ನವದೆಹಲಿ: 114 ಸಂಖ್ಯಾಬಲದ ಜಮ್ಮು-ಕಾಶ್ಮೀರ ವಿಧಾನಸಭೆಗೆ ಇಂದು (ಸೆಪ್ಟೆಂಬರ್ 25) ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಕಣಿವೆ ರಾಜ್ಯದ 26 ವಿಧಾನಸಭಾ ಕ್ಷೇತ್ರಗಳು ಎರಡನೇ ಹಂತದಲ್ಲಿ ಮತದಾನಕ್ಕೆ ಒಳಪಡಲಿವೆ. ಇತ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳತ್ತ ತೆರಳುತ್ತಿದ್ದು, ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ.
ಎರಡನೇ ಹಂತದ ಮತದಾನಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದು, ಜನರು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ನಿಮ್ಮ ರಾಜ್ಯತ್ವವನ್ನು ನಿಮ್ಮಿಂದ ಕಿತ್ತುಕೊಳ್ಳುವ ಮೂಲಕ ಬಿಜೆಪಿ ಸರ್ಕಾರವು ನಿಮ್ಮನ್ನು ಅವಮಾನಿಸಿದೆ ಮತ್ತು ನಿಮ್ಮ ಸಾಂವಿಧಾನಿಕ ಹಕ್ಕುಗಳೊಂದಿಗೆ ಆಟವಾಡಿದೆ. ನೀವು ಇಂಡಿಯಾ ಮೈತ್ರಿಕೂಟಕ್ಕೆ ಹಾಕುವ ಪ್ರತಿಯೊಂದು ಮತವು ಬಿಜೆಪಿ ಸೃಷ್ಠಿಸಿದ ಅನ್ಯಾಯದ ಚಕ್ರವ್ಯೂಹವನ್ನು ಮುರಿಯುತ್ತದೆ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಸಮೃದ್ಧಿಯ ಹಾದಿಯಲ್ಲಿ ತರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ 10 ವರ್ಷಗಳಿಂದ ಮತದಾನದ ಹಕ್ಕನ್ನು ನಿಮ್ಮಿಂದ ಕಸಿದುಕೊಳ್ಳಲಾಗಿದೆ. ವಿದ್ಯುತ್, ನೀರು, ರಸ್ತೆ, ಉದ್ಯೋಗ, ಆದಾಯ, ವ್ಯಾಪಾರ, ಭೂಮಿ, ಅರಣ್ಯ ಮುಂತಾದ ವಿಷಯಗಳ ಕುರಿತು ಧ್ವನಿ ಎತ್ತದಂತೆ ನಿರ್ಬಂಧ ಹೇರಲಾಗಿದೆ. ನಿಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕನ್ನು ನಿಮ್ಮಿಂದ ದೂರ ಮಾಡಲಾಗಿದೆ.
ಇಂದು ಎರಡನೇ ಹಂತದ ಮತದಾನದಲ್ಲಿ ನಿಮ್ಮ ಮತದ ಶಕ್ತಿಯನ್ನು ತೋರಿಸಿ. ನಿಮ್ಮ ಉತ್ತಮ ಭವಿಷ್ಯ, ಜೀವನೋಪಾಯ, ಉದ್ಯೋಗ, ಭೂಮಿ, ವ್ಯಾಪಾರ ಮತ್ತು ನಿಮ್ಮ ಸಮಸ್ಯೆಗಳಿಗಾಗಿ ಸರ್ಕಾರವನ್ನು ಆಯ್ಕೆ ಮಾಡಲು ಮತ ಚಲಾಯಿಸಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಟ್ವೀಟ್ ಮಾಡಿ ಇಂಡಿಯಾ ಮೈತ್ರಿಕೂಟಕ್ಕೆ ಮತ ಹಾಕುವಂತೆ ಮನವಿ ಮಾಡಿದ್ದಾರೆ.