ನ್ಯೂಸ್

ವಿಶ್ವದ ಅತಿ ದುಬಾರಿ ರೈಲುಗಳಲ್ಲಿ ಒಂದಾದ ಮಹಾರಾಜ ಎಕ್ಸ್​ಪ್ರೆಸ್​ನ ಟಿಕೆಟ್​ ಬೆಲೆ ಎಷ್ಟು? ಏನೆಲ್ಲ ಸೌಲಭ್ಯಗಳಿವೆ? Maharaja Express

Maharaja Express : ಸಾಮಾನ್ಯವಾಗಿ ರೈಲು ಪ್ರಯಾಣ ಎಂದರೆ ನಮಗೆ ತಕ್ಷಣ ನೆನಪಿಗೆ ಬರುವುದು ಜನ ಸಂದಣಿಯ ಮಧ್ಯೆ ಒಂದು ಕಿಟಕಿಯ ಪಕದಲ್ಲಿ ಕುಳಿತು ಆ ಕಿಟಕಿಯಿಂದ ಬರುವ ತಂಪಾದ ತಂಗಾಳಿಯ ಜತೆಗೆ ಹಸಿರು ಹೊಲಗಳ ನೋಟವನ್ನು ಕಣ್ತುಂಬಿಕೊಳ್ಳುತ್ತಾ, ಹಳೆಯ ಹಾಡುಗಳ ಜತೆ ಪ್ರಯಾಣ ಮಾಡುವುದು. ಆದರೆ, ಅದೇ ರೈಲು ಪ್ರಯಾಣದಲ್ಲಿ ರಾಜ ಮನೆತನ ಕಾಲದ ಅರಮನೆಯಂತಹ ಐಷಾರಾಮಿ ಅನುಭವ ಪಡೆದರೆ ಹೇಗಿರುತ್ತದೆ ಅಲ್ವಾ? ಇದೊಂದು ಕಲ್ಪನೆ ಅಂತ ಭಾವಿಸಬೇಡಿ. ಇಂತಹ ಅದ್ಭುತ ಅನುಭವ ನೀಡುವ ರೈಲು ಪ್ರಯಾಣ ಒಂದಿದೆ. ಅದುವೇ ಮಹಾರಾಜ ಎಕ್ಸ್​ಪ್ರೆಸ್.

ಹೌದು, ಇದು ಕೇವಲ ರೈಲು ಅಲ್ಲ, ರಾಷ್ಟ್ರ ರಾಜಧಾನಿ ನವದೆಹಲಿಯ ಸಫ್ದರ್ ಜಂಗ್ ನಿಲ್ದಾಣದಿಂದ ಹೊರಡುವ ಐಷಾರಾಮಿ ರೈಲು. ಇದರಲ್ಲಿ ಮಧುರವಾದ ಸಂಗೀತ, ನವೀನ ರೀತಿಯ ಅತಿಥಿ ಸ್ವಾಗತ ವ್ಯವಸ್ಥೆಯನ್ನು ಹೊಂದಿದೆ. ರಾಯಲ್ ಟ್ರೀಟ್​ಮೆಂಟ್​ನೊಂದಿಗೆ ಶುಭಾರಂಭವಾಗುವ ಈ ಪ್ರಯಾಣದಲ್ಲಿ ಪ್ರತಿ ಅತಿಥಿಗಳಿಗೆ ಹಸ್ತಮುದ್ರೆಯ ಜತೆಗೆ ಆರತಿ ಬೆಳಗಿ, ಪುಷ್ಪಮಾಲೆಯೊಂದಿಗೆ ಸನ್ಮಾನ ಮಾಡುವ ಮೂಲಕ ರಾಜ ಅಥವಾ ರಾಣಿಯಂತಹ ಅನುಭವ ನೀಡಲಿದ್ದಾರೆ.

