ನ್ಯೂಸ್

ಸಂಪಾದಕೀಯ | ಸಂದೇಹ ನಿವಾರಣೆಯಾಗಲಿ: ಔಷಧ ತಯಾರಿಕೆ ಕಚ್ಚಾವಸ್ತುಗಳ ಬೆಲೆ ದುಪ್ಪಟ್ಟು

ಔಷಧ ತಯಾರಿಕೆಗೆ ಅಗತ್ಯವಾದ ಕೆಲವು ಕಚ್ಚಾ ವಸ್ತುಗಳ ಬೆಲೆಗಳು ಕೋವಿಡ್ ಪೂರ್ವದ ಅವಧಿಗಿಂತಲೂ ದುಪ್ಪಟ್ಟು ಏರಿಕೆ ಕಂಡಿರುವುದರಿಂದ ಭಾರತದ ಔಷಧ ಉದ್ಯಮ ಸಂಕಷ್ಟ ಎದುರಿಸುವಂತಾಗಿದೆ ಎಂಬ ವರದಿಯು ಔಷಧಗಳ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗುವ ಭೀತಿ ಸೃಷ್ಟಿಸುವಂತಿದೆ. ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕೆ ಬಂದ ನಂತರ ಪೂರೈಕೆ ಸಹಜ ಸ್ಥಿತಿಗೆ ಮರಳುವುದರೊಂದಿಗೆ ಬೆಲೆಗಳೂ ಯಥಾಸ್ಥಿತಿಗೆ ವಾಪಸಾಗುತ್ತವೆ ಎಂಬ ಲೆಕ್ಕಾಚಾರವು ಸುಳ್ಳಾಗುವ ರೀತಿಯಲ್ಲಿ ಔಷಧ ತಯಾರಿಕೆಯ ಕಚ್ಚಾ ವಸ್ತುಗಳ ದರವು ಆಪಾರ ಪ್ರಮಾಣದಲ್ಲಿ ಏರಿಕೆಯಾಗಿರುವುದು ಅನುಮಾನ ಹುಟ್ಟಿಸುವಂತಾಗಿದೆ.

ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ 800ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆಯನ್ನು ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಅನುಮತಿ ನೀಡಿತ್ತು. ಸಗಟು ಬೆಲೆ ಸೂಚ್ಯಂಕದ ಆಧಾರದ ಮೇಲೆ ಔಷಧಗಳ ಬೆಲೆಗಳಲ್ಲಿ ಶೇ 10.76 ರಷ್ಟು ಏರಿಕೆ ಮಾಡಲಾಗಿತ್ತು. ವಾರ್ಷಿಕ ಸಗಟು ಬೆಲೆ ಸೂಚ್ಯಂಕ ಅನ್ವಯ ಪ್ರತಿ ವರ್ಷ ಏಪ್ರಿಲ್ 1 ರಂದು ಔಷಧಗಳ ಬೆಲೆಯನ್ನು ಪ್ರಾಧಿಕಾರವು ಪರಿಷ್ಕರಣೆ ಮಾಡುತ್ತದೆ. ಇದೇ ರೀತಿ ಈ ವರ್ಷವೂ ಬೆಲೆಗಳ ಪರಿಷ್ಕರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಔಷಧಗಳ ಬೆಲೆಯನ್ನು ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದ ಫಾರ್ವಸುಟಿಕಲ್ ಉದ್ಯಮದ ಲಾಬಿಯು ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಸುದ್ದಿಯನ್ನು ಹುಟ್ಟುಹಾಕಿದೆಯೇ ಎಂಬ ಸಂದೇಹ ಈ ಸಂದರ್ಭದಲ್ಲಿ ಮೂಡುತ್ತಿದ್ದು, ಪ್ರಾಧಿಕಾರದವರು ಈ ಶಂಕೆ ನಿವಾರಿಸಬೇಕಿದೆ.

ಔಷಧಗಳ ಬೆಲೆ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೊಳಿಸಿದ ಔಷಧದ ಬೆಲೆ ನಿಯಂತ್ರಣ ಕಾಯ್ದೆ 2013 ಮತ್ತು ಅಗ್ಗದ ಬೆಲೆಯಲ್ಲಿ ಪರ್ಯಾಯ ಔಷಧಗಳನ್ನು ಒದಗಿಸುವ ಉದ್ದೇಶದಿಂದ ಜನೌಷಧ ಕೇಂದ್ರಗಳನ್ನು ದೇಶಾದ್ಯಂತ ವಿಸ್ತರಿಸುವ ಕ್ರಮಗಳು ಸ್ವಾಗತಾರ್ಹವಾಗಿದ್ದರೂ ಅವು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿವೆ ಎಂಬುದು ಮಾತ್ರ ಚರ್ಚಾರ್ಹ ವಿಷಯವಾಗಿದೆ.

