ನ್ಯೂಸ್

ಮಧ್ಯಪ್ರದೇಶದಲ್ಲಿಂದು ಮತದಾನ: ಬಿಜೆಪಿ-ಕಾಂಗ್ರೆಸ್​ಗೆ ನಿರ್ಣಾಯಕ ರಾಜ್ಯ; ಒಂದೇ ಹಂತದ ವೋಟಿಂಗ್..

ಇಂದೋರ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಶುಕ್ರವಾರ ಮತದಾನ ನಡೆಯಲಿದೆ. ಎಲ್ಲ 230 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. ಪ್ರಸ್ತುತ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎಸ್​ಪಿ, ಬಿಎಸ್​ಪಿ, ಸಿಪಿಎಂ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

ರಾಜ್ಯದಲ್ಲಿ ಒಟ್ಟು ಮತದಾರರು 5.6 ಕೋಟಿ ಇದ್ದು, ಈ ಪೈಕಿ 2.88 ಕೋಟಿ ಪುರುಷರು ಮತ್ತು 2.72 ಕೋಟಿ ಮಹಿಳೆಯರಿದ್ದಾರೆ. 22.36 ಲಕ್ಷ ಯುವಕ-ಯುವತಿಯರು ಪ್ರಥಮ ಬಾರಿಗೆ ಮತದಾನ ಮಾಡಲಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಕೆಲವು ತಿಂಗಳುಗಳ ಮುಂಚಿತವಾಗಿ ನಡೆಯುತ್ತಿರುವ ಮಧ್ಯಪ್ರದೇಶ ವಿಧಾನ ಸಭೆ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡಕ್ಕೂ ನಿರ್ಣಾಯಕವಾಗಿದೆ. ಏಕೆಂದರೆ, ಒಟ್ಟು 543ರ ಲೋಕಸಭೆ ಸದಸ್ಯರ ಪೈಕಿ, 29 ಸದಸ್ಯರು ಮಧ್ಯಪ್ರದೇಶದಿಂದ ಆಯ್ಕೆಯಾಗುತ್ತಾರೆ.

2018ರ ಫಲಿತಾಂಶ: 2018ರಲ್ಲಿ ಜರುಗಿದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಆದರೆ, ಅಧಿಕಾರ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಬಿಜೆಪಿ 109 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಆದರೆ, ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ 22 ಕಾಂಗ್ರೆಸ್ ಶಾಸಕರ ಬಂಡಾಯದಿಂದಾಗಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ 2020ರಲ್ಲಿ ಪತನಗೊಂಡಿತು. ನಂತರ ಶಿವರಾಜ್ ಸಿಂಗ್ ಚೌಹಾಣ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಛತ್ತೀಸಗಢದಲ್ಲಿ 2ನೇ ಹಂತ: ಛತ್ತೀಸ್​ಗಢ ವಿಧಾನಸಭೆ ಚುನಾವಣೆಯ 2ನೇ ಹಂತದ 70 ಕ್ಷೇತ್ರಗಳಿಗೆ ಮತದಾನ ಶುಕ್ರವಾರ ನಡೆಯಲಿದೆ. ಒಟ್ಟು 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 827 ಅಭ್ಯರ್ಥಿಗಳು ಪುರುಷರು, 130 ಮಹಿಳೆಯರು ಮತ್ತು ಒಬ್ಬರು ತೃತೀಯಲಿಂಗಿ ಇದ್ದಾರೆ ಎಂದು ಚುನಾವಣೆ ಆಯೋಗ ತಿಳಿಸಿದೆ. ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದ್ದರೆ, ಆಡಳಿತವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ತೀವ್ರ ಪೈಪೋಟಿ ನೀಡುತ್ತಿದೆ. ಎರಡನೇ ಹಂತದಲ್ಲಿ ಪಟಾನ್ ಕ್ಷೇತ್ರ ಗಮನಸೆಳೆಯುತ್ತಿದೆ. ಮುಖ್ಯಮಂತ್ರಿ ಭೂಪೇಶ್ ಬಾಘೕಲ್ ಮತ್ತು ಅವರ ಸೋದರನ ಪುತ್ರ ವಿಜಯ್ ಬಘೕಲ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಫಲಿತಾಂಶ ಡಿಸೆಂಬರ್ 3ರಂದು ಪ್ರಕಟಗೊಳ್ಳಲಿದೆ.

