| ಜಗತ್ ಪ್ರಕಾಶ್ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಜಗತ್ತಿನ ಜನಪ್ರಿಯ ನಾಯಕರಲ್ಲಿ ಒಬ್ಬರಾದ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನ ಇಂದು. ಮೊದಲಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಈಗ ಪ್ರಧಾನಿಯಾಗಿ ಅವರ 20 ವರ್ಷಗಳ ಚುನಾವಣಾ ರಾಜಕೀಯದ ಸುದೀರ್ಘ ಪಯಣ ಅವರನ್ನು ಜಗತ್ತಿನ ಸುದೀರ್ಘ ಸೇವೆ ಸಲ್ಲಿಸಿದ ಚುನಾಯಿತ ನಾಯಕರಲ್ಲಿ ಒಬ್ಬರನ್ನಾಗಿ ಮಾಡಿದೆ. ಮೋದಿಯವರ ಆಕರ್ಷಕ ವರ್ಚಸ್ವಿ ವ್ಯಕ್ತಿತ್ವ, ಅವರ ಪ್ರಬಲ ರಾಜಕೀಯ ಹಾಗೂ ಭಾವನಾತ್ಮಕ ಬಂಧವು ದೇಶದ ಜನರನ್ನು ಮಂತ್ರಮುಗ್ಧಗೊಳಿಸಿದೆ. ಹೀಗಾಗಿ, ನರೇಂದ್ರ ಮೋದಿಯವರು ಜಗತ್ತಿನ ಜನಪ್ರಿಯ ರಾಜಕೀಯ ನಾಯಕ ಎಂದು ಜಾಗತಿಕ ಟಾಪ್ ರೇಟಿಂಗ್ ಸಂಸ್ಥೆಯ ಸಮೀಕ್ಷೆ ಹೇಳಿದಾಗ, ನಮಗೆ ಅಂದರೆ ಭಾರತೀಯರಿಗೆ ಅಚ್ಚರಿಯೇನೂ ಆಗಲಿಲ್ಲ.
ಸುಧಾರಕನ ಪಾತ್ರ: ಮೋದಿ ಪ್ರಧಾನಿ ಮಾತ್ರವೇ ಅಲ್ಲ. ಅವರೊಬ್ಬ ಸುಧಾರಕನಾಗಿಯೂ ಹೊರಹೊಮ್ಮಿದ್ದಾರೆ. ಭಾರತದ ಅನೇಕ ಸಮಸ್ಯೆಗಳನ್ನು ಸಾರ್ವಜನಿಕ ಸಂವಾದ ಹಾಗೂ ಪಾಲ್ಗೊಳ್ಳುವಿಕೆ ಮೂಲಕ ಪರಿಹರಿಸುತ್ತಾರೆ. ಬಯಲು ಬಹಿರ್ದೆಸೆ-ಮುಕ್ತ ಭಾರತ, ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ-ಬೇಟಿ ಪಢಾವೋ ಮತ್ತು ನಮಾಮಿಗಂಗೆ ಅಭಿಯಾನಗಳು ಅದಕ್ಕೆ ಜೀವಂತ ಉದಾಹರಣೆಗಳಾಗಿವೆ. ಮೋದಿಯವರು ತಮ್ಮನ್ನು ‘ಪ್ರಧಾನ ಸೇವಕ’ ಎಂದು ಪರಿಗಣಿಸುತ್ತಾರೆ. ನೈತಿಕತೆ ಹಾಗೂ ಸಾಮಾಜಿಕ ಮೌಲ್ಯಗಳ ಮೂಲಕ ಅಭಿವೃದ್ಧಿ ಸಾಧಿಸುವ ಧೋರಣೆ ಅವರದ್ದಾಗಿದೆ. ಅವರು ಯಾವತ್ತೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ. ಮುಂಚೂಣಿಯಲ್ಲಿ ನಿಂತು ದೇಶದ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಗುರಿ ತಲುಪುವ ತನಕ ವಿಶ್ರಮಿಸುವುದಿಲ್ಲ. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರ ವಿಶ್ವಾಸಾರ್ಹತೆ ಪ್ರಶ್ನಾತೀತವಾದುದು.