ಭಾರತದಲ್ಲಿ ಒಟ್ಟಾರೆ ಔಷಧ ವ್ಯಾಪಾರದ ಶೇ. 40ರಷ್ಟು ಮಾರುಕಟ್ಟೆಯನ್ನು ಕೇವಲ 10 ಕಂಪನಿಗಳು ನಿಯಂತ್ರಿಸುತ್ತವೆ. ಇಂತಹ ವ್ಯವಸ್ಥೆಯಲ್ಲಿ ಔಷಧಿ ಬೆಲೆ ನಿಯಂತ್ರಣ ಆದೇಶದ ವಿಧಿವಿಧಾನಗಳು ಬೆಲೆ ನಿಯಂತ್ರಣ ಸಾಧಿಸುವುದಕ್ಕಿಂತ ಬೆಲೆಯನ್ನು ಹಿಡಿತದಲ್ಲಿಟ್ಟುಕೊಳ್ಳುವ ಕೆಲ ಕಂಪನಿಗಳ ಹಿತಾಸಕ್ತಿ ಕಾಪಾಡುವಂತಾಗಿವೆ. ಯಾವುದಾದರೂ ಒಂದು ಔಷಧದ ಬೆಲೆಯು ಹೇಗಿರಬೇಕೆಂದರೆ, ಶೇ.1ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿರುವ ಆ ಔಷಧದ ಬ್ರಾ ್ಯಡುಗಳ ಮಾರಾಟ ದರದ ಒಟ್ಟು ಸರಾಸರಿ ಬೆಲೆಯನ್ನು ಮೀರಬಾರದು ಎಂಬ ನಿರ್ಬಂಧ ಇದೆ. ಆದರೆ, ಆ ಔಷಧವನ್ನು ಉತ್ಪಾದಿಸುವ ಎಲ್ಲಾ ಕಂಪನಿಗಳು ಒಂದುಗೂಡಿ ಔಷಧದ ದರವನ್ನು ಒಮ್ಮೆಗೆ ಹೆಚ್ಚಿಸಿದರೆ ಸರಾಸರಿ ದರವೂ ಹೆಚ್ಚುವ ಮೂಲಕ ದರ ನಿಯಂತ್ರಣಕ್ಕೆ ಅರ್ಥವೇ ಇಲ್ಲದಂತಾಗುತ್ತದೆ.

ಹೀಗಾಗಿ, ಯೋಗ್ಯ ದರದಲ್ಲಿ ಔಷಧ ಒದಗಿಸಲು ಕೇಂದ್ರ ಸರ್ಕಾರವು ಬೆಲೆ ನಿಗದಿಗೆ ಸೂಕ್ತ ಮಾನದಂಡಗಳನ್ನು ಅನುಸರಿಸುವುದು ಅಗತ್ಯವಿದೆ. ಇನ್ನು ಜೆನರಿಕ್ ಔಷಧಗಳ ಸರಬರಾಜಿನಲ್ಲಿ ಬಹಳಷ್ಟು ಕುಂದುಕೊರತೆಗಳು ಇರುವುದರಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಜನರಿಕ್ ಔಷಧ ಮಳಿಗೆಗಳ ನಿರ್ವಹಣೆಯೇ ಕಷ್ಟಕರವಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಸರ್ಕಾರ ಘೋಷಿಸಿರುವಷ್ಟು ಸಂಖ್ಯೆಯಲ್ಲಿ ಜೆನರಿಕ್ ಔಷಧ ಮಳಿಗೆಗಳೂ ಆರಂಭಗೊಂಡಿಲ್ಲ. ಅಗ್ಗದ ಬೆಲೆಯ ಜೆನರಿಕ್ ಔಷಧಗಳನ್ನು ಅಗತ್ಯಕ್ಕೆ ತಕ್ಕಂತೆ ಜನರಿಗೆ ದೊರೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕಿದೆ.