ಆಯೋಗದ ಸ್ಥಾಪನೆೆ: ಭಾರತೀಯ ಸಂವಿಧಾನವು ಅನುಷ್ಠಾನಗೊಂಡ ದಿನವಾದ 1950ರ ಜನವರಿ 26ರ ಮುನ್ನಾದಿನ ಅಂದರೆ 1950ರ ಜನವರಿ 25ರಂದು ಅಸ್ತಿತ್ವಕ್ಕೆ ಬಂದ ಚುನಾವಣಾ ಆಯೋಗವು 74 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದೆ. ಪ್ರಸ್ತುತ 75ನೇ ಸಂವತ್ಸರದಲ್ಲಿ ಪದಾರ್ಪಣೆ ಮಾಡಿದ್ದು, ವಜ್ರ ಮಹೋತ್ಸವದ ಸಂಭ್ರಮದಲ್ಲಿದೆ. ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ, ಸಂಸತ್ತಿನ ಕೆಳಮನೆ (ಲೋಕಸಭೆ) ಮತ್ತು ಮೇಲ್ಮನೆ (ರಾಜ್ಯಸಭೆ), ಒಕ್ಕೂಟ ವ್ಯವಸ್ಥೆಯ ದೇಶದ ಎಲ್ಲ ರಾಜ್ಯಗಳ ವಿಧಾನ ಮಂಡಳದ ಕೆಳಮನೆ (ವಿಧಾನಸಭೆ) ಹಾಗೂ ಮೇಲ್ಮನೆ (ವಿಧಾನ ಪರಿಷತ್) ಚುನಾವಣೆಗಳು ಸೇರಿದಂತೆ ಎಲ್ಲ ಹಂತಗಳ ಚುನಾವಣೆಗಳ ಸಂಪೂರ್ಣ ಸಿದ್ಧತೆ, ನಿರ್ವಹಣೆ, ನಿಯಂತ್ರಣ, ಮೇಲುಸ್ತುವಾರಿ ಹಾಗೂ ಚುನಾವಣೆಗಳನ್ನು ನಿರ್ದೇಶಿಸುವ ಎಲ್ಲ ರೀತಿಯ ಶಾಶ್ವತ ಅಧಿಕಾರವನ್ನು ಚುನಾವಣಾ ಆಯೋಗವು ಹೊಂದಿದೆ.
ಸಂವಿಧಾನವು ತನ್ನ 324(2)ನೇ ವಿಧಿಯ ಮೂಲಕ ಪ್ರದತ್ತವಾದ ಅಧಿಕಾರದ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ನೇಮಕಗೊಳ್ಳುವ ಮುಖ್ಯ ಆಯುಕ್ತರೇ ಆಯೋಗದ ಮುಖ್ಯಸ್ಥರಾಗಿರುತ್ತಾರೆ. ಒಬ್ಬರೇ ಆಯುಕ್ತರನ್ನು ಹೊಂದಿದ್ದ ಆಯೋಗಕ್ಕೆ 1993ರಲ್ಲಿ ಬದಲಾಣೆ ತರಲಾಗಿದ್ದು, ಮೂರು ಆಯುಕ್ತರ ಹುದ್ದೆಗಳನ್ನು ಸೃಜಿಸಲಾಯಿತು. ಪ್ರಸ್ತುತ ಒಬ್ಬರು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಅವರ ಜೊತೆಗೆ ಇಬ್ಬರು ಹೆಚ್ಚುವರಿ ಚುನಾವಣಾ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಭಾರತದ ಚುನಾವಣಾ ಆಯೋಗದ ಅಧ್ಯಕ್ಷರೂ ಆಗಿರುತ್ತಾರೆ. ಆಯೋಗದ ಮೂರೂ ಜನ ಆಯುಕ್ತರಿಗೆ ಸಮಾನ ವೇತನ, ಭತ್ಯೆ ಮತ್ತು ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನವದೆಹಲಿಯ ಅಶೋಕ ರಸ್ತೆಯಲ್ಲಿರುವ ನಿರ್ವಾಚನ ಸದನದಲ್ಲಿರುವ ಚುನಾವಣಾ ಆಯೋಗದ ಪ್ರಧಾನ ಕಚೇರಿಯಲ್ಲಿ 300ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಚುನಾವಣಾ ಆಯೋಗವು ತನ್ನ ನಿಯಂತ್ರಣದಲ್ಲಿ ಪ್ರತೀ ರಾಜ್ಯದಲ್ಲಿಯೂ ಪ್ರತ್ಯೇಕ ರಾಜ್ಯ ಚುನಾವಣಾ ಆಯೋಗಗಳನ್ನು ರಚನೆ ಮಾಡಿದ್ದು, ತನ್ನ ವಿಶಿಷ್ಟ ಜಾಲಬಂಧದ ಅಡಿಯಲ್ಲಿ ಅವುಗಳನ್ನು ನಿರಂತರ ನಿಯಂತ್ರಿಸುತ್ತಿದೆ.