ಶಾಸ್ತ್ರಿ ನಂತರ ಮೋದಿ: ಗೌರವಾನ್ವಿತ ಲಾಲ್ ಬಹಾದೂರ್ ಶಾಸ್ತ್ರಿಯವರ ನಂತರ ಜನಸಮೂಹದ ಮೇಲೆ ಮಂತ್ರಮುಗ್ಧಗೊಳಿಸುವ ಪರಿಣಾಮ ಬೀರಿದ್ದು ನರೇಂದ್ರ ಮೋದಿಯವರು. ಅವರ ಕರೆಗೆ ಇಡೀ ದೇಶ ಓಗೊಟ್ಟು ಒಗ್ಗಟ್ಟಾದ ವಿಚಾರದಲ್ಲಿ ಕೂಡ ಇದು ನಿಜವಾಗಿದೆ. ಕರೊನಾ ಸಾಂಕ್ರಾಮಿಕತೆಯ ವೇಳೆ ಮೋದಿ ಮನವಿಗಳನ್ನು ಪ್ರತಿಯೊಬ್ಬ ಪ್ರಜೆ ಪಾಲಿಸಿದರು. ಇದು ಸೋಂಕಿನ ವಿರುದ್ಧ ದೇಶದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿತು. ಪಿಎಂ ಕೇರ್ಸ್ ನಿಧಿಗೆ ದೇಣಿಗೆ ಹರಿದು ಬಂತು. ಸ್ವಯಂಸೇವಾ ಸಂಸ್ಥೆಗಳು ನಾಗರಿಕರ ನೆರವಿಗೆ ಮುಂದೆ ಬಂದವು. ಜಗತ್ತಿನ ಅತಿ ದೊಡ್ಡ ಹಾಗೂ ವೇಗದ ಲಸಿಕೆ ಅಭಿಯಾನದಲ್ಲಿ ಭಾಗವಹಿಸಲು ಜನರು ಹಿಂಜರಿಯಲಿಲ್ಲ. ಇದುವರೆಗೆ 75 ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕಲಾಗಿದ್ದು ಇದೊಂದು ವಿಶ್ವ ದಾಖಲೆಯಾಗಿದೆ. ತ್ವರಿತವಾಗಿ ನಿರ್ಧಾರ ಕೈಗೊಳ್ಳುವುದು ಮೋದಿಯವರ ವಿಶೇಷತೆ. ದಾಖಲೆ ಸಮಯದಲ್ಲಿ ಕರೊನಾ ವಿರುದ್ಧ ‘ಮೇಡ್ ಇನ್ ಇಂಡಿಯಾ’ ವ್ಯಾಕ್ಸಿನ್ ಅಭಿವೃದ್ಧಿಪಡಿಸಿ ಅವರು ಇಡೀ ಜಗತ್ತು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದರು. ಕರೊನಾ ಬಿಕ್ಕಟ್ಟು ತೀವ್ರಗೊಂಡಾಗ ಕೆಲವೇ ದಿನಗಳಲ್ಲಿ ಮೆಡಿಕಲ್ ಆಕ್ಸಿಜನ್ ಪೂರೈಕೆ ಸಾಧ್ಯವಾಗಿಸಿದರು. ಇದು ನಮ್ಮ ‘ಪ್ರಧಾನ ಸೇವಕನ’ ವರ್ಚಸ್ಸಾಗಿದೆ. ಪ್ರತಿ ಭಾರತೀಯರ ಚಿಂತನಾಕ್ರಮವನ್ನೇ ಬದಲಾಯಿಸಿ ಭಾರತದ ರಾಜಕೀಯ ಕಾರ್ಯದ ಸಂಸ್ಕೃತಿಯನ್ನು ಮೋದಿ ಪರಿವರ್ತಿಸಿದರು. ರಾಜಕೀಯವೆನ್ನುವುದು ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೆ ಜನರು ಹಾಗೂ ದೇಶಕ್ಕೆ ಸೇವೆ ಸಲ್ಲಿಸುವ ಸಾಧನ ಎಂದು ಅವರು ನಿರೂಪಿಸಿದ್ದಾರೆ.
2014ಕ್ಕಿಂತ ಮುಂಚೆ, ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳನ್ನು ಮತ ಗಳಿಸಲಷ್ಟೇ ಬಳಸುತ್ತಿದ್ದವು. ಆದರೆ, ಮೋದಿ ಪ್ರಧಾನಿಯಾದ ನಂತರ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿನ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತಿದೆ. ನಮ್ಮ ಸರ್ಕಾರಕ್ಕೆ ಅದು ಪ್ರಮುಖ ಮಾರ್ಗದರ್ಶಕವಾಗಿದೆ. ಜನರು ಹಾಗೂ ರಾಜಕೀಯ ಪಕ್ಷಗಳು ಪ್ರಣಾಳಿಕೆಯ ಮಹತ್ವವನ್ನು ಮನವರಿಕೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ರಾಜಕೀಯ ರಂಗದಲ್ಲಿ ಮೋದಿ ತಂದಿರುವ ಪ್ರಮುಖ ಬದಲಾವಣೆ ಇದಾಗಿದೆ.
