ನವದೆಹಲಿ: ರಾಷ್ಟ್ರಾದ್ಯಂತ ಕೋವಿಡ್-19 ಪಿಡುಗು ದಿನೇದಿನೆ ಹೆಚ್ಚಾಗುತ್ತಿದ್ದರೂ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳು ಅಗತ್ಯವಸ್ತುಗಳಲ್ಲ. ಅವುಗಳ ಪೂರೈಕೆ ಹೆಚ್ಚಾಗಿರುವ ಕಾರಣ ಅಗತ್ಯವಸ್ತುಗಳ ಕಾಯ್ದೆ, 1955ರಿಂದ ಅವನ್ನು ಹೊರಗಿಡುತ್ತಿರುವುದಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಹೇಳಿದ್ದಾರೆ.
2020ರ ಮಾರ್ಚ್ 13ರಂದು ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು 100 ದಿನಗಳಿಗೆ ಅಗತ್ಯವಸ್ತುಗಳು ಎಂದು ಘೋಷಿಸಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿತ್ತು. ಇವುಗಳ ಪೂರೈಕೆಯನ್ನು ಉತ್ತೇಜಿಸುವ ಜತೆಗೆ ಕಾಳಸಂತೆ ಮಾರಾಟವನ್ನು ತಡೆಗಟ್ಟುವುದು ಇದರ ಉದ್ದೇಶವಾಗಿತ್ತು.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಲೀನಾ ನಂದನ್, ಜೂ.30ರವರೆಗೆ ಇವರೆಡನ್ನೂ ಅಗತ್ಯವಸ್ತುಗಳು ಎಂದು ಪರಿಗಣಿಸಲಾಗಿತ್ತು. ಈ ನಿರ್ಧಾರವನ್ನು ಮತ್ತೆ ವಿಸ್ತರಿಸದಿರಲು ಈಗ ನಿರ್ಧರಿಸಲಾಗಿದೆ. ರಾಷ್ಟ್ರಾದ್ಯಂತ ಇವುಗಳ ಬೇಡಿಕೆ ಮತ್ತು ಪೂರೈಕೆಯಲ್ಲಿ ಸಮತೋಲನ ಕಂಡುಬಂದಿದೆ ಎಂದು ಹೇಳಿದ್ದಾರೆ.
ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲ ರಾಜ್ಯಗಳಲ್ಲೂ ಈ ಎರಡು ವಸ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿದೆ. ಎಲ್ಲಿಯೂ ಕೊರತೆ ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.