ದಾವಣಗೆರೆ: ನಿನ್ನೆ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದಿರುವ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಈ ಹಿಂದೆ ಅಕ್ರಮ ಹಣ ವರ್ಗಾವಣೆಯಲ್ಲಿ ಅಮಾನತ್ತಾಗಿದ್ದರು ಎಂದು ದಿಗ್ವಿಜಯ ನ್ಯೂಸ್ಗೆ ತಿಳಿದುಬಂದಿದೆ.
ಹಿಂದೆ 55 ಕೋಟಿ ರೂಪಾಯಿ ಸರ್ಕಾರದ ಹಣ ಅಕ್ರಮ ವರ್ಗಾವಣೆಯಲ್ಲಿ ಅಮಾನತ್ತಾಗಿದ್ದ ಪ್ರಶಾಂತ್ ಮಾಡಾಳ್ 2008ರ ಬ್ಯಾಚ್ನ ಕೆಎಎಸ್ ಅಧಿಕಾರಿ. ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಬಗ್ಗೆ ದಿಗ್ವಿಜಯ್ ನ್ಯೂಸ್ಗೆ ಎಕ್ಸ್ಲೂಸಿವ್ ಮಾಹಿತಿ ಲಭಿಸಿದೆ.
ಏನಿದು 55 ಕೋಟಿ ರೂಪಾಯಿ ಸರ್ಕಾರದ ಹಣ ಅಕ್ರಮ ವರ್ಗಾವಣೆ?
2017ರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಸಿಲುಕಿ ಪ್ರಶಾಂತ್ ಮಾಡಾಳ್ ಅಮಾನತ್ತಾಗಿದ್ದ. ಆಗ ಪ್ರಶಾಂತ್ ಮಾಡಾಳ್, KRIDL ಉಪ ಹಣಕಾಸು ಅಧಿಕಾರಿಯಾಗಿದ್ದ. ಈ ಸಂದರ್ಭ ಅಕ್ರಮ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ. ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್‌ಗೆ ಎಂದು ಬ್ಯಾಂಕಿನಲ್ಲಿ ಇಟ್ಟಿದ್ದ 55 ಕೋಟಿ ರೂ.ಯನ್ನು ಪ್ರಶಾಂತ್ ಮಾಡಾಳ್ ಕಬಳಿಸಿದ್ದ ಪ್ರಕರಣದಲ್ಲಿ ಅಮಾನತಾಗಿದ್ದರು.
ಆಗ ಪ್ರಶಾಂತ್ ಮಾಡಾಳ್ ಸೇರಿ ಮೂವರು ಅಧಿಕಾರಿಗಳನ್ನು ಕಾಂಗ್ರೆಸ್ ಸರ್ಕಾರ ಅಮಾನತುಗೊಳಿಸಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ 55 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.
ಪ್ರಶಾಂತ್ ಮಾಡಾಳ್ ಅಕ್ರಮದ ಬಗ್ಗೆ ಇನ್ನೂ ಸಿಐಡಿಯಲ್ಲೂ ತನಿಖೆ ನಡೆದಿದ್ದು ಮಂಗಳೂರಿನ ಕುಳಾಯಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಶಾಖೆಯಲ್ಲಿದ್ದ 55 ಕೋಟಿ ರೂಪಾಯಿ ಸ್ಥಿರ ಠೇವಣಿಯನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದು ಬೆಳಕಿಗೆ ಬಂದಿತ್ತು.
ಬೆಂಗಳೂರಿನ ಕೋರಮಂಗಲದ ವಿಜಯ ಬ್ಯಾಂಕಿನ ವಿವಿಧ ನಿಷ್ಕ್ರಿಯ ಖಾತೆಗಳಿಗೆ ಓವರ್ಸೀಸ್ ಬ್ಯಾಂಕಿನಲ್ಲಿದ್ದ KRIDL ಕೋಟಿಗಟ್ಟಲೆ ಹಣ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಂತರಿಕ ಹಣಕಾಸು ಸಲಹೆಗಾರರು ನಡೆಸಿದ ತನಿಖೆಯಲ್ಲಿ ಅಕ್ರಮ ಬಯಲಾಗಿತ್ತು ಇಂತಹ ಗಂಭೀರ ಪ್ರಕರಣ ತನಿಖೆ ಹಂತದಲ್ಲೇ ಇರುವಾಗ ಲೋಕಾಯುಕ್ತ ಬಲೆಗೆ ಪ್ರಶಾಂತ್ ಮಾಡಾಳ್ ಬಿದ್ದಿದ್ದಾನೆ.