ಬೆಂಗಳೂರು: ಕಾಂಗ್ರೆಸ್ನ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಗೃಹಜ್ಯೋತಿಗೆ ಚಾಲನೆ ಸಿಕ್ಕ ಆರಂಭದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಕರೆಂಟ್ ಬಿಲ್ ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂದು ಕೆಲವರು ಆರೋಪಿಸಿದ್ದರು.
ಇದೀಗ ಅಂಥದ್ದೇ ಒಂದು ಪ್ರಕರಣ ಕಂಡುಬಂದಿದೆ. ಬೆಸ್ಕಾಂ ನೀಡಿರುವ ಕರೆಂಟ್ ಬಿಲ್ ಬಗ್ಗೆ ಬಳಕೆದಾರರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದಾರೆ. ಇತ್ತೀಚಿನ ಬಿಲ್ ಜತೆಗೆ ಹಿಂದಿನ ಎರಡು ಬಿಲ್ಗಳನ್ನೂ ಹಂಚಿಕೊಂಡಿರುವ ಅವರು ತಮಗೆ ಬಂದಿರುವ ಲೇಟೆಸ್ಟ್ ಬಿಲ್ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳಲ್ಲಿ 16 ದಿನಗಳ ಮನೆಯಲ್ಲಿ ಇರದಿದ್ದರೂ ಬಿಲ್ ಮಾತ್ರ ಮೂರುಪಟ್ಟು ಬಂದಿದೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಬಿಲ್ಗಳನ್ನು ಬೆಸ್ಕಾಂ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗೂ ಮೆನ್ಷನ್ ಮಾಡಿ ಅವರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…
ಯಾಸಿರ್ ಮುಷ್ತಾಕ್ ಎಂಬವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ಗೃಹಜ್ಯೋತಿಯ ಪರಿಣಾಮವೇ ಎಂದು ಪ್ರಶ್ನಿಸಿರುವ ಅವರು, ಗೃಹಜ್ಯೋತಿ ಬರುವುದಕ್ಕಿಂತಲೂ ಮೊದಲು ಬರುತ್ತಿದ್ದಂಥ ಬಿಲ್ನ ಮೂರು ಪಟ್ಟು ಬಿಲ್ ಈಗ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ನಲ್ಲಿ 16 ದಿನಗಳ ಕಾಲ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಈ ಸಲ 2247 ರೂ. ಬಿಲ್ ಬಂದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಜೊತೆಗೆ ಸೆಪ್ಟೆಂಬರ್ನಲ್ಲಿ ಬಂದಿದ್ದ 1528 ರೂ. ಬಿಲ್ ಮತ್ತು ಏಪ್ರಿಲ್ನಲ್ಲಿ ಬಂದಿದ್ದ 228 ರೂ. ಬಿಲ್ನ ಫೋಟೋ ಕೂಡ ಹಂಚಿಕೊಂಡಿದ್ದಾರೆ.