ನವದೆಹಲಿ: ಸಾಧಾರಣವಾಗಿ ಚುನಾವಣಾ ಆಯೋಗದ ಉನ್ನತ ತಾಂತ್ರಿಕ ಅಧಿಕಾರಿಗಳು ಸಾರ್ವಜನಿಕ ಅಥವಾ ರಾಜಕೀಯ ಚರ್ಚೆಗಳ ಕೇಂದ್ರಬಿಂದುವಾಗುವುದು ತುಂಬಾ ಕಡಿಮೆ. ಆದರೆ, ಪ್ರಸ್ತುತ ಮತದಾರರ ಪಟ್ಟಿ ನಿರ್ವಹಣಾ ಸಾಫ್ಟ್‌ವೇರ್‌ನ ಕಾರ್ಯಾಚರಣೆ ಮತ್ತು ಕ್ಷೇತ್ರ ಮಟ್ಟದ ಚುನಾವಣಾ ನೋಂದಣಾಧಿಕಾರಿಗಳ ಶಾಸನಬದ್ಧ ಅಧಿಕಾರಗಳ ವಿಷಯದಲ್ಲಿ ಆಯೋಗದ ಐಟಿ ವಿಭಾಗದ ಡೈರೆಕ್ಟರ್ ಜನರಲ್ ಸೀಮಾ ಖನ್ನಾ (Seema Khanna) ಅವರ ಪಾತ್ರ ಪರಿಶೀಲನೆಗೆ ಒಳಪಟ್ಟಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿರುವ ತನಿಖೆಯ ಪ್ರಕಾರ, ಸೀಮಾ ಖನ್ನಾ ಅವರಿಗೆ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಇಆರ್‌ಒ ಅಧಿಕಾರಿಗಳ ಡಿಜಿಟಲ್ ಲಾಗಿನ್ ಮತ್ತು ಶಾಸನಬದ್ಧ ಅಧಿಕಾರಗಳನ್ನು ನಿರ್ಬಂಧಿಸಲು ಅಥವಾ ಸೀಮಿತಗೊಳಿಸಲು ಕಾನೂನುಬದ್ಧ ಅಧಿಕಾರವಿದೆಯೇ..? ಎಂದು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಪ್ರಶ್ನಿಸಿದ್ದಾರೆ.
ಸೀಮಾ ಖನ್ನಾ ಅವರು ಚುನಾವಣಾ ಆಯೋಗದ ಐಟಿ ವಿಭಾಗದ ಮುಖ್ಯಸ್ಥರಾಗಿದ್ದು, ಆಯೋಗದ ಸಂಪೂರ್ಣ ಡಿಜಿಟಲ್ ಹಾಗೂ ತಂತ್ರಜ್ಞಾನ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಇವರು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಡೆಪ್ಯುಟೇಶನ್ ಆಧಾರದ ಮೇಲೆ ಕಳೆದ ವರ್ಷ ಚುನಾವಣಾ ಆಯೋಗಕ್ಕೆ ಸೇರ್ಪಡೆಗೊಂಡಿದ್ದರು.
ಈ ಇಡೀ ವಿವಾದದ ಕೇಂದ್ರಬಿಂದು ಎಂದರೆ ಅದು ಚುನಾವಣಾ ಆಯೋಗವು ಮತದಾರರ ಪಟ್ಟಿ ನಿರ್ವಹಣೆಗೆ ಬಳಸುತ್ತಿರುವ ಇಸಿಐನೆಟ್ (ECINet) ಮತ್ತು ಇಆರ್ಒನೆಟ್ (ERONet) ಎಂಬ ಸಾಫ್ಟ್‌ವೇರ್ ವ್ಯವಸ್ಥೆಗಳು. ಆಯೋಗವು ಈ ವರ್ಷದ ಜನವರಿ 22 ರಂದು 40 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಪೋರ್ಟಲ್‌ಗಳನ್ನು ಒಂದೇ ಸೂರಿನಡಿ ತಂದು ಇಸಿಐನೆಟ್ ವೇದಿಕೆಯನ್ನು ಲೋಕಾರ್ಪಣೆಗೊಳಿಸಿತ್ತು. ಈ ವ್ಯವಸ್ಥೆಯು ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುತ್ತದೆ ಎಂದು ಐಟಿ ವಿಭಾಗದ ಮಹಾನಿರ್ದೇಶಕಿ ಸೀಮಾ ಖನ್ನಾ ಹೇಳಿದ್ದರು.
ಆದರೆ, ದೆಹಲಿಯಲ್ಲಿರುವ ಸೀಮಾ ಖನ್ನಾ ನೇತೃತ್ವದ ಐಟಿ ವಿಭಾಗವು ಮತದಾರರ ಪಟ್ಟಿಯ ದತ್ತಾಂಶ ಮತ್ತು ಪ್ರವೇಶಾಧಿಕಾರಗಳನ್ನು ಸಂಪೂರ್ಣವಾಗಿ ಕೇಂದ್ರೀಕರಿಸುತ್ತಿದೆ ಎಂಬ ಆರೋಪಗಳು ಈಗ ಈ ವಿವಾದಕ್ಕೆ ಪ್ರಮುಖ ಕಾರಣವಾಗಿವೆ.
