ಗುರುಗ್ರಾಮ: ಯುವಜನತೆ ಎದುರಿಸುತ್ತಿರುವ ಕುಂದುಕೊರತೆಗಳ ಬಗ್ಗೆ ವಿಶೇಷ ಗಮನಹರಿಸಲು ಫರಿದಾಬಾದ್ ಪೊಲೀಸರು ಪೊಲೀಸ್ ತಂಡವನ್ನು ರಚಿಸಿದ್ದಾರೆ.
ಡ್ರಗ್ಸ್ ವ್ಯಸನ ಸೇರಿದಂತೆ ಯುವಜನತೆಗೆ ಸಂಬಂಧಿಸಿದ ಅಪರಾಧಗಳನ್ನು ಪರಿಶೀಲಿಸಲು ಈ ಟೀನೇಜ್ ಪೊಲೀಸ್ ಅಥವಾ ಟಿಎಪಿ ಸ್ಥಾಪಿಸಲಾಗಿದೆ.
14 ರಿಂದ 19 ವರ್ಷ ವಯಸ್ಸಿನ ಯುವಜನತೆಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುವುದು ಇಂದಿನ ಅಗತ್ಯವಾಗಿದೆ ಎಂದು ಫರಿದಾಬಾದ್‌ನ ನೂತನ ಪೊಲೀಸ್ ಆಯುಕ್ತ ಒ.ಪಿ.ಸಿಂಗ್ ಹೇಳಿದರು.
ಸಿಂಗ್ ಪ್ರಕಾರ, ಹದಿಹರೆಯದವರು ಸಾಮಾಜಿಕ ಜಾಲತಾಣ ಮತ್ತು ಇಂಟರ್ನೆಟ್ಗೆ ಒಡ್ಡಿಕೊಳ್ಳುವುದರಿಂದ ಸಮಾಜ ವಿರೋಧಿ ಚಟುವಟಿಕೆಗಳು ನಡೆಯುವ ಅಪಾಯ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜವಾಬ್ದಾರಿ ಹೆಚ್ಚಿರುವುದರಿಂದ ಎಸಿಪಿ ಶ್ರೇಣಿಯ ಅಧಿಕಾರಿಯೊಬ್ಬರು ಹೊಸ ವಿಭಾಗದ ಮುಖ್ಯಸ್ಥರಾಗಿರುತ್ತಾರೆ ಎಂದು ಅವರು ಹೇಳಿದರು.
ಶಾಲಾ ಪ್ರಾಧಿಕಾರಗಳು, ಪಾಲಕರ ಸಂಸ್ಥೆಗಳು ಮತ್ತು ಯುವಜನತೆಯ ಸಮಸ್ಯೆಗಳ ಕುರಿತು ವ್ಯವಹರಿಸುತ್ತಿರುವ ಎನ್ಜಿಒಗಳ ನಿಕಟ ಸಮನ್ವಯದಡಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ತಿಳಿಸಿದರು.
ಶಾಲಾ ಮುಖಂಡರು ಮತ್ತು ಕ್ರೀಡಾ ಮುಖಂಡರೊಂದಿಗೆ ಸಭೆ ನಡೆಸಿ, ಅವರು ಮತ್ತು ಅವರ ವಯಸ್ಸಿನ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಿಳಿದುಕೊಳ್ಳುವಲ್ಲಿ ಈ ಟಿಎಪಿ ಪೊಲೀಸರು ಕೆಲಸ ಮಾಡುತ್ತಾರೆ. ವೆಬ್ ಸಭೆ ನಡೆಸುವ ಮೂಲಕ ಯುವಜನತೆ ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಇಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದರೆ ಹರಿಯಾಣದ ಇತರ ಜಿಲ್ಲೆಗಳಲ್ಲಿ ಪ್ರಾಯೋಗಿಕ ಯೋಜನೆ ಪರಿಚಯಿಸಲಾಗುವುದು ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕ ಮನೋಜ್ ಯಾದವ ತಿಳಿಸಿದ್ದಾರೆ. " ಯುವಜನತೆ ಸಾಕಷ್ಟು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆ ಎದುರಿಸುತ್ತಾರೆ. ಒತ್ತಡಕ್ಕೊಳಗಾಗುವ ಯುವಕರು ಅಪರಾಧಕ್ಕೆ ಗುರಿಯಾಗಬಹುದು. ಹರಿಯಾಣ ಪೊಲೀಸರು ಯುವಜನತೆಯನ್ನು ರಕ್ಷಿಸುವಲ್ಲಿ ಬದ್ಧರಾಗಿದ್ದಾರೆ ಎಂದು ಯಾದವ್ ತಿಳಿಸಿದರು.