ನ್ಯೂಸ್

ಜಲಸಂಕಷ್ಟ ನಿವಾರಿಸಿ; ಭೀಕರ ಸ್ಥಿತಿಗೆ ಸಾಕ್ಷಿಯಾಗಿವೆ ಖಾಲಿ ಜಲಾಶಯಗಳು

ರಾಜ್ಯದಲ್ಲಿ ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಕೃಷಿವಲಯ ಗಂಭೀರ ಸಂಕಷ್ಟಕ್ಕೆ ಒಳಗಾಗಿದೆ. ಬೇಸಿಗೆ ಆರಂಭಕ್ಕೆ ಇನ್ನೂ ಎರಡು ತಿಂಗಳಿರುವಾಗಲೇ ಕರ್ನಾಟಕದ ಬಹುತೇಕ ಜಲಾಶಯಗಳ ನೀರಿನ ಸಂಗ್ರಹ ಕುಸಿದಿದ್ದು, ಸಂಪೂರ್ಣ ಖಾಲಿಯಾಗುವ ಆತಂಕ ಸೃಷ್ಟಿಯಾಗಿದೆ. ಕಾವೇರಿ ಮತ್ತು ಕೃಷ್ಣ ಕಣಿವೆ ಪ್ರದೇಶದಲ್ಲಿ ಜಲಸಂಕಷ್ಟ ಹೆಚ್ಚುತ್ತಿದೆ. ಹಳೇ ಮೈಸೂರು ಭಾಗ, ಮಲೆನಾಡು ಪ್ರದೇಶ, ಕರಾವಳಿ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹೀಗೆ ರಾಜ್ಯದ ಎಲ್ಲ ಕಡೆಗಳಲ್ಲೂ ಈಗಲೇ ನೀರಿನ ಸಮಸ್ಯೆ ತಲೆದೋರಿದ್ದು, ಬೇಸಿಗೆ ಹೇಗಿರಬಹುದು ಎಂಬುದು ಯೋಚನೆಯಾಗಿದೆ.

ಕಾವೇರಿ ಕಣಿವೆಯ ಹಾರಂಗಿ, ಹೇಮಾವತಿ, ಕೃಷ್ಣರಾಜ ಸಾಗರ, ಕಬಿನಿ ಜಲಾಶಯಗಳಲ್ಲಿ, ಕೃಷ್ಣ ಕಣಿವೆಯ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕುಸಿಯುತ್ತ ಸಾಗಿದ್ದು, ಒಳಹರಿವು ಕಡಿಮೆಯಾಗುತ್ತಿದೆ. ಬೇಸಿಗೆ ಅಡಿಯಿಡುವ ಮುನ್ನವೇ ಜಲಸಂಗ್ರಹ ಈ ಪ್ರಮಾಣದಲ್ಲಿ ಕಡಿಮೆಯಾಗಿರುವುದು ನಿಜಕ್ಕೂ ಶೋಚನೀಯ.

ಗ್ರಾಮೀಣ ಭಾಗಗಳಲ್ಲಂತೂ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದರೆ, ಹಲವು ಪಟ್ಟಣ, ನಗರಗಳು ಟ್ಯಾಂಕರ್​ಗಳನ್ನು ಅವಲಂಬಿಸಿವೆ. ಸಮರ್ಪಕವಾಗಿ ಕುಡಿಯುವ ನೀರು ಸಿಗದ ಪರಿಣಾಮ ಕಲುಷಿತ ನೀರು ಕುಡಿದು ಪ್ರಾಣಹಾನಿಯಾದ, ಅಸ್ವಸ್ಥರಾದ ಘಟನೆಗಳು ಸಂಭವಿಸಿರುವುದು ನೀರಿನ ಸಮಸ್ಯೆಯ ತೀವ್ರತೆಗೆ ಸಾಕ್ಷಿ ಎನ್ನಬಹುದು. ಕಲ್ಯಾಣ ಕರ್ನಾಟಕ ಭಾಗದಲ್ಲಂತೂ ಇಂಥ ಘಟನೆಗಳು ಮರುಕಳಿಸುತ್ತಲೇ ಇವೆ. ಬಳ್ಳಾರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಸು ಕೊಟ್ಟರೂ, ಒಂದು ಕೊಡ ನೀರು ಸಿಗದಂಥ ಪರಿಸ್ಥಿತಿ. ಟ್ಯಾಂಕರ್ ನೀರಿಗಾಗಿ ಕಿಲೋಮೀಟರುಗಟ್ಟಲೇ ಅಲೆಯಬೇಕು. ಇದೇ ಸ್ಥಿತಿ ಮುಂದುವರಿದರೆ ಬೇಸಿಗೆಯಲ್ಲಿ ರಾಜ್ಯದಾದ್ಯಂತ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗುವ ಸಂಭವವಿದೆ. ಅಂತಹ ಸ್ಥಿತಿಯನ್ನು ತಪ್ಪಿಸಲು ರಾಜ್ಯ ಸರ್ಕಾರ ಈಗಿನಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜಿಲ್ಲಾವಾರು, ತಾಲೂಕುವಾರು ಸ್ಥಿತಿಯನ್ನು ಅವಲೋಕಿಸಿ, ಕೈಗೊಳ್ಳಬಹುದಾದ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಬೇಕಿದೆ. ಈ ವಿಷಯದಲ್ಲಿ ಸ್ಥಳೀಯ ಆಡಳಿತಗಳ ಪಾತ್ರ ಬಹುಮುಖ್ಯವಾಗಿದೆ. ಕುಡಿಯುವ ನೀರಿನ ಸಮರ್ಪಕ ಲಭ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಮರೋಪಾದಿ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ.

2023 ಈವರೆಗಿನ ಅತಿ ಹೆಚ್ಚು ಉಷ್ಣ ವರ್ಷ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಹವಾಮಾನ ಬದಲಾವಣೆಯು ಮಳೆ ಕೊರತೆಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರಸ್ನೇಹಿ ಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕಿದೆ. ಅಲ್ಲದೆ, ಜಲಸಂರಕ್ಷಣೆ, ಜಲಮರುಪೂರಣ, ನೀರಿನ ಮರುಬಳಕೆ, ಮಳೆನೀರು ಸಂಗ್ರಹಕ್ಕೆ ಹೆಚ್ಚು ಒತ್ತು ನೀಡುವುದು ಸರ್ಕಾರ ಮತ್ತು ಸಮುದಾಯದ ಕರ್ತವ್ಯವಾಗಿದೆ.