ನವದೆಹಲಿ: ಕರೊನಾ ವೈರಸ್ ಭೀತಿಯ ನಡುವೆ ದೆಹಲಿಯಲ್ಲಿ ಧಾರ್ಮಿಕ ಸಭೆ ನಡೆಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ, ಭಾರತದಲ್ಲಿ ಕರೊನಾ ವೈರಸ್ ವೇಗವಾಗಿ ಹರಡಲು ಕಾರಣಕರ್ತರು ಎಂಬ ಆರೋಪವನ್ನು ತಬ್ಲಿಘಿ ಜಮಾತ್ ಹೊತ್ತಿಕೊಂಡಿತು. ಇದಲ್ಲದೆ, ಆಸ್ಪತ್ರೆಯಿಂದ ತಬ್ಲಿಘಿ ರೋಗಿಯೊಬ್ಬ ಪರಾರಿಯಾಗಿದ್ದು, ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ ಸೇರಿ ಅನೇಕ ಪ್ರಕರಣಗಳು ವರದಿಯಾದವು.
ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. "ಪೀಪಲ್ಸ್ ವಾಯ್ಸ್" ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಸದ್ಗುರು ಅವರ ಫೋಟೋದೊಂದಿಗೆ ಇಂಗ್ಲಿಷ್ ಅಡಿಬರಹವಿದ್ದು, ಅದರ ಸಾರ ಹೀಗಿದೆ... ಮಾರ್ಚ್ನಲ್ಲಿ ನಡೆದ ಸದ್ಗುರು ಕಾರ್ಯಕ್ರಮದಲ್ಲಿ 150 ವಿದೇಶಿಯರು ಭಾಗವಹಿಸಿದ್ದರು. ಈಗ ಅವರೆಲ್ಲ ಇಶಾ ಯೋಗ ಫೌಂಡೇಶನ್ನಲ್ಲಿ ಕ್ವಾರಂಟೈನ್ನಲ್ಲಿ ಇದ್ದಾರೆ. ಸಾವಿರಕ್ಕೂ ಅಧಿಕ ಪ್ರಕರಣಗಳು ತಮಿಳುನಾಡಿನಲ್ಲಿ ದೃಢಪಟ್ಟಿವೆ. ಆದರೆ, ಮಾಧ್ಯಮಗಳು ತಬ್ಲಿಘಿ ಜಮಾತ್ ಮೇಲೆ ಮಾತ್ರ ಗಮನಹರಿಸಿವೆ. ಸರ್ಕಾರ ಮತ್ತು ಮಾಧ್ಯಮಗಳ ಇಸ್ಲಮಾಫೋಬಿಯಾ ಬಹಿರಂಗವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಆ ಫೋಸ್ಟ್ ನೀವಿಲ್ಲಿ ಕಾಣಬಹುದಾಗಿದೆ.
ಆದರೆ, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಫ್ಯಾಕ್ಟ್ಚೆಕ್ ನಡೆಸಿದ್ದು, ಅಸಲಿ ವಿಚಾರ ಬಹಿರಂಗವಾಗಿದೆ. ವೈರಲ್ ಪೋಸ್ಟ್ ಅಕ್ಷರಶಃ ನಕಲಿ ಎಂಬುದು ತಿಳಿದುಬಂದಿದೆ. ಫೆ.21ರ ಮಹಾಶಿವರಾತ್ರಿಯಂದು ಇಶಾ ಫೌಂಡೇಶನ್ ವತಿಯಿಂದ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಕೆಲವರು ವಿದೇಶಿಗರು ಸಹ ಪಾಲ್ಗೊಂಡಿದ್ದರು. ಆದರೆ, ಯಾರೊಬ್ಬರು ಸಹ ಕೋವಿಡ್-19 ರೋಗ ಲಕ್ಷಣಗಳಿಂದ ಇಶಾ ಯೋಗ ಕೇಂದ್ರದಲ್ಲಿ ಕ್ವಾರಂಟೈನ್ನಲ್ಲಿ ಇಲ್ಲ.
