ನ್ಯೂಸ್

ಸಂಪಾದಕೀಯ| ಕಾವೇರಿ ತಂತ್ರಾಂಶದ ಸಂಕಷ್ಟ

Webdesk - Manjunatha B

ಯಾವುದೇ ಒಂದು ಸಮಸ್ಯೆ ಪರಿಹಾರಕ್ಕೆ ನಾವು ಕಂಡುಕೊಳ್ಳುವ ಪರಿಹಾರ ಮಾರ್ಗ ಮತ್ತೊಂದು ಸಮಸ್ಯೆ ಸೃಷ್ಟಿಗೆ ಕಾರಣವಾಗಬಾರದು ಹಾಗೂ ಸ್ವಲ್ಪ ಸಮಸ್ಯೆಯಾದರೂ ಚಿಂತೆ ಇಲ್ಲ, ಈ ಮೊದಲಿನ ವ್ಯವಸ್ಥೆಯೇ ಸರಿಯಾಗಿತ್ತು ಎನ್ನುವ ಭಾವನೆ ಸಾರ್ವಜನಿಕರಲ್ಲಿ ಮೂಡುವಂತಾಗಬಾರದು 2004ರಲ್ಲಿ ಅಳವಡಿಸಿದ್ದ ಕಾವೇರಿ 1.0 ಸಾಫ್ಟ್​ವೇರ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಒದಗಿಸಲು ಸಾಧ್ಯ ಆಗುತ್ತಿರಲಿಲ್ಲ. ಹೀಗಾಗಿ ಆಸ್ತಿ ನೋಂದಣಿ ಸೇರಿ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಸ್ಮಾರ್ಟ್ ಮಾಡಲು ರಾಜ್ಯ ಸರಕಾರವು ಕಾವೇರಿ -2 ತಂತ್ರಾಂಶ ಸಿದ್ಧಪಡಿಸಿತು.

ಈ ತಂತ್ರಾಂಶ ಅಳವಡಿಸಿಕೊಂಡರೂ ದಶಕಗಳಿಂದ ಕಾಡುತ್ತಿರುವ ಸರ್ವರ್ ಸಮಸ್ಯೆ ಯಥಾಪ್ರಕಾರವೇ ಮುಂದುವರಿದಿದೆ. ಸ್ಥಿರಾಸ್ತಿ ವಹಿವಾಟು ತಿಳಿಯಲು ಇಸಿ(ಎನ್ಕ್ಂಬರೆನ್ಸ್ ಸರ್ಟಿಫಿಕೇಟ್) ಮತ್ತು ಸಿಸಿ (ದೃಢೀಕರಣ ಪ್ರಮಾಣ ಪತ್ರ) ಪಡೆಯಲು ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿದೆ. ಯಾವುದೇ ಹೊಸ ತಂತ್ರಾಂಶ, ತಂತ್ರಜ್ಞಾನ ಅಳವಡಿಸಿಕೊಳ್ಳುವ ಪೂರ್ವದಲ್ಲಿ ಸಾಧಕ-ಬಾಧಕಗಳನ್ನು ಗಮನಿಸಬೇಕಾಗುತ್ತದೆ. ಪರಿಣಾಮಕಾರಿ ಎಂಬುದು ಮನದಟ್ಟಾದಾಗ ಮಾತ್ರ ಜಾರಿಗೆ ಆಲೋಚನೆ ಮಾಡಬೇಕಾಗುತ್ತದೆ. ಕೋಟ್ಯಂತರ ರೂ ವೆಚ್ಚ ಮಾಡಿ ಜಾರಿಗೆ ತರುವ ತಂತ್ರಾಂಶ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು ಎನ್ನುವಂತಾದರೆ ವ್ಯರ್ಥ ಪ್ರಯತ್ನವಾಗುತ್ತದೆ.

ಈ ಮೊದಲು ಸಾರ್ವಜನಿಕರು ಪಾಸ್​ಪೋರ್ಟ್ ಮಾಡಿಸಿಕೊಳ್ಳಲು ಹರಸಾಹಸಪಡಬೇಕಿತ್ತು. ಆದರೆ ಹೊಸ ತಂತ್ರಜ್ಞಾನ ಅಳವಡಿಕೆಯಿಂದ ದೇಶಾದ್ಯಂತ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಆನ್​ಲೈನ್​ನಲ್ಲಿ ನೋಂದಣಿ ಮಾಡಿಕೊಂಡರೆ ನಿಗದಿತ ಸಮಯಕ್ಕೆ ಕಚೇರಿಗೆ ತೆರಳಿ ಒಂದು ಗಂಟೆಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಈಗಾಗಲೇ ಹಲವಾರು ತಂತ್ರಜ್ಞಾನ - ತಂತ್ರಾಂಶ ಅಭಿವೃದ್ಧಿಪಡಿಸಿ ಯಶಸ್ಸು ಗಳಿಸಿರುವ ಪ್ರತಿಷ್ಠಿತ ಕಂಪನಿಗಳ ನೆರವು ಪಡೆಯುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು.

