಲಿ, 60,000ಕ್ಕೂ ಹೆಚ್ಚು ಆಫ್ಘನ್ನರು ಮೂರು ದಿನಗಳ ಅಂತರದಲ್ಲಿ ಪಾಕಿಸ್ತಾನದಿಂದ ಮರಳಿದ್ದರು. ಈ ವಲಸಿಗರಿಂದಾಗಿಯೇ ದೇಶಾದ್ಯಂತ ಕೇಸುಗಳು ದ್ವಿಗುಣಗೊಂಡಿವೆ ಎಂದು ಹೇಳಲಾಗುತ್ತಿದೆ.

ಮುಂದಿನ ದಿನಗಳಲ್ಲಿ ದೇಶಾದ್ಯಂತ ಕರೊನಾ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಲಸೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಸುಮಾರು 35 ಮಿಲಿಯನ್ ಇರುವ ಜನಸಂಖ್ಯೆಯಲ್ಲಿ ಶೇ. 80 ಮಂದಿಗೆ ಕರೊನಾ ಸೋಂಕು ತಗುಲಬಹುದು ಎನ್ನುವುದು ಸಂಸ್ಥೆಯ ಅಭಿಪ್ರಾಯ. ಸರ್ಕಾರದ ನಿಯಂತ್ರಣ ಇಲ್ಲದ ಪ್ರದೇಶಗಳಲ್ಲಿ ಸಂಘರ್ಷಗಳು ತೀವ್ರಗೊಳ್ಳುತ್ತಿದ್ದು, ಅಲ್ಲಿ ಆರೋಗ್ಯಾಧಿಕಾರಿಗಳ ಪ್ರವೇಶಕ್ಕೂ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಶೇ. 30ಕ್ಕಿಂತಲೂ ಹೆಚ್ಚಿನ ಕಡೆ ಕೋವಿಡ್ ಪರೀಕ್ಷೆಗಳೇ ನಡೆದಿಲ್ಲ. ಜನವರಿಯಿಂದ ಈವರೆಗೆ ಸ್ಥಾಪಿಸಲಾದ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ನಿತ್ಯಕ್ಕೆ 100-150 ಪರೀಕ್ಷೆಗಳನ್ನು ನಡೆಸಬಹುದಾಗಿದ್ದರೂ, ತರಬೇತಿ ಪಡೆದ ಲ್ಯಾಬ್ ತಂತ್ರಜ್ಞರ ಕೊರತೆ ಕಾಡುತ್ತಿದೆ. ಹೆಚ್ಚಿನ ಪರೀಕ್ಷಾ ಕಿಟ್​ಗಳು ತುರ್ತಾಗಿ ಅಗತ್ಯವಿದೆ. ಗಂಭೀರ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಅಫ್ಘಾನಿಸ್ತಾನ ಅತ್ಯಂತ ಸೀಮಿತ ಮೂಲಸೌಕರ್ಯ ಹೊಂದಿದೆ ಎನ್ನುವುದೂ ಕಳವಳಕಾರಿ ವಿಷಯ. ಅಫ್ಘನ್ನರ ಜೀವಿತಾವಧಿ 50 ವರ್ಷಗಳಾಗಿದ್ದು ಮತ್ತು ಹೆಚ್ಚಿನ ಜನಸಂಖ್ಯೆಯು ಕ್ಷಯ, ಎಚ್​ಐವಿ-ಏಡ್ಸ್, ಅಪೌಷ್ಟಿಕತೆ, ಕ್ಯಾನ್ಸರ್, ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳಿಂದ ನರಳುತ್ತಿದೆ. ಪರಿಸರ ಮಾಲಿನ್ಯ ಕೂಡ ಅನಾರೋಗ್ಯಕ್ಕೆ ಮತ್ತೊಂದು ಪ್ರಮುಖ ಕಾರಣ.

ಸೈಕಲ್​ನಲ್ಲಿ ಜಾಗೃತಿ: ಕರೊನಾ ವೈರಾಣು ತಡೆ ಕುರಿತು ಸೈಕ್ಲಿಸ್ಟ್ ಇದ್ರಿಸ್ ಸ್ಯಾವಾಶ್ ಎಂಬ ಯುವಕ ಹಳ್ಳಿ ಹಳ್ಳಿಗಳಿಗೆ ಸೈಕಲ್​ನಲ್ಲಿ ತೆರಳಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾನೆ. ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೈಕಲ್ ಯಾತ್ರೆ ಕೈಗೊಂಡಿರುವ ಸ್ಯಾವಾಶ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಿದ್ದಾನೆ. ದೇಶದಲ್ಲಿ ಕರೊನಾ ಕೇಸುಗಳು ಪತ್ತೆಯಾದ ಬಳಿಕ ನಾನು ಕೆಲವು ಹಳ್ಳಿಗಳಿಗೆ ಹೋಗಿದ್ದೆ ಮತ್ತು ಜನರಿಗೆ ಈ ಬಗ್ಗೆ ಏನೂ ಮಾಹಿತಿ ಇಲ್ಲ ಎಂದು ಗೊತ್ತಾದಾಗ ಆಶ್ಚರ್ಯವಾಗಿತ್ತು. ಹೀಗಾಗಿ, ಸೈಕಲ್ ಮೂಲಕ ಹಳ್ಳಿಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಸೈಕಲ್ ಯಾತ್ರೆ ಕೈಗೊಂಡಿದ್ದೇನೆ ಎನ್ನುತ್ತಾನೆ ಸ್ಯಾವಾಶ್.

