ನ್ಯೂಸ್

ಒಮಿಕ್ರಾನ್​ ಇಫೆಕ್ಟ್​, ಹೊರಬಿತ್ತು ಮತ್ತೊಂದು ಆದೇಶ; ಜ. 31ರವರೆಗೂ ಇಲ್ಲ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ...

ನವದೆಹಲಿ: ಹೊಸ ವರ್ಷವನ್ನು ವಿದೇಶದಲ್ಲಿ ಸಂಭ್ರಮಿಸಬೇಕು ಎಂದು ಯಾರಾದರೂ ಅಂದುಕೊಂಡಿದ್ದರೆ ಅಥವಾ ಹೊಸ ವರ್ಷಾಚರಣೆಗಾದರೂ ಸ್ವದೇಶಕ್ಕೆ ಮರಳಬೇಕು ಅಂತ ಅಂದುಕೊಂಡಿದ್ದರೆ ಅಂಥವರಿಗೆ ಇದು ಅತ್ಯಂತ ಬೇಸರದ ಸಂಗತಿ. ಏಕೆಂದರೆ ಒಮಿಕ್ರಾನ್​ ಆತಂಕದ ಹಿನ್ನೆಲೆಯಲ್ಲಿ ಇದೀಗ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಪ್ರಯಾಣಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಮತ್ತಷ್ಟು ದಿನಗಳವರೆಗೆ ವಿಸ್ತರಿಸಲಾಗಿದೆ.

ಡೈರೆಕ್ಟರ್ ಜನರಲ್​ ಆಫ್ ಸಿವಿಲ್ ಏವಿಯೇಷನ್​ (ಡಿಜಿಸಿಎ) ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. ಒಮಿಕ್ರಾನ್​ ಪ್ರಕರಣ ಕೆಲವು ದೇಶಗಳಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡಿಜಿಸಿಎ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಪ್ರಯಾಣಕ್ಕೆ ವಿಧಿಸಲಾದ ನಿರ್ಬಂಧವನ್ನು ವಿಸ್ತರಿಸಿದೆ.

ಈ ಹಿಂದಿನ ಆದೇಶದ ಪ್ರಕಾರ ಡಿ. 15ರ ವರೆಗೆ ನಿರ್ಬಂಧವಿದ್ದು, ಆ ಬಳಿಕ ಅದು ಮರು ಆರಂಭವಾಗುವುದಿತ್ತು. ಆದರೆ ಇದೀಗ ನಿರ್ಬಂಧವನ್ನು 2022ರ ಜ. 31ರ ವರೆಗೂ ವಿಸ್ತರಿಸಲಾಗಿದೆ. ಆದರೆ ಈ ನಿರ್ಬಂಧ ಕಾರ್ಗೋ ಆಪರೇಷನ್​ಗೆ ಅನ್ವಯಿಸುವುದಿಲ್ಲ. ಅಲ್ಲದೆ ಕೆಲವೊಂದು ಮಾರ್ಗಗಳಲ್ಲಿ ಸಂದರ್ಭಾನುಸಾರ ಅನುಮತಿ ನೀಡುವ ಸಾಧ್ಯತೆ ಇರುತ್ತದೆ ಎಂದೂ ಈ ಆದೇಶದಲ್ಲಿ ತಿಳಿಸಲಾಗಿದೆ.