ಕಾವೇರಿ -2 ತಂತ್ರಾಂಶ ಅನುಷ್ಠಾನದ ಮೂಲ ಉದ್ದೇಶ ಈ ಕಚೇರಿಗಳನ್ನು ಮದ್ಯವರ್ತಿಗಳ ಹಾವಳಿಯಿಂದ ಮುಕ್ತ ಮಾಡುವುದು, ನಕಲಿ ದಾಖಲೆಗಳ ಮೂಲಕ ವಂಚನೆ ಮತ್ತಿತರ ಅಕ್ರಮಗಳನ್ನು ತಡೆಗಟ್ಟುವುದೇ ಆಗಿತ್ತು. ಆಸ್ತಿ ನೋಂದಣಿ, ಕ್ರಯ, ಕರಾರು, ದಾನ, ಒಪ್ಪಂದ,ವಿಲ್ ಸೇರಿದಂತೆ ಹಲವು ಸೇವೆಗಳನ್ನು ಪಡೆಯಲು ಇದುವರೆಗೆ ಇದ್ದ ಸಮಸ್ಯೆಗೆ ಪರಿಹಾರವಾಗಿ ಕಾವೇರಿ - 2 ತಂತ್ರಾಂಶ ಅಳವಡಿಸಲಾಗಿದೆಯಾದರೂ ಮತ್ತೊಂದು ರೀತಿಯ ಸಮಸ್ಯೆಗಳು ಸೃಷ್ಟಿಯಾಗಿವೆ.

ಕಾವೇರಿ 2.0 ತಂತ್ರಾಂಶದಲ್ಲಿ ಆಸ್ತಿ ಮೇಲಿನ ಋಣಭಾರ ಸ್ಪಷ್ಟವಾಗಿ ತೋರಿಸುತ್ತಿಲ್ಲ. ಇದನ್ನೇ ಲಾಭ ಮಾಡಿಕೊಂಡ ಭೂಗಳ್ಳರು, ಆಸ್ತಿ ಮೇಲೆ ಯಾವುದೇ ವಹಿವಾಟು ನಡೆದಿಲ್ಲ ಎಂದು ನಿಲ್ ಇಸಿ ಪಡೆದು ಸಾರ್ವಜನಿಕರನ್ನು ಸುಲಭವಾಗಿ ವಂಚಿಸುತ್ತಾರೆ.

ಭೂಮಿ, ಸೈಟು, ವಿಲ್ಲಾ, ಕಟ್ಟಡ ಸೇರಿದಂತೆ ಸ್ಥಿರಾಸ್ತಿ ಖರೀದಿ ಅಥವಾ ಆಸ್ತಿ ಮೇಲೆ ಸಾಲ ಪಡೆಯಬೇಕಾದರೆ ಇಸಿ ಮುಖ್ಯವಾಗುತ್ತದೆ. 2004ರ ನಂತರ ಸ್ಥಿ್ಥಾಸ್ತಿಗಳ ವಹಿವಾಟು ಸಂಬಂಧಿಸಿ ಇಸಿ ಪಡೆಯಲು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಆದರೆ ವೆಬ್​ಸೈಟ್​ನಲ್ಲಿ ಅರ್ಜಿಸಲ್ಲಿಸಲು ಸಾಧ್ಯ ಆಗುತ್ತಿಲ್ಲ ಎಂಬ ದೂರುಗಳು ಹೆಚ್ಚುತ್ತಿವೆ. ಭೂಮಿ, ಇ-ಆಸ್ತಿ, ಇ-ಸ್ವತ್ತು ಎಲ್ಲದಕ್ಕೂ ಕಾವೇರಿ -2 ತಂತ್ರಾಂಶ ಲಿಂಕ್ ಆಗಿರಲಿದೆ. ಇದೊಂದು ಸಮಗ್ರ ತಂತ್ರಾಂಶವಾಗಿದ್ದು, ಬೆಂಗಳೂರಿನಲ್ಲಿ ಕೇಂದ್ರಿಯ ಸರ್ವರ್ ಹೊರತುಪಡಿಸಿ ಬೇರಾವುದೇ ಸ್ಥಳೀಯ ಸರ್ವರ್ ಇರುವುದಿಲ್ಲ. ಅಧಿಕಾರಿ ಮತ್ತು ಸಿಬ್ಬಂದಿಯ ಉತ್ತರದಾಯಿತ್ವವನ್ನು ತಂತ್ರಾಂಶದ ಮೂಲಕ ನಿಗದಿಯಾಗಿರುತ್ತದೆ. ವೆಬ್ ಆಧಾರಿತ ಈ ತಂತ್ರಾಂಶದಲ್ಲಿ ಆಪರೇಟಿಂಗ್ ಸಿಸ್ಟಂ ಸಮಸ್ಯೆಗಳು ಇರುವುದಿಲ್ಲ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ ಈ ತಂತ್ರಾಂಶ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಬ್ ರಿಜಿಸ್ಟ್ರಾರ್ ಕಚೇರಿಗಳು ಜನಸ್ನೇಹಿಯಾಗುವಂತೆ ನೋಡಿಕೊಳ್ಳಬೇಕು.