ಜನಪ್ರತಿನಿಧಿ ಕಾಯ್ದೆ 1950 (Representation of the People Act, 1950) ಮತ್ತು ಮತದಾರರ ನೋಂದಣಿ ನಿಯಮಗಳು 1960 (Registration of Electors Rules, 1960) ರ ಪ್ರಕಾರ, ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸುವುದು, ತಿದ್ದುಪಡಿ ಮಾಡುವುದು ಮತ್ತು ತೆಗೆದುಹಾಕುವುದು (Deletion) ಕ್ಷೇತ್ರ ಮಟ್ಟದ ಚುನಾವಣಾ ನೋಂದಣಾಧಿಕಾರಿಗಳ ಶಾಸನಬದ್ಧ ಜವಾಬ್ದಾರಿಯಾಗಿದೆ. ಆದರೆ, ಸಾಫ್ಟ್‌ವೇರ್‌ನಲ್ಲಿ ಮಾಡಲಾದ ತಾಂತ್ರಿಕ ಬದಲಾವಣೆಗಳು ಇಆರ್‌ಒ ಅಧಿಕಾರಿಗಳು ಸ್ವತಂತ್ರವಾಗಿ ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸದಂತೆ ತಡೆ ಒಡ್ಡುತ್ತಿವೆಯೇ ಎಂಬುದು ಈಗಿರುವ ಪ್ರಮುಖ ವಿಷಯವಾಗಿದೆ.
ಈ ತಾಂತ್ರಿಕ ಸಮಸ್ಯೆಗೆ ಗೋವಾದಲ್ಲಿ ನಡೆದ ಘಟನೆಯೊಂದನ್ನು ಉದಾಹರಣೆಯಾಗಿ ನೀಡಲಾಗಿದೆ. ಗೋವಾದಲ್ಲಿ ಇಆರ್‌ಒ ಅಧಿಕಾರಿಗಳು 97 ಅರ್ಹ ಮತದಾರರ ಹೆಸರುಗಳನ್ನು ಸೇರಿಸಲು ಅನುಮೋದನೆ ನೀಡಿದ್ದರೂ, ಸಾಫ್ಟ್‌ವೇರ್ ಡೇಟಾಬೇಸ್ ಪ್ರವೇಶದ ತಾಂತ್ರಿಕ ಸಮಸ್ಯೆಯಿಂದಾಗಿ ಆ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಸಾಧ್ಯವಾಗಲಿಲ್ಲ.
ಈ ಸಂದರ್ಭದಲ್ಲಿ, ಗೋವಾದ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಫೆಬ್ರವರಿ 11 ರಿಂದ 17 ರ ನಡುವೆ ಹಿರಿಯ ಉಪ ಚುನಾವಣಾ ಆಯುಕ್ತ ಜ್ಞಾನೇಶ್ ಭಾರತಿ ಅವರಿಗೆ 8 ಬಾರಿ ಪತ್ರ ಬರೆದಿತ್ತು. ಈ ಪತ್ರಗಳ ಪ್ರತಿಯನ್ನು ಸೀಮಾ ಖನ್ನಾ ಅವರಿಗೂ ಕಳುಹಿಸಲಾಗಿತ್ತು ಮತ್ತು ಸಿಸ್ಟಮ್‌ನಲ್ಲಿ ರೋಲ್‌ಬ್ಯಾಕ್ ಸೌಲಭ್ಯವನ್ನು ನೀಡುವಂತೆ ಕೋರಲಾಗಿತ್ತು.
ಇದಕ್ಕೂ ಮುನ್ನ, ಉಪ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಅವರು ಕಳೆದ ವರ್ಷ ನವೆಂಬರ್ 4 ಮತ್ತು ಜನವರಿ 2 ರಂದೇ ಸೀಮಾ ಖನ್ನಾ ಅವರಿಗೆ ಪತ್ರ ಬರೆದು, ಐಟಿ ವ್ಯವಸ್ಥೆಯು ಇಆರ್‌ಒ ಅಧಿಕಾರಿಗಳ ಶಾಸನಬದ್ಧ ಅಧಿಕಾರ ಮತ್ತು ಕಾರ್ಯವೈಖರಿಯನ್ನು ಯಾವುದೇ ಕಾರಣಕ್ಕೂ ನಿರ್ಬಂಧಿಸಬಾರದು ಎಂದು ಸೂಚಿಸಿದ್ದರು. ತದನಂತರ, ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳಂತೆ ಅಗತ್ಯ ಕ್ರಮ ಕೈಗೊಳ್ಳಲು ಐಟಿ ವ್ಯವಸ್ಥೆ ಅಡ್ಡಿಯಾಗದಂತೆ ನೋಡಿಕೊಳ್ಳಿ ಎಂದು ಸಂಜಯ್ ಕುಮಾರ್ ಅವರು ಮತ್ತೆ ಸೀಮಾ ಖನ್ನಾ ಅವರಿಗೆ ಪತ್ರ ಬರೆದಿದ್ದರು.
ಈಗ ಎಲ್ಲಾ ವಿಷಯಗಳು ದೊಡ್ಡ ಮಟ್ಟದ ರಾಜಕೀಯ ವಿವಾದವಾಗಿ ಮಾರ್ಪಟ್ಟಿದ್ದು, ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಸಮಾಜವಾದಿ ಪಾರ್ಟಿ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಸೀಮಾ ಖನ್ನಾ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿವೆ. ಚುನಾವಣಾ ಸಾಫ್ಟ್‌ವೇರ್‌ನ ಬ್ಯಾಕೆಂಡ್ ನಿಯಂತ್ರಣ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲು ಅಥವಾ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಬಳಸಿರಬಹುದು ಎಂದು ವಿಪಕ್ಷ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ(ಏಜೆನ್ಸೀಸ್).