ನ್ಯೂಸ್

45 ಸೆಕೆಂಡ್​ಗೆ ಒಂದು ಕಾರು ತಯಾರಿಸಲಿರುವ ಎಲಾನ್ ಮಸ್ಕ್!

ಮೆಕ್ಸಿಕೋ: ಹೂಡಿಕೆದಾರರ ಈವೆಂಟ್‌ನಲ್ಲಿ, ಮುಂದಿನ ಹೂಡಿಕೆಯ ಹಂತವಾಗಿ ಉತ್ತರ ಮೆಕ್ಸಿಕೊದಲ್ಲಿ ಹೊಸ ಟೆಸ್ಲಾ ಕಾರ್ಖಾನೆ ಸ್ಥಾಪನೆಯಾಗಲಿದ್ದು ಅಮೆರಿಕ, ಜರ್ಮನಿ ಮತ್ತು ಚೀನಾದ ಹೊರಗಿನ ಮೊದಲ ಪ್ಲಾಂಟ್​ ಆಗಿದೆ ಎಂದು ಎಲಾನ್ ಮಸ್ಕ್ ಹೇಳಿದರು. ಮೆಕ್ಸಿಕೋದಲ್ಲಿ ಗಿಗಾಫ್ಯಾಕ್ಟರಿ ಸ್ಥಾಪನೆಯಾಗಲಿದ್ದು ಕಂಪನಿಯ ಮುಂದಿನ ವಾಹನಗಳನ್ನು ಇತರ ಕಾರುಗಳೊಂದಿಗೆ ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಈ ಹೊಸ ಗಿಗಾಫ್ಯಾಕ್ಟರಿಯು 6,000 ಉದ್ಯೋಗಗಳನ್ನು ಸೃಷ್ಟಿಸಿ ಬ್ಯಾಟರಿಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಟೆಸ್ಲಾ ತನ್ನ ಎಲ್ಲಾ ಗಿಗಾಫ್ಯಾಕ್ಟರಿಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಮಸ್ಕ್​​ ಹೇಳಿದರು.

ಟೆಸ್ಲಾ ಕಂಪನಿ ನಾಲ್ಕು ಮಿಲಿಯನ್ ಕಾರುಗಳನ್ನು ಉತ್ಪಾದಿಸಿದ ಮೈಲಿಗಲ್ಲನ್ನು ತಲುಪಿದ್ದು ಪ್ರತಿ 45 ಸೆಕೆಂಡಿಗೆ ವಾಹನವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಟೆಸ್ಲಾದ ಜಾಗತಿಕ ಉತ್ಪಾದನಾ ಮುಖ್ಯಸ್ಥ ಟಾಮ್ ಝು ಹೇಳಿದ್ದಾರೆ.

2030 ರ ವೇಳೆಗೆ ವಾರ್ಷಿಕವಾಗಿ 20 ಮಿಲಿಯನ್ ವಾಹನಗಳಿಗೆ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಸಂಸ್ಥೆ ಹೇಳಿತ್ತು. ಸದ್ಯ ಟೆಸ್ಲಾದ ಉತ್ಪಾದನಾ ಸಾಮರ್ಥ್ಯ ಪ್ರಸ್ತುತ ಸಾಮರ್ಥ್ಯಕ್ಕಿಂತ 10 ಪಟ್ಟು ಹೆಚ್ಚಾಗಿದೆ. ಬೇಡಿಕೆ ಪೂರೈಸಲು ಇರುವ ನಾಲ್ಕು ಕಾರ್ಖಾನೆಗಳು ಸಾಕಾಗುವುದಿಲ್ಲ. ಹೀಗಾಗಿ ಕಂಪನಿಗೆ ಹೆಚ್ಚಿನ ಫ್ಯಾಕ್ಟರಿಗಳ ಅಗತ್ಯವಿದೆ ಎಂದು ಝು ಹೇಳಿದ್ದಾರೆ. 2030ರ ವೇಳೆಗೆ 20 ಮಿಲಿಯನ್ ವಾರ್ಷಿಕ ಮಾರಾಟ ಗುರಿಯನ್ನು ತಲುಪಲು ಟೆಸ್ಲಾ ಹತ್ತು ಮಾಡೆಲ್​ಗಳನ್ನು ಹೊಂದಬಹುದು ಎಂದು ಮಸ್ಕ್ ಹೇಳಿದರು.

ಈ ಮಧ್ಯೆ, ಟೆಸ್ಲಾ ಈಗಾಗಲೇ ಅನಾವರಣಗೊಳಿಸಿರುವ ಹೊಸ ರೋಡ್​ಸ್ಟರ್​ ಕಾರು ಮಾತ್ರ ಉತ್ಪಾದನಾ ಹಂತವನ್ನು ತಲುಪಿಲ್ಲ. ಸಂಸ್ಥೆಯ ವಿನ್ಯಾಸ ಮುಖ್ಯಸ್ಥ ಫ್ರಾಂಜ್ ವಾನ್ ಹೋಲ್‌ಝೌಸೆನ್ ಅವರು "ಹೊಸ ರೋಡ್‌ಸ್ಟರ್ ಕಾರು ಕಂಪನಿಗೆ ಇದೀಗ ಆದ್ಯತೆಯಾಗಿಲ್ಲ. ಆದ್ದರಿಂದ, ಹೊಸ ರೋಡ್‌ಸ್ಟರ್ ಮೆಕ್ಸಿಕೋದ ಗಿಗಾಫ್ಯಾಕ್ಟರಿಯಲ್ಲಿ ನಿರ್ಮಿಸಲಿರುವ ಮುಂದಿನ ವಾಹನವಲ್ಲ ಎಂದಿದ್ದಾರೆ. (ಏಜೆನ್ಸೀಸ್​)