ನ್ಯೂಸ್

ಚಿಕಿತ್ಸೆ ನೀಡುತ್ತಾ ಕರೊನಾ ರೋಗಿಯ ಮೇಲೆ ಡಾಕ್ಟರ್​ಗೆ ಲವ್​ ಆಯ್ತಾ? ಹಿಂದಿನ ಅಸಲಿ ಕಹಾನಿ ಏನು?

ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಇಡೀ ಜಗತ್ತಿಗೆ ವಕ್ಕರಿಸಿದ್ದು, ಅದನ್ನು ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ಅರ್ಥ ವ್ಯವಸ್ಥೆ ಜತೆಗೆ ಜನ-ಜೀವನವು ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಂಡು ದೇಶದ ಸ್ವಾಸ್ಥ್ಯವನ್ನು ಉಳಿಸಬೇಕಾದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಖಾ ಸುಮ್ಮನ್ನೇ ತಪ್ಪು ಸಂದೇಶ ಹರಡುವುದರಲ್ಲಿ ಬಿಜಿಯಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಹೀಗೇಕೆ ಈ ಮಾತು ಎಂಬ ಹಲವರ ಪ್ರಶ್ನೆಗೆ ಉತ್ತರ ಮುಂದಿದೆ. ಕರೊನಾ ರೋಗಿಗಳನ್ನು ಉಳಿಸಲು ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದು ಪ್ರೀತಿ ಮಾಡುವ ಸಮಯವೂ ಅಲ್ಲ. ಅಂತಹದರಲ್ಲಿ ವೈದ್ಯರೊಬ್ಬರು ಚಿಕಿತ್ಸೆ ನೀಡುತ್ತಾ ಕರೊನಾ ರೋಗಿಯೊಬ್ಬರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಮೇತ ಹರಿದಾಡುತ್ತಿದೆ.

ಅರ್ಫಾನ್​ ಖಾನ್​ ಬ್ರೈನ್​ ಪಜ್ಜಲ್ಸ್​ ಆ್ಯಂಡ್​ ಐಕ್ಯೂ ಟೆಸ್ಟ್​ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಲಾಗಿದೆ. ಫೋಟೋಗಳಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕೈಗೆ ರಿಂಗ್​ ತೊಡಿಸುತ್ತಿರುವ ದೃಶ್ಯವಿದ್ದು, ಇಬ್ಬರು ತುಂಬಾ ಪ್ರೀತಿಸಿ ನಿಶ್ಚಿತಾರ್ಥ ನೆರವೇರಿಸಿಕೊಂಡಂತೆ ಕಾಣುತ್ತದೆ. ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯ ಪ್ರೀತಿಯ ಬಲೆಯಲ್ಲಿ ಕರೊನಾ ರೋಗಿಯೊಬ್ಬರು ಬಿದ್ದಿದ್ದು, ಎರಡು ತಿಂಗಳ ನಂತರ ಈಜಿಪ್ಟ್​ನ ಆಸ್ಪತ್ರೆಯಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಫೋಟೋಗಳಿಗೆ ಅಡಿಬರಹವನ್ನು ನೀಡಲಾಗಿದೆ.

ಆದರೆ, ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​​ ಫ್ಯಾಕ್ಟ್​ಚೆಕ್​ ನಡೆಸಿದ್ದು, ವೈರಲ್​ ಆಗಿರುವ ಸುದ್ದಿಗೂ ಫೋಟೋಗೂ ಸಂಬಂಧವೇ ಇಲ್ಲ ಎಂದು ತಿಳಿದುಬಂದಿದೆ. ಅಷ್ಟಕ್ಕೂ ವೈರಲ್​ ಆಗಿರುವ ಫೋಟೋಗಳು ಪ್ರೀ ವೆಡ್ಡಿಂಗ್​ ಫೋಟೋಶೂಟ್​ಗೆ ಸಂಬಂಧಿಸಿದ್ದಾಗಿದೆ. ಅದರಲ್ಲಿರುವುದು ಕರೊನಾ ಪೀಡಿತ ರೋಗಿಯಲ್ಲ. ತಪ್ಪು ಸಂದೇಶ ಹೊತ್ತ ಪೋಸ್ಟ್​ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ಫೋಟೋವನ್ನು ಹುಡುಕಾಡಿದಾಗ ವೈರಲ್​ ಫೋಟೋಗಳಿಗೆ ಸಂಬಂಧಿಸಿದ ಲೇಖನವೊಂದು ಅರೇಬಿಕ್​ ಭಾಷೆಯಲ್ಲಿ ಪ್ರಕಟವಾಗಿದೆ. ಅದರ ಪ್ರಕಾರ ಫೋಟೋದಲ್ಲಿರುವವರು ಈಜಿಪ್ಟ್​ನ ವೈದ್ಯರಾಗಿದ್ದಾರೆ. ಅವರು ಹೆಸರು ಮೊಹಮ್ಮದ್​ ಫಹ್ಮೈ ಮತ್ತು ಅಯಾ ಮೊಸ್ಭಾ. ಕರೊನಾ ವೈರಸ್​ ಸಂದರ್ಭದಲ್ಲೇ ಈಜಿಪ್ಟ್​ನ ಮನ್ಸೌರಾ ನಗರದ ದಾರ್​ ಅಲ್​ ಶಿಫಾ ಆಸ್ಪತ್ರೆಯಲ್ಲಿ ಇಬ್ಬರು ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ಲೇಖನ ಪ್ರಕಾರ ಯಾರೊಬ್ಬರಿಗೂ ಕರೊನಾ ಸೋಂಕು ತಗುಲಿಲ್ಲ.