ಇತ್ತೀಚಿಗಷ್ಟೇ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮಹಾರಾಜ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣ ಆರಂಭಿಸಿದ್ದು, ಇದು ವಿಶಿಷ್ಟವಾಗಿ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಹಾಗಾದರೆ, ಅದ್ಭುತ ಅರಮನೆಯಂತಿರುವ ಈ ರೈಲಿನಲ್ಲಿ ಏನೆಲ್ಲ ವಿಶೇಷತೆಗಳು ಇವೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಅಬ್ಬಬ್ಬಾ ಇಷ್ಟೊಂದು ಸೌಲಭ್ಯ

ರಾಯಲ್ ಪ್ಯಾಲೆಸ್​ನಂತಿರುವ ಈ ರೈಲು ಅದ್ಭುತವಾದ ಇಂಟೀರಿಯರ್ ಡಿಸೈನ್​ ಹೊಂದಿದೆ. ರೈಲಿನೊಳಗೆ ಕಾಲಿಟ್ಟ ತಕ್ಷಣವೇ ಅರಮನೆಯೊಳಗೆ ಕಾಲಿಟ್ಟ ಭಾವನೆ ಮೂಡುತ್ತದೆ. ವೈಭವದಿಂದ ಕೂಡಿದ ಹೋಟೆಲ್​, ಡಿಲಕ್ಸ್​ ಕ್ಯಾಬಿನ್​ಗಳು, ಮಾಲೀಷ್​ ಲೌಂಜ್​ಗಳು, ಉತ್ತಮ ಊಟದ ರೆಸ್ಟೋರೆಟ್​ಗಳನ್ನು ಹೊಂದಿದೆ. ಇದರ ಜತೆಗೆ ಎರಡು ಎಸಿ ಕೋಚ್​ಗಳು ಸಹ ಇವೆ. ಹಾಗೆಯೇ ಯಾವುದೇ ಅಡಚಣೆಗಳನ್ನು ತಪ್ಪಿಸಲು ಎರಡು ಲೋಕೋಮೋಟಿವ್​ಗಳನ್ನು ನಿಯೋಜಿಸಲಾಗಿದೆ. ಇವುಗಳನ್ನು ತಾಂತ್ರಿಕ ಸಮಸ್ಯೆಗಳ ಸಂದರ್ಭದಲ್ಲಿ ಬಳಸಲಾಗುತ್ತದೆ. ಈ ಎಲ್ಲ ತರಹದ ವಿಶೇಷತೆಯನ್ನು ಹೊಂದಿರುವ ಈ ರೈಲು ಒಂದು ಐಷಾರಾಮಿ ಹೋಟೆಲ್​ಗೆ ಕಿಂಚಿತು ಕಡಿಮೆ ಇಲ್ಲ ಎಂದು ಹೇಳಬಹುದು.

ವಿಶ್ವದಲ್ಲಿ ಇಂತಹ ಕೆಲವು ಐಷಾರಾಮಿ ಮತ್ತು ದುಬಾರಿ ರೈಲು ಸವಾರಿಗಳ ಬೆಲೆ ಮತ್ತು ವಿಶೇಷತೆಗಳನ್ನು ನಾವೀಗ ತಿಳಿದುಕೊಳ್ಳೋಣ.

ಮಹಾರಾಜಸ್ ಎಕ್ಸ್​ಪ್ರೆಸ್ - ಭಾರತ

* ಟಿಕೆಟ್​ ಬೆಲೆ: ಪ್ರತಿ ವ್ಯಕ್ತಿಗೆ 6.92 ಲಕ್ಷದಿಂದ 22.2 ಲಕ್ಷ ರೂಪಾಯಿವರೆಗೆ

* ವಿಶೇಷತೆ: ರಾಜಮನೆತನ ಶೈಲಿಯ ಸೂಟ್​ಗಳು, ಹೈ-ಕ್ಲಾಸ್ ಡೈನಿಂಗ್, ಪ್ಯಾಲೇಸ್​ನಂತಹ ಅನುಭವ ಹಾಗೂ ವೈಯಕ್ತಿಕ ಸೇವೆ ನೀಡಲಾಗುತ್ತದೆ.