ಡಿಜಿಟಲ್ ಪ್ರಚಾರ ಕೈ ವೆಚ್ಚ ಅಧಿಕ: ಮಾದರಿ ನೀತಿ ಸಂಹಿತೆಗೆ ಅನುಗುಣವಾಗಿ ನ.17ರ ಮತದಾನಕ್ಕೆ ಮುಂಚಿತವಾಗಿ ಬಹಿರಂಗ ಚುನಾವಣೆ ಪ್ರಚಾರ ಸ್ಥಗಿತಗೊಂಡಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಡಿಜಿಟಲ್ ಪ್ರಚಾರವು ಸಾಮಾಜಿಕ ಮಾಧ್ಯಮ ಸೈಟ್​ಗಳಲ್ಲಿ, ವಿಶೇಷವಾಗಿ ಫೇಸ್​ಬುಕ್​ನಲ್ಲಿ ಮುಂದುವರಿದಿದೆ. ಕಳೆದ ಏಳು ದಿನಗಳಲ್ಲಿ ಫೇಸ್​ಬುಕ್ ಜಾಹೀರಾತುಗಳಿಗೆ ಕಾಂಗ್ರೆಸ್ ಹೆಚ್ಚು ಖರ್ಚು ಮಾಡಿದ್ದು, ಬಿಜೆಪಿಯು ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಅಧಿಕೃತವಾಗಿ ಫೇಸ್​ಬುಕ್ ಜಾಹೀರಾತಿಗೆ 26 ಲಕ್ಷ ರೂ.ಗಿಂತ ಹೆಚ್ಚು ಹಣವನ್ನು ಎರಡು ರಾಜ್ಯಗಳಲ್ಲಿ ಖರ್ಚು ಮಾಡಿದೆ. ತೆಲಂಗಾಣದಲ್ಲಿ 13.24 ಲಕ್ಷ ರೂಪಾಯಿ ಹಾಗೂ ಮಧ್ಯಪ್ರದೇಶಲ್ಲಿ 12.84 ಲಕ್ಷ ರೂಪಾಯಿ ವ್ಯಯಿಸಿದೆ. ಬಿಜೆಪಿಯು ಛತ್ತೀಸ್​ಗಢ ಮತ್ತು ರಾಜಸ್ಥಾನದಲ್ಲಿ ಫೇಸ್​ಬುಕ್ ಪ್ರಚಾರಕ್ಕಾಗಿ ಅಂದಾಜು 26 ಲಕ್ಷ ರೂಪಾಯಿ ಖರ್ಚು ಮಾಡಿದೆ. ಈ ಪೈಕಿ ಛತ್ತೀಸ್​ಗಢದಲ್ಲಿ 18.89 ಲಕ್ಷ ರೂಪಾಯಿ ಹಾಗೂ ರಾಜಸ್ಥಾನದಲ್ಲಿ 7 ಲಕ್ಷ ರೂಪಾಯಿ ವ್ಯಯಿಸಿದೆ.

