Election Commission: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೊರಡಿಸಲಾದ ಪ್ರತಿಯೊಂದು ಆದೇಶವನ್ನೂ ಸರ್ವಸಮ್ಮತಿಯಿಂದ ಅನುಮೋದಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ಶುಕ್ರವಾರ ತಿಳಿಸಿವೆ. ಆಯೋಗದ ಹೆಸರಿನಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳ ವಿರುದ್ಧ ಸಂಧು ಮತ್ತು ಜೋಶಿ ಅವರು ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ ಎರಡು ದಿನಗಳ ನಂತರ ಈ ಸ್ಪಷ್ಟನೆ ಹೊರಬಿದ್ದಿದೆ.
ಬಿಹಾರ, ಅಸ್ಸಾಂ, 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿ ಪರಿಷ್ಕರಣೆ ಆದೇಶಗಳು ಹಾಗೂ ನಂತರದ 19 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಸ್ಐಆರ್ ಆದೇಶಗಳನ್ನು ಇಬ್ಬರೂ ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರು ಒಗ್ಗಟ್ಟಿನಿಂದ ಅನುಮೋದಿಸಿದ್ದಾರೆ. ಭಾರತದ ಪೌರತ್ವ ಕಾಯ್ದೆಯ ವಿಶಿಷ್ಟ ನಿಬಂಧನೆಗಳ ಅಡಿಯಲ್ಲಿ ಬರುವುದರಿಂದ, ಇತರ ರಾಜ್ಯಗಳಿಗಿಂತ ಭಿನ್ನವಾಗಿ ಅಸ್ಸಾಂನಲ್ಲಿ ಎಸ್ಐಆರ್ ಬದಲಿಗೆ ವಿಶೇಷ ಪರಿಷ್ಕರಣೆ (ಎಸ್ಆರ್) ನಡೆಸಲಾಗಿತ್ತು ಎಂದು ಮೂಲಗಳು ಹೇಳಿವೆ.
ಕಾಗದದ ಕೆಲಸವನ್ನು ಕಡಿಮೆ ಮಾಡಲು ಮತ್ತು ನಾಗರಿಕರ ಅನುಕೂಲಕ್ಕಾಗಿ, ಹೊಸ ಮತದಾರರು ಫಾರ್ಮ್ 6 ರ ಜೊತೆಗೆ ಸಲ್ಲಿಸಬೇಕಾದ ಘೋಷಣಾ ನಮೂನೆಯನ್ನೂ ಈ ಅನುಮೋದಿತ ಆದೇಶಗಳು ಒಳಗೊಂಡಿವೆ ಎಂದಿರುವ ಆಯೋಗ, ಇದು ಜನಪ್ರತಿನಿಧಿ ಕಾಯ್ದೆ, 1950 ರ ವಿಭಾಗ 21(3) ಕ್ಕೆ ಬದ್ಧವಾಗಿದೆ ಮತ್ತು ಸುಪ್ರೀಂ ಕೋರ್ಟ್‌ನಿಂದಲೂ ಎತ್ತಿಹಿಡಿಯಲ್ಪಟ್ಟಿದೆ ಎಂದು ಅವರು ಹೇಳಿದ್ದಾರೆ. ವಿಭಾಗ 21(3) ಆಯೋಗಕ್ಕೆ ಯಾವುದೇ ಸಮಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ನಿರ್ದೇಶನ ನೀಡುವ ಅಧಿಕಾರವನ್ನು ನೀಡುತ್ತದೆ.
ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಅರ್ಜಿ ನಮೂನೆಯಾದ ಫಾರ್ಮ್ 6, ಪ್ರಸ್ತುತ ಉದ್ಭವಿಸಿರುವ ವಿವಾದದ ಮುಖ್ಯ ಕೇಂದ್ರಬಿಂದುವಾಗಿದೆ. ಮೊದಲ ಬಾರಿಗೆ ಮತದಾನ ಮಾಡುವವರು ಹಿಂದಿನ ಎಸ್ಐಆರ್ಗೆ ತಮ್ಮ ಸಂಪರ್ಕವನ್ನು ಸಾಬೀತುಪಡಿಸಬೇಕು ಎಂಬ ಷರತ್ತನ್ನು ಶಾಸಕಾಂಗದ ಅಧಿಕಾರವಿಲ್ಲದೆ ತರಲಾಗಿದೆ ಮತ್ತು ಇದನ್ನು ಬಹುಸಂಖ್ಯಾತ ಆಯುಕ್ತರು ಅನಧಿಕೃತ ಮತ್ತು ಕಾನೂನುಬಾಹಿರ ಎಂದು ಕರೆದಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಸಂಧು ಮತ್ತು ಜೋಶಿ ಅವರು ತಮ್ಮ ಹೆಸರಿಗೆ ಉಲ್ಲೇಖಿಸಲಾದ ಆಕ್ಷೇಪಣೆಗಳ ಬಗ್ಗೆ ಬಹಿರಂಗವಾಗಿ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಆಯೋಗವೂ ಈ ಆಕ್ಷೇಪಣೆಗಳನ್ನು ನಿರಾಕರಿಸಿಲ್ಲವಾದರೂ, ದಾಖಲೆಗಳ ಪ್ರಕಾರ ಅಂತಿಮ ನಿರ್ಧಾರಗಳೆಲ್ಲವೂ ಸರ್ವಸಮ್ಮತಿಯಿಂದ ತೆಗೆದುಕೊಂಡವುಗಳಾಗಿವೆ ಎಂದು ತಿಳಿಸಿದೆ.