ಸಹಕಾರ ತತ್ವಕ್ಕೆ ನಾಂದಿ?: ಯುದ್ಧಪೀಡಿತ ಮತ್ತು ಸಂಪನ್ಮೂಲ ಕೊರತೆ ಎದುರಿಸುತ್ತಿರುವ ಅಫ್ಘಾನಿಸ್ತಾನ ಮೇಲೆ ಕೋವಿಡ್ -19 ಬಿಕ್ಕಟ್ಟು ವಿನಾಶಕಾರಿ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ರ್ಚಚಿಸಲಾಗುತ್ತಿದೆ. ಆದಾಗ್ಯೂ, ಈ ದೇಶದಲ್ಲಿ ದಶಕಗಳಿಂದ ನಡೆಯುತ್ತಿರುವ ಹೋರಾಟ ಬದಿಗಿಟ್ಟು, ಈ ಸಾಂಕ್ರಾಮಿಕದ ಕಾರಣದಿಂದಾಗಿ ಸಕಾರಾತ್ಮಕ ಬದಲಾವಣೆ ತರಲು ಸ್ಥಳೀಯ ಸರ್ಕಾರ ಮತ್ತು ತಾಲಿಬಾನ್ ನಾಯಕರು ಯತ್ನಿಸಬಹುದು. ತಾಲಿಬಾನ್ ನಿಯಂತ್ರಣದಲ್ಲಿರುವ ದೇಶದ ಕೆಲವು ಭಾಗಗಳಲ್ಲಿ ಜನರಿಗೆ ಚಿಕಿತ್ಸೆ ಒದಗಿಸಬೇಕೆಂದರೆ ತಾಲಿಬಾನ್ ಸಹಕಾರ ಬೇಕು. ಕೆಲವೆಡೆ ತಾಲಿಬಾನ್​ನಿಂದ ಸಹಕಾರ ಸಿಕ್ಕಿರುವ ಬಗ್ಗೆ ವರದಿಗಳಿವೆ. ಸಂಘರ್ಷದಲ್ಲಿ ತೊಡಗಿಸಿಕೊಂಡಿರುವ ಮಂದಿ ತಮ್ಮ ಬಂದೂಕುಗಳನ್ನು ಮೌನಗೊಳಿಸಲು ಮತ್ತು ದಶಕಗಳ ಹಳೆಯ ಹಗೆತನವನ್ನು ತಾತ್ಕಾಲಿಕವಾಗಿ ಬದಿಗಿಡಲು ಇದು ಯೋಗ್ಯ ಸನ್ನಿವೇಶ. ಭವಿಷ್ಯದಲ್ಲಿ ಸಹಕಾರ ತತ್ವ ಪಾಲಿಸಲು ಈ ನಡೆ ಅಡಿಪಾಯ ಒದಗಿಸುವ ಸಾಮರ್ಥ್ಯ ಹೊಂದಿದೆ. ಕೋವಿಡ್ -19 ಸಾಂಕ್ರಾಮಿಕವು ಅಫ್ಘಾನಿಸ್ತಾನದಲ್ಲಿ ಹಿಂಸಾಚಾರವನ್ನು ನಿಲ್ಲಿಸದಿದ್ದಲ್ಲಿ, ಶಾಂತಿ ನೆಲೆಗೊಳಿಸುವ ಮತ್ತೊಂದು ಅವಕಾಶವೂ ವ್ಯರ್ಥವಾಗಲಿದೆ.

ಸಿಂಗಾಪುರ ಆರ್ಥಿಕತೆಗೆ ಭಾರಿ ಪೆಟ್ಟು

ಕರೊನಾ ತುರ್ತು ಪರಿಸ್ಥಿತಿಯಿಂದಾಗಿ ಸಿಂಗಾಪುರ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಉಂಟಾಗಲಿದ್ದು, ಆರ್ಥಿಕತೆ ಶೇ.7 ಕುಸಿತ ಕಾಣಲಿದೆ. ಸ್ವಾತಂತ್ರಾ್ಯ ನಂತರ ಇಂಥದ್ದೊಂದು ಆರ್ಥಿಕ ಬಿಕ್ಕಟ್ಟಿಗೆ ದೇಶ ಸಾಕ್ಷಿಯಾಗಿರಲಿಲ್ಲ ಎಂದು ಹೇಳಲಾಗಿದೆ. ಸಿಂಗಾಪುರದ ಉಪ ಪ್ರಧಾನಿ ಸಿಂಗಾಪುರ ಅಭಿವೃದ್ಧಿಗಾಗಿ 33 ಬಿಲಿಯನ್ ಪ್ಯಾಕೇಜ್ ಘೊಷಿಸಿ, ಭವಿಷ್ಯದ ಕುರಿತೂ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ, ಯುರೋಪ್ ಮತ್ತು ಚೀನಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ರಫ್ತಿನ ಬೇಡಿಕೆ ಕುಗ್ಗಿದೆ. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಕೂಡ ಸ್ಥಗಿತಗೊಂಡಿರುವುದರಿಂದ ಸಿಂಗಾಪುರ ಪ್ರವಾಸೋದ್ಯಮವೂ ಬಿಕ್ಕಟ್ಟಿಗೆ ಸಿಲುಕಿದೆ. ಸದ್ಯ ಸಿಂಗಾಪುರದಲ್ಲಿ 33249 ಕರೊನಾ ಕೇಸುಗಳು ದೇಶದಲ್ಲಿ ಪತ್ತೆಯಾಗಿದ್ದರೆ, 17276 ಮಂದಿ ಗುಣಮುಖರಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಕರೊನಾ ವೈರಾಣುಗೆ ಬಲಿಯಾದವರ ಸಂಖ್ಯೆ ಕೇವಲ 23 ಮಾತ್ರ!