ನ್ಯೂಸ್

ಸುರಕ್ಷೆ ಬಗ್ಗೆ ಉಪೇಕ್ಷೆ ಬೇಡ

Webdesk - Manjunatha B

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಶೋರೂಂನಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿ ಒಬ್ಬ ಮಹಿಳಾ ಸಿಬ್ಬಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ವಾಹನಗಳೆಲ್ಲವೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಶವಾಗಿವೆ. ಬೆಂಕಿ ಕಾಣುತ್ತಿದ್ದಂತೆಯೇ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಹೊರಗೆ ಓಡಿ ಹೋಗಿದ್ದರಿಂದ ಅವರ ಪ್ರಾಣ ಉಳಿದಿದೆ. ಶೋರೂಂನಲ್ಲಿ 25ಕ್ಕೂ ಹೆಚ್ಚು ವಾಹನಗಳಿದ್ದು, ಆ ಪೈಕಿ ಒಂದರ ಬ್ಯಾಟರಿ ಸ್ಪೋಟಗೊಂಡಿದ್ದರಿಂದ ಎಲ್ಲ ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ಪೋಟಗೊಳ್ಳುವ ಮತ್ತು ಇದ್ದಕ್ಕಿದ್ದಂತೆಯೇ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ದೇಶಾದ್ಯಂತ ವರದಿಯಾಗುತ್ತಿವೆ. ನಿರ್ದಿಷ್ಟ ಕಂಪನಿಯೊಂದರ ವಾಹನಗಳಲ್ಲಿ ಅತಿ ಹೆಚ್ಚು ನ್ಯೂನತೆ ಇದ್ದುದನ್ನು ಗ್ರಾಹಕರೇ ಪತ್ತೆ ಹಚ್ಚಿ ಅದರ ಶೋರೂಂ ಎದುರು ಪ್ರತಿಭಟನೆ ನಡೆಸಿದ್ದರು. ಕಂಪನಿಯ ಸಿಬ್ಬಂದಿ ಸರಿಯಾಗಿ ಸ್ಪಂದಿಸಲಿಲ್ಲವೆಂದು ಸಿಟ್ಟಾದ ಗ್ರಾಹಕರೊಬ್ಬರು ಶೋರೂಮ್ೇ ಬೆಂಕಿ ಹಚ್ಚಿದ್ದೂ ವರದಿಯಾಗಿತ್ತು. ಗ್ರಾಹಕರ ದೂರುಗಳನ್ನು ಆಧರಿಸಿ, ಆ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಕಾರಣ ಕೇಳಿ ನೋಟಿಸ್ ಕೂಡ ನೀಡಿತ್ತು. ನಂತರ ಎಚ್ಚೆತ್ತುಕೊಂಡ ಆ ಕಂಪನಿ ಸಾವಿರಾರು ವಾಹನಗಳನ್ನು ಸರಿಪಡಿಸಿಕೊಟ್ಟಿದೆ.

ಇಷ್ಟೆಲ್ಲ ಬೆಳವಣಿಗೆಗಳು ಪ್ರತಿದಿನ ಎಂಬಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೂ ಬೆಂಗಳೂರಿನ ಎಲೆಕ್ಟ್ರಿಕ್ ವೆಹಿಕಲ್ ಶೋರೂಂನಲ್ಲಿ ಅಗ್ನಿ ನಂದಿಸುವ ವ್ಯವಸ್ಥೆಯನ್ನೂ ಮಾಡಿಕೊಂಡಿರಲಿಲ್ಲ ಎಂಬುದು ಸೋಜಿಗ. ಅಗ್ನಿ ಅವಘಡ ಸಂಭವಿಸಿದರೆ, ಹೇಗೆ ನಿರ್ವಹಿಸಬೇಕೆಂಬ ಬಗ್ಗೆ ಸಿಬ್ಬಂದಿಗೆ ತರಬೇತಿಯನ್ನೂ ನೀಡಿರಲಿಲ್ಲ. ಇದು ಶೋರೂಂನ ಮಾಲೀಕರ ನಿರ್ಲಕ್ಷ ್ಯ್ಕೆ ಸಾಕ್ಷಿ. ಇದೇ ರೀತಿಯ ನೂರಾರು, ಸಾವಿರಾರು ಕಟ್ಟಡಗಳು ಬೆಂಗಳೂರಿನಲ್ಲಿ ಮತ್ತು ರಾಜ್ಯದ ಇತರೆಡೆ ಇವೆ. ಇಂತಹ ಅವಘಡಗಳು ಹಿಂದೆಯೂ ಹಲವು ಬಾರಿ ಸಂಭವಿಸಿದ್ದಿದೆ. ಕಳೆದ ವರ್ಷ ಕೋರಮಂಗಲದ ನಾಲ್ಕಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಆಗ ಅಗ್ನಿಶಾಮಕ ಇಲಾಖೆ ಬೆಂಗಳೂರಿನ 243 ಮೇಲ್ಛಾವಣಿ ರೆಸ್ಟೋರೆಂಟ್​ಗಳ ಪಟ್ಟಿ ಮಾಡಿ, ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ರವಾನಿಸಿತ್ತು. ಬಿಬಿಎಂಪಿ ಅಧಿಕಾರಿಗಳು ಏನೂ ಕ್ರಮ ಕೈಗೊಳ್ಳಲಿಲ್ಲ. ಈಗ್ಗೆ ಆರು ತಿಂಗಳ ಹಿಂದೆ ರಾಜ್​ಕೋಟ್​ನ ಗೇಮಿಂಗ್ ಝೋನ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದಾಗ, ಬೆಂಗಳೂರಿನಲ್ಲೂ ಇಂತಹ ಸ್ಥಳಗಳಿವೆಯೇ, ಸಂಭವನೀಯ ಅವಘಡ ತಪ್ಪಿಸಲು ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿಗೆ ಪತ್ರ ಬರೆದಿದ್ದರು. ಆ ಸಂಬಂಧವೂ ಅಧಿಕಾರಿಗಳು ಏನು ