ಹೃಷಿಕೇಶ: ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಕ್ರಿಮಿನಲ್ಗಳು ಪಾಕಿಸ್ತಾನದಲ್ಲಿ ನಿಗೂಢವಾಗಿ ಹತ್ಯೆಗೀಡಾಗುತ್ತಿರುವ ನಡುವೆಯೇ ‘ಉಗ್ರರನ್ನು ಅವರ ಮನೆಗಳಿಗೇ ನುಗ್ಗಿ ಕೊಲ್ಲುವುದು ನಮ್ಮ ಸಿದ್ಧಾಂತ’ ಎಂದು ಪ್ರಧಾನಿ ನರೇಂದ್ರ ಮೋದಿ ಶತ್ರು ರಾಷ್ಟ್ರಕ್ಕೆ ನೇರ ಎಚ್ಚರಿಕೆ ರವಾನಿಸಿದ್ದಾರೆ.
ಉತ್ತರಾಖಂಡದ ಹೃಷಿಕೇಶದಲ್ಲಿ ನಡೆದ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ ಬಿಜೆಪಿ ನೇತೃತ್ವದ ದೃಢ ಸರ್ಕಾರ ಇರುವುದರಿಂದಲೇ ದೇಶದ ಭದ್ರತಾ ಪಡೆಗಳು ಉಗ್ರರ ನೆಲಕ್ಕೇ ನುಗ್ಗಿ ಮಟ್ಟ ಹಾಕುತ್ತಿವೆ. ಇದೇ ನಮ್ಮ ಸರ್ಕಾರದ ಸಿದ್ಧಾಂತ ಎಂದು ಗುಡುಗಿದರು.
ಭಾರತದಲ್ಲಿ ದುರ್ಬಲ ಹಾಗೂ ಅಸ್ಥಿರ ಸರ್ಕಾರಗಳಿದ್ದಾಗೆಲ್ಲ ಶತ್ರುಗಳು ಅದರ ಪ್ರಯೋಜನ ಪಡೆಯುತ್ತಿದರು. ಇದರಿಂದಲೇ ಭಯೋತ್ಪಾದನೆ ದೇಶಾದ್ಯಂತ ವ್ಯಾಪಿಸುತ್ತಿತ್ತು. ಸ್ಥಿರ ಸರ್ಕಾರದ ಪ್ರಯೋಜನ ಕಂಡಿರುವ ಜನರಿಂದಾಗಿ ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂಬ ಉದ್ಘೋಷ ದೇಶಾದ್ಯಂತ ಪ್ರತಿಧ್ವನಿಸುತ್ತಿದೆ ಎಂದು ಹೇಳಿದರು. ಹಿಂದಿನ ದುರ್ಬಲ ಕಾಂಗ್ರೆಸ್ ಸರ್ಕಾರ ಗಡಿ ಮೂಲಸೌಕರ್ಯ ಸದೃಢಗೊಳಿಸಿರಲಿಲ್ಲ. ಈಗ ರಸ್ತೆ ಹಾಗೂ ಆಧುನಿಕ ಸುರಂಗಗಳನ್ನು ಗಡಿ ಯುದ್ದಕ್ಕೂ ನಿರ್ವಿುಸಲಾಗಿದೆ.
ಭ್ರಷ್ಟರು ದೇಶವನ್ನು ಲೂಟಿ ಮಾಡುವುದನ್ನು ತಡೆದಿರುವುದರಿಂದ ಅವರ ಸಿಟ್ಟು ನಮ್ಮ ವಿರುದ್ಧ ಅಧಿಕವಾಗಿದೆ ಎಂದೂ ಮೋದಿ ಹೇಳಿದರು. ಉತ್ತರಾಖಂಡವನ್ನು ಬ್ರಹ್ಮಕಮಲದ ನೆಲ ಎಂದು ಬಣ್ಣಿಸಿದ ಮೋದಿ, ಈ ಸಲ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ಚಲಾಯಿಸುವ ಮೂಲಕ ಎಲ್ಲ ಐದು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವಂತೆ ಮಾಡಿ ಎಂದು ಮತ ಯಾಚಿಸಿದರು.
2023ರಿಂದೀಚೆಗೆ ಭಾರತಕ್ಕೆ ಬೇಕಿದ್ದ 20ಕ್ಕೂ ಹೆಚ್ಚು ಉಗ್ರರು ಕ್ರಿಮಿನಲ್ಗಳು ಪಾಕಿಸ್ತಾನದಲ್ಲಿ ನಿಗೂಢವಾಗಿ ಹತ್ಯೆಗೀಡಾಗಿದ್ದಾರೆ. ಈ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ದಿ ಗಾರ್ಡಿಯನ್ ಪತ್ರಿಕೆ ಇತ್ತೀಚೆಗಷ್ಟೇ ವರದಿ ಮಾಡಿತ್ತು. ಆದರೆ ಈ ಆರೋಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಉಗ್ರರ ನಿಗ್ರಹಿಸಲು ಪಾಕ್ಗೆ ಸಹಕಾರ: ಇನ್ನೊಂದೆಡೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ‘ಪಾಕಿಸ್ತಾನ ಉಗ್ರರನ್ನು ಮಟ್ಟಹಾಕಲೇಬೇಕು, ಅವರಿಗೆ ಅದು ಸಾಧ್ಯವಾಗದೇ ಇದ್ದರೆ ಉಗ್ರ ನಿಮೂಲನೆಗೆ ನಾವೇ ಸಹಕಾರ ನೀಡುತ್ತೇವೆ’ ಎಂದು ಘೋಷಿಸಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು ಭಯೋತ್ಪಾದನೆ ಮೂಲಕ ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಪಾಕಿಸ್ತಾನ ಪ್ರಯತ್ನಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ತುರ್ತಪರಿಸ್ಥಿತಿ ಸಮಯದಲ್ಲಿ ತಮ್ಮ ತಾಯಿಯ ಅಂತಿಮ ಸಂಸ್ಕಾರಕ್ಕೆ ತೆರಳಲು ಅನುವು ಮಾಡಿಕೊಟ್ಟಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿಂಗ್, ಈಗ ಅವರು ನಮ್ಮನ್ನು ಸರ್ವಾಧಿಕಾರಿಗಳು ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು. ಗಡಿದಾಟಿ ತಪ್ಪಿಸಿಕೊಂಡಿರುವ ಭಯೋತ್ಪಾದಕರನ್ನು ಸದೆಬಡಿಯಲು ಪಾಕಿಸ್ತಾನಕ್ಕೆ ನುಗ್ಗಲಿಕ್ಕೂ ಹಿಂಜರಿಯುವುದಿಲ್ಲ ಎಂದು ಇತ್ತೀಚೆಗಷ್ಟೇ ರಾಜನಾಥ್ ಸಿಂಗ್ ಹೇಳಿದ್ದರು.