ದಂಡಂ ದಶಗುಣಂ ಎಂಬುದು ಚರ್ಚೆ ವಿಷಯವಾದಾಗ ಮೊದಲು ಕಣ್ಮುಂದೆ ಬರುವ ಮೂಲಭೂತ ಅಸ್ತ್ರವೆಂದರೆ ಬೆತ್ತ, ದೊಣ್ಣೆ, ಲಾಠಿ ಅಥವಾ ಮರದ ಕೊಂಬೆ.
ಹಠ ಮಾಡುವ ಮಗುವನ್ನು ಬೆದರಿಸಲು ಪಾಲಕರಿಗೆ ಅಥವಾ ಅಪರಾಧಿಯ ಬಾಯಿ ಬಿಡಿಸಲು ಪೊಲೀಸರಿಗೆ ಸಹಾಯವಾಗುವ ಪ್ರಮುಖ ಅಸ್ತ್ರವೆಂದರೆ ಲಾಠಿ.
ಈ ಪರಿಕಲ್ಪನೆ ಪ್ರಾಣಿಗಳಲ್ಲೂ ಇದೆ ಎಂದರೆ ಅಚ್ಚರಿಯಾಗುತ್ತದಲ್ಲವೆ? ಅದಕ್ಕೊಂದು ಉದಾಹರಣೆ ಇಲ್ಲಿದೆ. ನೋಡಿ.
ಅರಣ್ಯದಲ್ಲಿ ಆನೆಯೊಂದು ಖಡ್ಗಮೃಗವನ್ನು ಓಡಿಸಲು ಮರದ ಕೊಂಬೆಯನ್ನು ಬಳಸಿದೆ. ಖಡ್ಗಮೃಗವನ್ನು ದಂಡಿಸಲು ಈ ದಂಡವನ್ನು ಅಸ್ತ್ರವಾಗಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೋಡುಗರ ಮೊಗದಲ್ಲಿ ನಗೆಯುಕ್ಕಿಸುತ್ತಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಾಂತ ನಂದಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮತ್ತು “ಆನೆ ಕೋಪಗೊಂಡು ಖಡ್ಗಮೃಗವನ್ನು ದೂರ ಕಳುಹಿಸಲು ಮರದ ಕೊಂಬೆಯನ್ನು ಅಸ್ತ್ರವಾಗಿ ಬಳಸಿದೆ. ನನ್ನಿಂದ ದೂರ ಹೋಗು, ಇಲ್ಲದಿದ್ದರೆ ಈ ಮರದ ಕೊಂಬೆಯಂತೆ ನಿನ್ನನ್ನೂ ಆಚೆ ಎಸೆಯುತ್ತೇನೆ'' ಎಂದು ಸ್ಪಷ್ಟ ಸಂದೇಶವನ್ನು ಖಡ್ಗಮೃಗಕ್ಕೆ ನೀಡಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಸಾವಿರಾರು ಜನ ಈ ವಿಡಿಯೋ ವೀಕ್ಷಿಸಿದ್ದು ಭರ್ಜರಿ ವೈರಲ್ ಆಗುತ್ತಿದೆ.. ಈ ವಿಡಿಯೋ ವನ್ಯಜೀವಿ ಪ್ರಿಯರನ್ನು ಆಕರ್ಷಿಸಿದೆ. ಕೋವಿಡ್ -19 ಕಾಯಿಲೆಯ ಈ ಸಂದರ್ಭದಲ್ಲಿ ಖಡ್ಗಮೃಗಕ್ಕೆ ಆನೆ ಸೋಷಿಯಲ್ ಡಿಸ್ಟನ್ಸಿಂಗ್ ಪಾಠ ಹೇಳಿಕೊಡುತ್ತಿರುವಂತಿದೆ. ಆನೆ ಬುದ್ಧಿವಂತಿಕೆ ಮೆಚ್ಚಿಕೊಂಡವರು, ತಮಾಷೆಯಾಗಿ ತೆಗೆದುಕೊಂಡವರು ಹೀಗೆ ಎಲ್ಲ ಕಮೆಂಟ್ಗಳ ಸುರಿಮಳೆಯೇ ಆಗುತ್ತಿದೆ.