ನ್ಯೂಸ್

ಪ್ರೇಮಿಗಳ ಮಧ್ಯೆ ಮಾತಿನ ಜಟಾಪಟಿ; ಪ್ರಿಯಕರನಿಂದಲೇ ಹತ್ಯೆಯಾದ ಪ್ರೇಯಸಿ!

ಹಾಸನ: ಪ್ರೇಯಸಿ ತನ್ನ ಹಿಂದಿನ ಸಂಬಂಧದ ಬಗ್ಗೆ ಹೇಳದೆ ಮುಚ್ಚಿಟ್ಟಳು ಎಂಬ ಕಾರಣಕ್ಕೆ ತೀವ್ರ ವಾಗ್ವಾದಕ್ಕಿಳಿದ ಪ್ರಿಯಕರ, ಚಾಕುವಿನಿಂದ ಆಕೆಯ ಕತ್ತನ್ನು ಸೀಳಿ, ಬರ್ಬರವಾಗಿ ಹತ್ಯೆಗೈದ ಘಟನೆ ಹಾಸನ ಜಿಲ್ಲೆಯಲ್ಲಿ ವರದಿಯಾಗಿದೆ.

ಇಬ್ಬರ ನಡುವೆ ಒಂದೇ ವಿಚಾರಕ್ಕೆ ಪದೇ ಪದೇ ಜಗಳವಾಗುತ್ತಿತ್ತು. ಮಾತಿನ ಜಟಾಪಟಿ ತೀವ್ರ ಹಂತವನ್ನು ತಲುಪಿದ ಹಿನ್ನೆಲೆಯಲ್ಲಿ ಚಾಕುವಿನಿಂದ ತನ್ನ ಗೆಳತಿಯ ಕತ್ತು ಸೀಳಿ ಕೊಲೆ ಮಾಡಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಆರೋಪಿಯನ್ನು ತೇಜಸ್ ಎಂದು ಗುರುತಿಸಲಾಗಿದ್ದು, ಯುವತಿಯೊಂದಿಗೆ ಆರು ತಿಂಗಳಿನಿಂದ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹತ್ಯೆಯಾದ ಯುವತಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಳು. ಆರೋಪಿಯೂ ಅದೇ ಕಾಲೇಜಿನಲ್ಲಿ ಪದವಿ ಪಡೆದಿದ್ದು, ಆಕೆಯ ಸೀನಿಯರ್ ಆಗಿದ್ದ ಎಂದು ವರದಿ ತಿಳಿಸಿದೆ.

ಇಬ್ಬರು ಆಗಾಗ್ಗೆ ಜಗಳ ಮತ್ತು ವಾದಗಳಲ್ಲಿ ತೊಡಗುತ್ತಿದ್ದರು. ಇತ್ತೀಚೆಗಷ್ಟೇ ಆಕೆಯ ಹಳೆಯ ಸಂಬಂಧದ ಬಗ್ಗೆ ತಿಳಿದ ಪ್ರಿಯಕರ ತೇಜಸ್​, ಆ ವಿಷಯವನ್ನು ಮುಂದಿಟ್ಟು ಜಗಳವಾಡುತ್ತಿದ್ದ. ಇದನ್ನು ತನ್ನಿಂದ ಮರೆಮಾಚಿದ್ಯಾಕೆ ಎಂದು ಪ್ರಶ್ನಿಸಿ, ವಾಗ್ವಾದ ನಡೆಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಿಯಕರನ ನಿರಂತರ ಜಗಳದಿಂದ ತೀವ್ರ ಬೇಸತ್ತು ಹೋಗಿದ್ದ ಯುವತಿ, ಅವನೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಲು ಬಯಸುವುದಾಗಿ ತಿಳಿಸಿದ್ದಾಳೆ. ಆದಾಗ್ಯೂ, ಗುರುವಾರ ಈ ಸಮಸ್ಯೆಗಳನ್ನು ಚರ್ಚಿಸುವ ನೆಪದಲ್ಲಿ, ತೇಜಸ್​ ಆಕೆಯನ್ನು ಬೈಕ್​ನಲ್ಲಿ ಸಿಟಿಯಿಂದ ಸುಮಾರು 13 ಕಿ.ಮೀ ದೂರದ ಕುಂತಿ ಬೆಟ್ಟದ ಕಡೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲೂ ಕೂಡ ಅದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ಆರಂಭಗೊಂಡಿದೆ. ಈ ವೇಳೆ ಚಾಕು ತೆಗೆದು ಪ್ರೇಯಸಿಯ ಕತ್ತು ಸೀಳಿದ ಪ್ರಿಯಕರ, ಕೂಡಲೇ ಸ್ಥಳದಿಂದ ಪರಾರಿಯಾಗಿದ್ದನು.

ಸ್ಥಳೀಯರು ಯುವತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಆರೋಪಿ ತೇಜಸ್‌ನನ್ನು ಬಂಧಿಸಿದ್ದಾರೆ,(ಏಜೆನ್ಸೀಸ್).