ನಮ್ಮ ಸಂವಿಧಾನವು ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳನ್ನು, ರಾಜಕಾರಣದ ವಿಭಿನ್ನ ಸಂಸ್ಥೆಗಳನ್ನು ಹಾಗೂ ಅಭ್ಯರ್ಥಿಗಳನ್ನು ಮೇಲ್ವಿಚಾರಣೆ ಮಾಡುವ ಪರಮಾಧಿಕಾರವನ್ನು ನೀಡಿದೆ. ಎಲ್ಲ ಚುನಾವಣೆಗಳ ಸಂದರ್ಭಗಳಲ್ಲಿ ಮಾದರಿ ನೀತಿಸಂಹಿತೆಯ ನಿಯಮಗಳ ಉಲ್ಲಂಘನೆಯಾದರೆ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರವನ್ನು ಹೊಂದಿದೆ. ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು, ಭಾರತದ ಸಮಸ್ತ ಮತದಾರರ ಪಟ್ಟಿಯನ್ನು ಕಾಲಕಾಲಕ್ಕೆ ನವೀಕರಿಸಿ ಅಧಿಕೃತಗೊಳಿಸುವ ಜವಾಬ್ದಾರಿ ಆಯೋಗದ ಮೇಲಿದೆ. 1988ರಲ್ಲಿ ಸಂವಿಧಾನದ 326ನೇ ವಿಧಿಯನ್ನು ತಿದ್ದುಪಡಿಮಾಡುವ ಮೂಲಕ ಭಾರತದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಗೆ ಪ್ರಾಪ್ತವಾಗಿರುವ ಮತಾಧಿಕಾರವನ್ನು ಖಚಿತಪಡಿಸುವ ಕೆಲಸವನ್ನು ಆಯೋಗ ಮಾಡುತ್ತಿದೆ. ಪ್ರತಿ ಚುನಾವಣೆಯಲ್ಲಿ ಯಾವುದೇ ಭಯ, ಒತ್ತಡವಿಲ್ಲದೆ ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಮತಾಧಿಕಾರವನ್ನು ಚಲಾಯಿಸಲು ಪ್ರತಿಯೊಬ್ಬ ಮತದಾರನಿಗೂ ಚುನಾವಣಾ ಆಯೊಗ ಎಲ್ಲ ರೀತಿಯ ರಕ್ಷಣಾ ಸೌಲಭ್ಯದ ಅವಕಾಶ ಕಲ್ಪಿಸುತ್ತದೆ.