ಜಾಗತಿಕ ರಂಗದಲ್ಲಿ ಅಮೆರಿಕ, ಯುರೋಪ್ ಮತ್ತು ಕೊಲ್ಲಿ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಅವರು ಹೊಸ ಎತ್ತರಕ್ಕೆ ಒಯ್ದಿದ್ದಾರೆ. ರೈತರು, ದಲಿತರು, ಮಹಿಳೆಯರು, ತುಳಿತಕ್ಕೊಳಗಾದವರು ಮತ್ತು ಯುವಜನರ ಜೀವನಮಟ್ಟವನ್ನು ಏರಿಸುವುದಕ್ಕೆ ಮೋದಿ ಶ್ರಮಿಸುತ್ತಿದ್ದಾರೆ. ಜೂನ್ 21ರಂದು ಆಚರಿಸಲಾಗುವ ‘ಯೋಗ ದಿನ’ ಮನುಕುಲಕ್ಕೆ ಮೋದಿಯವರ ಕೊಡುಗೆಯಾಗಿದೆ. ಮೋದಿ ಹುಟ್ಟುಹಬ್ಬವನ್ನು ಬಿಜೆಪಿ ಸದಾ ‘ಸೇವಾ ದಿನ’ವಾಗಿ ಆಚರಿಸುತ್ತಿದೆ. ಈ ಬಾರಿ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗಿದೆ. ಬಡವರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ಹಂಚಲಾಗುತ್ತದೆ. ಇದು ಪ್ರಧಾನಿ ಮೋದಿಯವರ ಜೀವನದಿಂದ ಸ್ಪೂರ್ತಿ ಪಡೆದು ದೇಶ ಹಾಗೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಪ್ರತಿಜ್ಞೆ ಕೈಗೊಳ್ಳುವ ದಿನವಾಗಿದೆ.
ಊಹೆಗೂ ಮೀರಿದ ಸಾಧನೆ: ಜಮ್ಮು-ಕಾಶ್ಮೀರದಿಂದ ಸಂವಿಧಾನದ 370 ಹಾಗೂ 35ಎ ವಿಧಿಗಳನ್ನು ಹಿಂಪಡೆಯಲು ಸಾಧ್ಯ ಎಂಬುದನ್ನು ಭಾರತೀಯರು ಎಂದಾದರೂ ನಂಬಿದ್ದರೇ? ಈ ಮುಖ್ಯ ಗುರಿಯನ್ನು ತಲುಪಲು ಅನೇಕ ದಶಕಗಳೇ ಕಳೆದುಹೋದವು. ಆದರೆ, 2019 ಆಗಸ್ಟ್ 5ರಂದು ಎಲ್ಲವೂ ಬದಲಾಯಿತು. ಮೋದಿಯವರ ಪ್ರಬಲ ಇಚ್ಛಾಶಕ್ತಿಯಿಂದಾಗಿ 370ನೇ ವಿಧಿಯನ್ನು ಹಿಂಪಡೆಯಲು ಸಾಧ್ಯವಾಯಿತು. ಅದು ನಮ್ಮ ‘ಒಂದು ದೇಶ-ಒಂದು ಸಂವಿಧಾನ’ ಸಂಕಲ್ಪವನ್ನು ಪೂರ್ಣಗೊಳಿಸಿತು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಯಿತು. ಭಯೋತ್ಪಾದನೆಯನ್ನು ನಿರ್ಣಾಯಕವಾಗಿ ನಿಭಾಯಿಸಲು ಹಿಂದಿನ ಯಾವುದೇ ಸರ್ಕಾರ ಧೈರ್ಯ ತೋರಿಸಿರಲಿಲ್ಲ. ಸರ್ಜಿಕಲ್ ಸ್ಟ್ರೈಕ್ ಮತು ್ತೈಮಾನಿಕ ದಾಳಿಗಳ ಮೂಲಕ ಮೋದಿಯವರು ಭಯೋತ್ಪಾದಕರು, ಭಾರತವಿರೋಧಿ ಶಕ್ತಿಗಳು ಹಾಗೂ ಜಗತ್ತಿಗೆ ಖಡಕ್ ಸಂದೇಶ ರವಾನಿಸಿದರು. ಭಾರತ ಬದಲಾಗಿದೆ ಎಂಬುದು ಕೂಡ ಅವರ ಸ್ಪಷ್ಟ ಸಂದೇಶವಾಗಿತ್ತು. ಭಾರತ ಒಂದು ಮೃದು ದೇಶವಲ್ಲ; ತನ್ನ ಜನರು ಹಾಗೂ ಗಡಿಗಳನ್ನು ರಕ್ಷಿಸಲು ಅದು ಏನು ಬೇಕಾದರೂ ಮಾಡಬಲ್ಲದು ಎಂಬ ಸಂದೇಶ ಅದಾಗಿತ್ತು.