ಕಳೆದ ವರ್ಷ ನವೆಂಬರ್ ಮತ್ತು ಕಳೆದ ತಿಂಗಳು ಆಗಸ್ಟ್ ನಡುವೆ ಕನಿಷ್ಠ 14 ಸಂದರ್ಭಗಳಲ್ಲಿ ಇಬ್ಬರು ಆಯುಕ್ತರು ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಟಿಸಿದ ದಿನವೇ(ಸೆಪ್ಟೆಂಬರ್ 23), ಆಯೋಗ ಮೊದಲ ಬಾರಿಗೆ ಪ್ರತಿಕ್ರಿಯಿಸಿತು. ಉಪ ನಿರ್ದೇಶಕ ಹಂತದ ಅಧಿಕಾರಿಯೊಬ್ಬರು ಸಹಿ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಆಯೋಗದ ಎಲ್ಲಾ ಆದೇಶಗಳು, ನಿರ್ಧಾರಗಳು ಮತ್ತು ಆಡಳಿತಾತ್ಮಕ ನಿರ್ದೇಶನಗಳು ಸಂಪೂರ್ಣ ಕಾನೂನು ಮಾನ್ಯತೆಯನ್ನು ಹೊಂದಿವೆ ಹಾಗೂ ವಿಭಿನ್ನ ಅಭಿಪ್ರಾಯಗಳು ಯಾವುದೇ ಸಂಸ್ಥೆಯ ಚರ್ಚೆಗಳಲ್ಲಿ ಸಾಮಾನ್ಯ ಭಾಗವಾಗಿವೆ ಎಂದು ಸ್ಪಷ್ಟಪಡಿಸಲಾಗಿತ್ತು
ಆಯುಕ್ತರ ಸಲಹೆಗಳು ಚುನಾವಣಾ ಪ್ರಕ್ರಿಯೆಗಳನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದ್ದವು ಮತ್ತು ಎಸ್ಐಆರ್ ಕುರಿತಾದ ನಿರ್ಧಾರಗಳು ಸೇರಿದಂತೆ ಪೂರ್ಣ ಆಯೋಗದ ಅಂತಿಮ ನಿರ್ಧಾರಗಳು ಸರ್ವಸಮ್ಮತಿಯಿಂದ ಕೂಡಿದ್ದವು ಎಂದು ಅದು ಪ್ರತಿಪಾದಿಸಿತ್ತು.
ಈ ವರದಿಯು ವಿರೋಧ ಪಕ್ಷಗಳ ತೀವ್ರ ವೀರೋಧಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷವು ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ದೇಶದ್ರೋಹ, ಸಮಯ ಬರಲಿದೆ, ನಾವು ನಿಮ್ಮನ್ನು ಹಿಡಿಯುತ್ತೇವೆ ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ಫೇಸ್‌ಬುಕ್ ವೀಡಿಯೊ ಸಂದೇಶದಲ್ಲಿ ಜ್ಞಾನೇಶ್ ಕುಮಾರ್ ಅವರ ಬಂಧನಕ್ಕೆ ಒತ್ತಾಯಿಸಿದ್ದು, ಅವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ಬಿಜೆಪಿ ಗೆದ್ದು ತಮ್ಮ ಮೂರು ಅವಧಿಯ ಆಡಳಿತವನ್ನು ಅಂತ್ಯಗೊಳಿಸಿದ ಚುನಾವಣೆಯನ್ನು ಉಲ್ಲೇಖಿಸಿ, ಹಳೆಯ ಮತದಾರರ ಪಟ್ಟಿಯೊಂದಿಗೆ ಪಶ್ಚಿಮ ಬಂಗಾಳದಲ್ಲಿ ಮರುಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ವಿವಾದವು ಈಗ ಸುಪ್ರೀಂ ಕೋರ್ಟ್‌ಗೂ ತಲುಪಿದೆ. ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿರುವ ಅರ್ಜಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ, 2023 ರ ವಿಭಾಗ 16 ರ ಅಡಿಯಲ್ಲಿ ಆಯುಕ್ತರಿಗೆ ನೀಡಲಾದ ರಕ್ಷಣೆಯನ್ನು ಜ್ಞಾನೇಶ್ ಕುಮಾರ್ ಪಡೆಯಲು ಸಾಧ್ಯವಿಲ್ಲ ಎಂದು ವಾದಿಸಲಾಗಿದೆ. ಅವರನ್ನು ಸಾಮಾನ್ಯ ಆರೋಪಿಯಂತೆ ತನಿಖೆಗೆ ಒಳಪಡಿಸಬೇಕು ಮತ್ತು ವಿಚಾರಣೆ ನಡೆಸಬೇಕು ಎಂದು ಅರ್ಜಿ ಒತ್ತಾಯಿಸುತ್ತದೆ. ವಿಭಾಗ 16 ಅಧಿಕೃತ ಕರ್ತವ್ಯದ ಸಮಯದಲ್ಲಿ ಮಾಡಿದ ಕೃತ್ಯಗಳಿಗಾಗಿ ಸೇವೆಯಲ್ಲಿರುವ ಅಥವಾ ಮಾಜಿ ಆಯುಕ್ತರ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆ ನಡೆಸದಂತೆ ನ್ಯಾಯಾಲಯಗಳನ್ನು ತಡೆಯುತ್ತದೆ(ಏಜೆನ್ಸೀಸ್).