Fake Doctor: ಬಾಲಿವುಡ್ ನಟ ಸಂಜಯ್ ದತ್ ಅಭಿನಯದ ಮುನ್ನಾಬಾಯಿ ಎಂಬಿಬಿಎಸ್ ಸಿನಿಮಾವನ್ನು ನೆನಪಿಸುವಂತೆ, 50ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡಿದ್ದ ನಕಲಿ ವೈದ್ಯನೊಬ್ಬನನ್ನು ಅಸ್ಸಾಂನ ಸಿಲ್ಚಾರ್ನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಆರೋಪಿ ಪುಲೋಕ್ ಮಲಾಕರ್, ಸಿಲ್ಚಾರ್ನ ಪ್ರಸಿದ್ದ ಸ್ತ್ರೀರೋಗ ತಜ್ಞ ಎಂದು ಗುರುತಿಸಿಕೊಂಡಿದ್ದು, 2 ಖಾಸಗಿ ಆಸ್ಪತ್ರೆಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದನು ಎನ್ನಲಾಗಿದೆ. ಆಪರೇಷನ್ ಥಿಯೇಟರ್ನಲ್ಲಿ ಕೆಲಸ ಮಾಡುವಾಗಲೇ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿಲ್ಚಾರ್ನ ಹಿರಿಯ ಪೊಲೀಸ್ ಅಧಿಕಾರಿ ನುಮಲ್ ಮಹಾಟ್ಟಾ, "ನಮಗೆ ಸಿಕ್ಕ ಮಾಹಿತಿ ಆಧರಿಸಿ ಅವರ ಬಗ್ಗೆ ತನಿಖೆ ಮಾಡಿದ್ದೆವು. ಎಲ್ಲಾ ದಾಖಲೆಗಳ ಪರಿಶೀಲನೆ ಬಳಿಕ ಅವರ ಎಲ್ಲಾ ದಾಖಲೆಗಳು ನಕಲಿ ಎಂದು ತಿಳಿದು ಬಂದಿದೆ. ಹಲವು ವರ್ಷಗಳಿಂದ ಈ ಕೆಲಸ ಮಾಡ್ತಿದ್ದರು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದೇವೆ" ಎಂದು ಹೇಳಿದ್ದಾರೆ.
ಅಸ್ಸಾಂನ ಶ್ರೀಭೂಮಿ ನಿವಾಸಿಯಾಗಿರುವ ಮಲಾಕರ್ನನ್ನು ಸೋಮವಾರ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನಂತರ ಕೋರ್ಟ್ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಅಸ್ಸಾಂನಲ್ಲಿ ನಕಲಿ ವೈದ್ಯರ ಕಾರ್ಯಾಚರಣೆ
ಅಸ್ಸಾಂನಲ್ಲಿ ಸಿಎಂ ಹಿಮಂತ್ ಶರ್ಮಾ ನೇತೃತ್ವದ ಸರ್ಕಾರ ಈ ವರ್ಷದ ಜನವರಿಯಲ್ಲಿ ಆ್ಯಂಟಿ ಕ್ವಾಕರಿ ವಿಜಿಲೆನ್ಸ್ ಸೆಲ್ ಸ್ಥಾಪಿಸಿ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಇದು ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ. ಈವರೆಗೆ ಈ ವಿಭಾಗ 10ಕ್ಕೂ ಹೆಚ್ಚು ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದೆ. (ಏಜೆನ್ಸೀಸ್)