ಶಿಕಿ-ಶಿಮಾ- ಜಪಾನ್

* ಟಿಕೆಟ್​ ಬೆಲೆ: 16.8 ಲಕ್ಷದಿಂದ 19.5 ಲಕ್ಷ ರೂಪಾಯಿವರೆಗೆ (4 ದಿನಗಳ ಸೇವೆ)

* ವಿಶೇಷತೆ: ಜಪಾನಿ ಶೈಲಿಯ ಒಳಾಂಗಣ, ವಿಶಿಷ್ಟ ಅಡುಗೆ, ವೀಕ್ಷಣಾ ಕಾರುಗಳು ಹಾಗೂ ಪ್ರವಾಸದ ವೈಯಕ್ತಿಕ ಅನುಭವ ಪಡೆಯಬಹುದು.

ವೆನಿಸ್ ಸಿಂಪ್ಲಾನ್- ಓರಿಯಂಟ್ ಎಕ್ಸ್​ಪ್ರೆಸ್- ಯುರೋಪ್

* ಟಿಕೆಟ್​ ಬೆಲೆ: 3.9 ಲಕ್ಷದಿಂದ 73 ಲಕ್ಷ ರೂ.ವರಗೆ

* ವಿಶೇಷತೆ: ಐತಿಹಾಸಿಕ ಇಂಟೀರಿಯರ್, ಪ್ಯಾರಿಸ್-ವೆನಿಸ್ ಮಾರ್ಗದ ಅನುಭವದ ಜತೆಗೆ ರೋಮ್ಯಾಂಟಿಕ್ ಯುರೋಪಿಯನ್ ವಾತಾವರಣ ಸವಿಯಬಹುದು.

ರೋವೋಸ್ ರೈಲು- ದಕ್ಷಿಣ ಆಫ್ರಿಕಾ

* ಟಿಕೆಟ್​ ಬೆಲೆ: 8.86 ಲಕ್ಷ ರೂಪಾಯಿ

* ವಿಶೇಷತೆ: ರೈಲು ಸವಾರಿ, ವಿಂಟೇಜ್ ಕೋಚ್​ಗಳು, ಆಟವಾಡಲು ಅವಕಾಶ ಹಾಗೂ ಆಫ್ರಿಕಾದ ರೋಚಕ ಭೂದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಡೆಕ್ಕನ್ ಒಡಿಸ್ಸಿ-ಭಾರತ

* ಟಿಕೆಟ್​ ಬೆಲೆ: 7.4 ಲಕ್ಷದಿಂದ 17.8 ಲಕ್ಷ ರೂ.ವರೆಗೆ

* ವಿಶೇಷತೆ: ಯುನೆಸ್ಕೋ ತಾಣಗಳ ಭೇಟಿ, ಎಲ್ಲವನ್ನು ಒಳಗೊಂಡ ಸೇವೆ ಪಡೆಯಬಹುದು.

ಒಟ್ಟಿನಲ್ಲಿ ಈ ಐಷಾರಾಮಿ ರೈಲುಗಳು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗುವ ದುಬಾರಿ ವಾಹನಗಳಲ್ಲ. ನಿಮಗೆ ಜೀವನ ಪರ್ಯಂತ ಹಸಿರಾಗಿ ಉಳಿಯುವ ಅದ್ಭುತ ಪಯಣದ ಅನುಭವವನ್ನು ನೀಡುತ್ತವೆ. ಅಂತಹ ಅನುಭವವನ್ನು ನೀವು ಪಡೆಯಬೇಕಾದರೆ ಇಂತಹ ರೈಲುಗಳಲ್ಲಿ ಒಮ್ಮೆಯಾದರು ಪ್ರಯಾಣ ಮಾಡಿ. ಇದರಿಂದ ನಿಮ್ಮ ಬಾಳಿಗೊಂದು ಅದ್ಧೂರಿ ಅಧ್ಯಾಯ ಸೇರುವುದು ಗ್ಯಾರಂಟಿ. (ಏಜೆನ್ಸೀಸ್)