ಲೇಖನದಲ್ಲಿರುವ ಫೋಟೋಗಳ ಮೇಲೆ ಮೊಹಮ್ಮದ್ ಸಲೀಮ್​ ಫೋಟೋಗ್ರಫಿ ಎಂಬ ಹಸ್ತಾಕ್ಷರವಿದ್ದು, ಫೇಸ್​ಬುಕ್​ನಲ್ಲಿ​ ಮೊಹಮ್ಮದ್​ ಸಲೀಮ್​ ಹೆಸರು ಹುಡುಕಾಡಿದಾಗ ಅವರು ಕೂಡ ಇದೇ ಫೋಟೋಗಳನ್ನು ಪೋಸ್ಟ್​ ಮಾಡಿರುವುದು ಕಂಡುಬಂದಿದೆ. ಮೊಹಮ್ಮದ್​ ಫಹ್ಮೈ ಮತ್ತ ಅಯಾ ಮೊಸ್ಭಾ ಹೆಸರಿಗೆ ಟ್ಯಾಗ್​ ಮಾಡಿ ಮೇ 25ರಂದು ಪೋಸ್ಟ್​ ಮಾಡಿದ್ದಾರೆ. ಅಂದಹಾಗೆ ಸಲೀಮ್​ ಮನ್ಸೌರಾ ನಗರದ ಫೋಟೋಗ್ರಾಫರ್​ ಆಗಿದ್ದಾರೆ.

ಬಳಿಕ ಇಂಡಿಯಾ ಟುಡೆ ತಂಡ ವಾಟ್ಸ್​ಆ್ಯಪ್​ ಮೂಲಕ ಸಲೀಮ್​ರನ್ನು ಸಂಪರ್ಕಿಸಿದೆ. ಈ ವೇಳೆ ಸ್ಪಷ್ಟನೆ ನೀಡಿರುವ ಸಲೀಮ್​, ಚಿತ್ರಗಳು ಪ್ರೀ ವೆಡ್ಡಿಂಗ್​ ಫೋಟೋಶೂಟ್​ನ ಒಂದು ಭಾಗವಾಗಿದೆ. ಆಸ್ಪತ್ರೆಯಲ್ಲಿ ಶೂಟ್​ ಮಾಡಲಾಯಿತು. ಜನರಲ್ಲಿ ಆಶಾಭಾವ ಮೂಡಿಸಲು ಆಸ್ಪತ್ರೆಯಲ್ಲೇ ಫೋಟೋಶೂಟ್​ ನಡೆಸಲಾಯಿತು ಎಂದು ತಿಳಿಸಿದ್ದಾರೆ.

ಅಲ್ಲಿಗೆ ಸ್ಪಷ್ಟವಾಗುವುದೇನೆಂದರೆ ವೈರಲ್​ ಆಗಿರುವ ಸುದ್ದಿ ಸುಳ್ಳು. ಫೋಟೋದಲ್ಲಿರುವ ಇಬ್ಬರು ವೈದ್ಯರಾಗಿದ್ದು ಅವರಿಬ್ಬರ ಪ್ರೀ ವೆಡ್ಡಿಂಗ್​ ಫೋಟೋಶೂಟ್ ಅನ್ನು ತಪ್ಪು ಸಂದೇಶ ಹರಡಲು ಬಳಸಲಾಗಿದೆ. (ಏಜೆನ್ಸೀಸ್​)​