ಇಂದು ಮತದಾರರ ದಿನ: ಭಾರತೀಯ ಪೌರತ್ವವನ್ನು ಹೊಂದಿರುವ 18 ವರ್ಷ ಮೇಲ್ಪಟ್ಟ ಎಲ್ಲ ಯುವ ಮತದಾರರನ್ನು ಮತದಾನದತ್ತ ಆಕರ್ಷಿಸಲು ಕೇಂದ್ರ ಸರ್ಕಾರ 2011ರ ಜನವರಿ 20ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ವನಿಸಿದಂತೆ ರಾಷ್ಟ್ರೀಯ ಮತದಾರರ ದಿನ ಆಚರಣೆಯ ಘೊಷಣೆ ಮಾಡಿತು. ಈ ಮೂಲಕ ಪ್ರತೀ ವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ. 2011ರ ಜನವರಿ 25ರಂದು ರಾಷ್ಟ್ರವ್ಯಾಪಿಯಾಗಿ ಮೊದಲ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ದೇಶದ ಎಲ್ಲ ಮತದಾರರ ಒಂದೊಂದು ಮತವೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಚನೆಯಲ್ಲಿ ನಿರ್ಣಾಯಕವಾಗಿರುತ್ತದೆ. ನಿಜವಾದ ಅರ್ಥದಲ್ಲಿ ಮತದಾರನೇ ಈ ಬೃಹತ್ ರಾಷ್ಟ್ರದ ಜವಾಬ್ದಾರ; ಜೊತೆಗೆ ಎಲ್ಲದಕ್ಕೂ ಅವನೇ ವಾರಸುದಾರನೂ ಹೌದು. ಈ ನಿಟ್ಟಿನಲ್ಲಿ ನಮ್ಮ ಸಂವಿಧಾನ ಭಾರತೀಯ ಪ್ರಜೆಗಳಿಗೆ ಮತದಾನದ ಪರಮಾಧಿಕಾರವನ್ನು ನೀಡಿದೆ. ಈ ಪರಮಾಧಿಕಾರವು ಎಲ್ಲಿಯೂ ದುರುಪಯೋಗವಾಗಬಾರದು ಎಂಬ ಚಿಂತನೆಯಿಂದ ಆಯೋಗವು ರಾಷ್ಟ್ರೀಯ ಮತದಾರರ ದಿನದ ಮೂಲಕ ಮತಾಧಿಕಾರದ ಮಹತ್ವವನ್ನು ದೇಶದುದ್ದಕ್ಕೂ ಸಾರಿ ಹೇಳುತ್ತದೆ. ಜೊತೆಗೆ ಎಲ್ಲ ಮಹಾಚುನಾವಣೆಗಳ ಸಂದರ್ಭದಲ್ಲಿ ಮತದಾನದ ವಿಧಾನ, ಯಾವ ಆಮಿಷಗಳಿಗೂ ಬಲಿಯಾಗದೇ ಸ್ವಯಂಸ್ಪೂರ್ತಿಯಿಂದ ಮತಗಟ್ಟೆಗಳಿಗೆ ತೆರಳಿ ಕಡ್ಡಾಯವಾಗಿ ಮತಚಲಾಯಿಸಬೇಕೆಂಬ ಸಂಗತಿಗಳ ಬಗ್ಗೆ ಅರಿವು ಮೂಡಿಸುತ್ತದೆ. ಮತದಾರನ ಮತಾಧಿಕಾರವು ಗ್ರಾಮ ಪಂಚಾಯಿತಿಯಿಂದ ರಾಷ್ಟ್ರದ ಸಂಸತ್ತಿನವರೆಗೆ ನಡೆಯುವ ಎಲ್ಲ ಚುನಾವಣೆಗಳಲ್ಲಿ ಸತ್ಯ-ಶುದ್ಧ ಚಿಂತನೆಯ, ಜನಪರ ಮನೋಭೂಮಿಕೆಯ ಹಾಗೂ ಪಾರದರ್ಶಕ ವ್ಯಕ್ತಿತ್ವದ ಶ್ರೇಷ್ಠ ಪ್ರಜಾಪ್ರತಿನಿಧಿಯನ್ನು ಆಯ್ಕೆ ಮಾಡಲು ಉಪಯೋಗವಾಗಬೇಕಾಗಿದೆ.
(ಲೇಖಕರು ಪತ್ರಕರ್ತರು)