Actor Bala: ಕಳೆದ ವರ್ಷ ಮೊದಲ ಪತ್ನಿ ಗಾಯಕಿ ಅಮೃತಾ ಸುರೇಶ್ (Amrutha Suresh) ಜತೆಗೆ ದೊಡ್ಡ ವಿವಾದ ಮಾಡಿಕೊಂಡಿದ್ದ ತೆಲುಗು ನಟ ಬಾಲಾ, ಅಮೃತಾ ಮತ್ತು ಅವರ ಮಗಳ ಗಂಭೀರ ಆರೋಪಗಳಿಗೆ ಗುರಿಯಾಗಿದ್ದರು. ಈ ಎಲ್ಲಾ ವಿವಾದಗಳ ನಡುವೆಯೇ ನಾಲ್ಕನೇ ಮದುವೆಯಾದ ಬಾಲಾ, ತನ್ನ ಕುಟುಂಬದವರೇ ಆದ ಕೋಕಿಲಾರನ್ನು ಎಲ್ಲರ ಸಮ್ಮುಖದಲ್ಲಿ ವಿವಾಹವಾದರು. ಈ ವಿಚಾರ ಸಾಕಷ್ಟು ಟ್ರೋಲ್, ಟೀಕಗೆಳಿಗೂ ಗುರಿಯಾಗಿತ್ತು.
ಇದನ್ನೂ ಓದಿ: ಮಾರ್ಕಾಂಡೇಶ್ವರ ಸ್ವಾಮಿಗೆ 2 ಕೋಟಿ ರೂ. ಬೇಡಿಕೆ !
ಈ ಹಿಂದಿನಿಂದಲೂ ತನ್ನ ಮಾಜಿ ಪತ್ನಿಯರ ವಿಚಾರಕ್ಕೆ ವ್ಯಾಪಕ ಟ್ರೋಲ್, ಟೀಕೆಗಳಿಗೆ ಆಹಾರವಾಗುತ್ತಿದ್ದ ಬಾಲಾ, ಒಂದಲ್ಲ ಒಂದು ಆರೋಪಗಳನ್ನು ಎದುರಿಸುತ್ತಲೇ ಇದ್ದಾರೆ. ಇಷ್ಟಾದರೂ ಸಹ ಯಾವುದಕ್ಕೂ ಕ್ಯಾರೇ ಎನ್ನದ ನಟ, ನಾಲ್ಕನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಮಾಜಿ ಪತ್ನಿಯರ ಹೇಳಿಕೆ ಮತ್ತು ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಈ ಹಿಂದೆ ಬಾಲಾ ವಿರುದ್ಧ ಸರಣಿ ಆರೋಪ ಹೊರಿಸಿದ್ದ ಮೊದಲ ಮಾಜಿ ಪತ್ನಿ ಅಮೃತಾ, ದಾಂಪತ್ಯ ಜೀವನದಲ್ಲಿ ತಾನು ಅನುಭವಿಸಿದ ಚಿತ್ರಹಿಂಸೆಯನ್ನು ಎಳೆ ಎಳೆಯಾಗಿ ವಿಡಿಯೋ ಮುಖೇನ ಹಂಚಿಕೊಂಡು ಕಣ್ಣೀರಿಟ್ಟಿದ್ದರು. ಅಂದು ಈ ವಿವಾದ ಟಾಲಿವುಡ್ನಲ್ಲಿ ದೊಡ್ಡ ಸ್ವರೂಪವನ್ನೇ ಪಡೆದುಕೊಂಡಿತ್ತು.
ತನ್ನ ಮಾಜಿ ಸಂಗಾತಿಗಳನ್ನು ಒಳಗೊಂಡ ಹಲವಾರು ವಿವಾದಗಳಲ್ಲಿ ಸಿಲುಕಿರುವ ನಟ ಬಾಲಾ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಈ ಬಾರಿ, ಅವರ ಮಾಜಿ ಪತ್ನಿ ಡಾ. ಎಲಿಜಬೆತ್ ಉದಯನ್, ಬಾಲಾ ವಿರುದ್ಧ ಗಂಭೀರ ಆರೋಪಗಳನ್ನು ಎಸಗಿದ್ದಾರೆ. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ನಟನ ವಿರುದ್ಧ ಸರಣಿ ಆರೋಪಗಳನ್ನು ಹೊರಿಸಿರುವ ಎಲಿಜಬೆತ್, "ಬಾಲಾಗೆ ಪರಿಚಯವಿರುವ ಕಸ್ತೂರಿ ಎಂಬ ಯುವತಿ, ನನ್ನ ಪ್ರತಿ ಪೋಸ್ಟ್, ವಿಡಿಯೋಗಳಿಗೆ ಕೆಟ್ಟ ಸಂದೇಶಗಳು ಮತ್ತು ಕಮೆಂಟ್‌ಗಳನ್ನು ಹಾಕುತ್ತಾಳೆ. ಅದರ ಸ್ಕ್ರೀನ್‌ಶಾಟ್‌ಗಳನ್ನು ನಾನ್ನಿಲ್ಲಿ ಹಂಚಿಕೊಂಡಿದ್ದೇನೆ ನೋಡಿ. ಬಾಲಾನನ್ನು ಪದೇ ಪದೇ ಸಮರ್ಥಿಸಿಕೊಳ್ಳುವ ಈಕೆ, ನನ್ನನ್ನು ಮಾನಸಿಕ ಅಸ್ವಸ್ಥೆ ಎಂದು ಆರೋಪಿಸುತ್ತಿದ್ದಾಳೆ" ಎಂದಿದ್ದಾರೆ.