ಬಿಜೆಪಿ ಕೋಟ್ಯಧಿಪತಿಗಳ ಪರ ರಾಹುಲ್ ಗಾಂಧಿ ವಾಗ್ದಾಳಿ

ಜೈಪುರ: ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಕಲ್ಯಾಣ ಯೋಜನೆಗಳನ್ನು ನಿಲ್ಲಿಸುತ್ತದೆ. ಕೋಟ್ಯಧಿಪತಿಗಳಿಗೆ ಸಹಾಯ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದರು. ಚುರು ಜಿಲ್ಲೆಯ ತಾರಾನಗರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ರಚನೆಯಾದರೆ ಅದು ಕಾಂಗ್ರೆಸ್ ಜಾರಿಗೊಳಿಸಿರುವ ಹಳೆಯ ಪಿಂಚಣಿ ಯೋಜನೆ, ಆರೋಗ್ಯ ವಿಮಾ ಯೋಜನೆ, ಸಬ್ಸಿಡಿ ಸಿಲಿಂಡರ್, ಮಹಿಳೆಯರಿಗೆ 10,000 ರೂ. ವಾರ್ಷಿಕ ಸಹಾಯಧನ ಯೋಜನೆಗಳನ್ನು ನಿಲ್ಲಿಸುತ್ತದೆ’ ಎಂದರು. ಬಿಜೆಪಿಯು ಕೋಟ್ಯಧಿಪತಿಗಳಿಗೆ ಸಹಾಯ ಮಾಡುತ್ತದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರು, ರೈತರು, ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದರು. ಕಾಂಗ್ರೆಸ್ ಪಕ್ಷವು ಬಡವರ ಜೇಬಿಗೆ ಹಣ ವರ್ಗಾವಣೆ ಮಾಡಿದರೆ ಬಿಜೆಪಿಯು ಅದಾನಿಯ ಜೇಬಿಗೆ ಹಾಕುತ್ತದೆ. ವಿದೇಶದಲ್ಲಿ ಕಂಪನಿಗಳನ್ನು ಖರೀದಿಸಲು ಅದಾನಿಗೆ ಬಿಜೆಪಿ ಸಹಾಯ ಮಾಡುತ್ತದೆ. ಆದರೆ, ಕಾಂಗ್ರೆಸ್ ಪಕ್ಷವು ರೈತರ ಜೇಬಿಗೆ ಹಣ ವರ್ಗಾಯಿಸುತ್ತದೆ ಎಂದು ಅವರು ಹೇಳಿದರು.

ರಾಜಸ್ಥಾನದಲ್ಲಿ ಬಿಜೆಪಿ ಪ್ರಣಾಳಿಕೆ

ಉಜ್ವಲ ಯೋಜನೆಯ ಫಲಾನುಭವಿಗಳಿಗೆ 450 ರೂ.ಗೆ ಎಲ್​ಪಿಜಿ ಸಿಲಿಂಡರ್, ಐದು ವರ್ಷಗಳಲ್ಲಿ 2.5 ಲಕ್ಷ ಸರ್ಕಾರಿ ಉದ್ಯೋಗಗಳು, ಪಿಎಂ ಕಿಸಾನ್ ಯೋಜನೆಯಲ್ಲಿ ರೈತರಿಗೆ ಆರ್ಥಿಕ ಸಹಾಯ ಹೆಚ್ಚಳ. ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಬಿಜೆಪಿ ಗುರುವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಗಳಿವು. ಇಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಹಗರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗುವುದು ಎಂದು ಹೇಳಿದರು. ಕನಿಷ್ಠ ಬೆಂಬಲ ಬೆಲೆಗಿಂತಲೂ ಹೆಚ್ಚಿನ ದರದಲ್ಲಿ ಪ್ರತಿ ಕ್ವಿಂಟಾಲ್​ಗೆ 2,700 ರೂ.ಗೆ ಗೋಧಿ ಖರೀದಿಸಲು ವ್ಯವಸ್ಥೆ ಮಾಡಲಾಗುವುದು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಆರ್ಥಿಕ ಸಹಾಯವನ್ನು ವರ್ಷಕ್ಕೆ 12,000 ರೂ.ಗೆ ಹೆಚ್ಚಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಮಹಿಳಾ ಠಾಣೆ ಮತ್ತು ಪ್ರತಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಡೆಸ್ಕ್ ಸ್ಥಾಪಿಸಲಾಗುವುದು. ಪ್ರತಿ ನಗರದಲ್ಲಿ ಆಂಟಿ ರೋಮಿಯೋ ಸ್ಕಾ್ವಡ್ ಸ್ಥಾಪಿಸಲಾಗುವುದು ಎಂದು ಹೇಳಿದರು.