ಇಂಡಿಯಾ ಟುಡೆ ಫ್ಯಾಕ್ಟ್ಚೆಕ್ ತಂಡ ಇಶಾ ಫೌಂಡೇಶನ್ ಅನ್ನು ಸಂಪರ್ಕಿಸಿದ್ದು, ಮಹಾಶಿವರಾತ್ರಿಯ ಬಳಿಕ ಯಾವುದೇ ಕಾರ್ಯಕ್ರಮ ಆಯೋಜಿಸಿಲ್ಲ ಎಂದು ಖಚಿತಪಡಿಸಿದೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮಿ ಅಹ ಅದೇ ಪೋಸ್ಟ್ ಅನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದರು. ಆದರೆ, ವೈರಲ್ ಸುದ್ದಿಯ ವಿಚಾರವನ್ನು ಇಶಾ ಫೌಂಡೇಶನ್ ತಳ್ಳಿಹಾಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಶಾ ಫೌಂಡೇಶನ್, ಟ್ವೀಟ್ ಮಾಡುವ ಮುನ್ನ ಸಾಕಷ್ಟು ತಿಳಿದುಕೊಳ್ಳಿ. ಸದ್ಯ ಆತ್ಮಾವಲೋಕನ ಮಾಡಿಕೊಳ್ಳಲು ಲಾಕ್ಡೌನ್ ಒಳ್ಳೆಯ ಸಮಯವಾಗಿದೆ. ಮಹಾಶಿವರಾತ್ರಿಯ ನಂತರ ಈವರೆಗೆ ಯಾವುದೇ ಕಾರ್ಯಕ್ರಮ ಆಯೋಜಿಸಿಲ್ಲ. ಇಶಾ ಯೋಗ ಕೇಂದ್ರದಿಂದ ಯಾವುದೇ ಕರೊನಾ ರೋಗ ಲಕ್ಷಣ ವರದಿಯಾಗಿಲ್ಲ. ಇದು ಕೊಯಮತ್ತೂರೂ ಜಿಲ್ಲಾಧಿಕಾರಿಯಿಂದಲೂ ಖಚಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಕೊಯಮತ್ತೂರು ಜಿಲ್ಲಾಧಿಕಾರಿಯನ್ನು ಫ್ಯಾಕ್ಟ್ಚೆಕ್ ತಂಡ ಭೇಟಿಯಾಗಿದ್ದು, ಇಶಾ ಫೌಂಡೇಶನ್ ಅನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ. ಅಲ್ಲಿ ಯಾವುದೇ ಕರೊನಾ ಪಾಸಿಟಿವ್ ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಥಿರು ಕೆ ರಾಜಮಣಿ ಅವರು ತಿಳಿಸಿದ್ದಾರೆ. ಇವರ ಹೇಳಿಕೆಯನ್ನು ಅಲ್ಲಿನ ಸ್ಥಳೀಯ ಮಾಧ್ಯಮಗಳು ಸಹ ವರದಿ ಮಾಡಿವೆ.
ಇನ್ನು ವೈರಲ್ ಪೋಸ್ಟ್ಗೆ ಬಳಸಿರುವ ಫೋಟೋ ಕೂಡ ಹಳೆಯದಾಗಿದೆ. ಇದನ್ನು ಇಶಾ ಫೌಂಡೇಶನ್ ವೆಬ್ಸೈಟ್ಗೆ 2019ರ ಜನವರಿ 22ರಲ್ಲಿ ಬಳಸಲಾಗಿದೆ.
ಕೊನೆಗೆ ತಿಳಿಯುವುದೇನೆಂದರೆ ಸದ್ಗುರು ಅವರ ಕಾರ್ಯಕ್ರಮದಿಂದ ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು ತಮಿಳುನಾಡಿನಲ್ಲಿ ಪತ್ತೆಯಾಗಿವೆ ಹಾಗೂ ಇಶಾ ಯೋಗ ಕೇಂದ್ರದಲ್ಲಿ 150 ವಿದೇಶಿಗರು ಕ್ವಾರಂಟೈನ್ನಲ್ಲಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ಅಪಪ್ರಚಾರ ನಡೆಸುವ ದುರುದ್ದೇಶ ವೈರಲ್ ಪೋಸ್ಟ್ನಲ್ಲಿದೆ ಎಂದು ತಿಳಿದುಬಂದಿದೆ.
ಆರೋಗ್ಯ ಸಚಿವಾಲಯದ ಪ್ರಕಾರ ಮೇ 3ರವರೆಗೆ ತಮಿಳುನಾಡಿನಲ್ಲಿ 2,757 ಕರೊನಾ ಪ್ರಕರಣಗಳು ವರದಿಯಾಗಿದ್ದು, 29 ಮಂದಿ ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್)