"ಕಸ್ತೂರಿ ನನ್ನ ವೀಡಿಯೊಗಳ ಕೆಳಗೆ ಅವಹೇಳನಕಾರಿ ಕಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾಳೆ. ನನ್ನ ಮೇಲೆ ಮಾತ್ರವಲ್ಲದೇ ನನ್ನ ಕುಟುಂಬದವರ ಮೇಲೂ ಶಾಪವಿಡುತ್ತಿದ್ದಾಳೆ. ಇಲ್ಲಿ ಈಕೆ ಏಕೆ ಆತನನ್ನು ಸಮರ್ಥಿಸಿಕೊಳ್ಳುತ್ತಿದ್ದಾಳೆ ಎಂಬುದು ನನಗೆ ಅರ್ಥವಾಗ್ತಿಲ್ಲ. ಮುಂದಿನ ದಿನಗಳಲ್ಲಿ ನಾನು ಬದುಕಿಲ್ಲ ಅಥವಾ ಅನುಮಾನಸ್ಪದವಾಗಿ ಸಾವನ್ನಪ್ಪಿದರೆ, ಅದಕ್ಕೆ ಕಾರಣವೇನು ಎಂಬುದನ್ನು ತಿಳಿಸುವ ಪ್ರಯತ್ನ ನನ್ನದು. ಆ ರೀತಿ ನಾನೇನಾದರೂ ಸತ್ತರೇ ಅದಕ್ಕೆ ಬಾಲಾ ಮತ್ತು ಆತನ ಸಹಚರರೇ ಕಾರಣ" ಎಂದು ಅಳಲು ತೋಡಿಕೊಂಡಿದ್ದಾರೆ.
"ಕಸ್ತೂರಿ ಬೆದರಿಕೆ, ಅಶ್ಲೀಲ ಪದಗಳ ಬಳಕೆಯ ನಂತರ ನಮ್ಮ ಮನೆಯವರ ಆರೋಗ್ಯದಲ್ಲಿ ಏರುಪೇರುಗಳಾಗಿವೆ. ಇದಕ್ಕೆ ಕಾರಣ, ಇತ್ತೀಚಿನ ದಿನಗಳಲ್ಲಿ ನಮ್ಮ ತಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಿಂದೆ ಗೂಂಡಾಗಿರಿ ಮಾಡುತ್ತಿದ್ದರು. ಈಗ ಗೂಂಡಾಗಿರಿಯನ್ನು ಬಿಟ್ಟು ಮಾಟ ಮಂತ್ರದ ಮೊರೆ ಹೋಗಿದ್ದಾರೆ ಎಂಬುದು ನನ್ನ ಅನುಮಾನ. ಆರೋಗ್ಯವಾಗಿದ್ದ ತನ್ನ ತಂದೆ ತೀವ್ರ ಎದೆ ನೋವು ಮತ್ತು ಹೃದಯಾಘಾತದಿಂದ ಬಳಲುತ್ತಿದ್ದಾರೆ. ಈ ಬೆಳವಣಿಗೆ ಆಕೆಯ ಶಾಪ, ಬೆದರಿಕೆಗಳ ನಂತರ ಶುರುವಾಗಿವೆ" ಎಂದು ಹೇಳಿದ್ದಾರೆ.
"ಬಾಲಾ ಜತೆಗಿನ ನನ್ನ ಸಂಬಂಧ ಅತ್ಯಂತ ಕರಾಳ, ಹಿಂಸಾತ್ಮಕ, ನಿಂದನೆ ಮತ್ತು ಅವಮಾನಗಳಿಂದಲೇ ಕೂಡಿತ್ತು. ಇನ್ನೊಬ್ಬರ ಮುಂದೆ ಆತ ನನ್ನನ್ನು ಕಾಲಿನ ಕಸದಂತೆ ನೋಡ್ತಿದ್ದ. ಅನ್ಯರ ಎದುರು ಅವಮಾನಕರ ಕೃತ್ಯಗಳನ್ನು ಮಾಡಿಸುತ್ತಿದ್ದ. ಅದು ಬಲವಂತವಾಗಿ. ಇದರಿಂದಾಗಿ ಭಾವನಾತ್ಮಕ ಮತ್ತು ಮಾನಸಿಕ ಒತ್ತಡದಿಂದಾಗಿ ಅಂದು ನಾನು ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ್ದೆ. ಕೋಪದಲ್ಲಿ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ನನ್ನ ಮುಖಕ್ಕೆ ಜೋರಾಗಿ ಎಸೆದಿದ್ದ" ಎಂದು ತಮ್ಮ ಅಳಲನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).