ನ್ಯೂಸ್

ಸೋತರೂ ಕಾಂಗ್ರೆಸ್​ನವರು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ: ಜಗದೀಶ ಶೆಟ್ಟರ್​

ಬೆಂಗಳೂರು: ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಸೇರಿ ಚುನಾವಣೆಗೂ ಸ್ಪರ್ಧಿಸಿ ಪರಾಭವ ಅನುಭವಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಕಾಂಗ್ರೆಸ್ ಇಂದು ವಿಧಾನಪರಿಷತ್ ಸದಸ್ಯ ಸ್ಥಾನವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶೆಟ್ಟರ್, ಬಿಜೆಪಿ-ಕಾಂಗ್ರೆಸ್ ಪಕ್ಷದ ಧೋರಣೆಯನ್ನು ತುಲನೆ ಮಾಡಿ ಹೇಳಿಕೆ ನೀಡಿದ್ದಾರೆ.

ಬಿಜೆಪಿಯಲ್ಲಿ ಗೌರವದಿಂದ ನಡೆಸಿಕೊಂಡಿಲ್ಲ, ಹಾಗಾಗಿ ನಾನು ಷರತ್ತು ಇಲ್ಲದೆ ಕಾಂಗ್ರೆಸ್ ಸೇರುತ್ತಿದ್ದೇನೆ ಅಂತ ಕಾಂಗ್ರೆಸ್​ಗೆ ಸೇರಿದ ಮೇಲೆ ಒಂದು ಮಾತು ಹೇಳಿದ್ದೆ. ಪಕ್ಷದಲ್ಲಿ ಅಳಿಲು ಸೇವೆ ಮಾಡಿದ್ದು, ಸೋತರೂ ಕಾಂಗ್ರೆಸ್​ನವರು ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ಶೆಟ್ಟರ್ ತಮಗೆ ವಿಧಾನಪರಿಷತ್ ಸ್ಥಾನ ಸಿಕ್ಕ ಖುಷಿ ಹಂಚಿಕೊಂಡಿದ್ದಾರೆ.

ನಾನು ಬಿಜೆಪಿಯಲ್ಲಿ 30 ವರ್ಷಗಳಿಂದ ತಾಳ್ಮೆಯಿಂದ ಇದ್ದೆ. ಕಾಂಗ್ರೆಸ್​ಗೆ ಬಂದು 2-3 ತಿಂಗಳು ಆಗಿವೆ, ಅವರು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಮೂರು ಎಂಎಲ್​ಸಿ ಸ್ಥಾನಗಳಲ್ಲಿ ಒಂದು ಸ್ಥಾನ ನಾಮಪತ್ರ ಸಲ್ಲಿಕೆ ಅವಕಾಶ ನನಗೆ ಕೊಟ್ಟಿದ್ದಾರೆ. ಕಾಂಗ್ರೆಸ್​ನ ಹಿರಿಯರು ನನ್ನನ್ನು ಕಡೆಗಣಿಸಿಲ್ಲ. ಬೇರೆ ಪಕ್ಷದಿಂದ ಬಂದರೂ ಸಹಿತ ಒಳ್ಳೆಯ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಪರಿಷತ್ ಸದಸ್ಯ ಸ್ಥಾನ, ಶಾಸಕ ಸ್ಥಾನ ರಾಜಕೀಯ ರಂಗದಲ್ಲಿ ಕೆಲಸ ಮಾಡಲು ಒಂದು ವೇದಿಕೆ. ನನಗೆ ಅವರು ಆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಹೆಚ್ಚಿನ ಹುದ್ದೆಗಳನ್ನು ನೀಡಬಹುದು ಎಂಬ ನಿರೀಕ್ಷೆ ಇದೆ ಎಂದಿರುವ ಶೆಟ್ಟರ್, ಒಂದಷ್ಟು ಹೆಚ್ಚು ಕಡಿಮೆಯಾದರೂ ಗ್ಯಾರಂಟಿಗಳೆಲ್ಲವೂ ಅನುಷ್ಠಾನವಾಗಲಿವೆ. ಮಾತ್ರವಲ್ಲ, ಗ್ಯಾರಂಟಿಗಳ ಅನುಷ್ಠಾನ ಲೋಕಸಭಾ ಚುನಾವಣೆ ಮೇಲೆ ನೂರಕ್ಕೆ ನೂರು ಪರಿಣಾಮ ಬೀರಲಿದೆ ಎಂದರು.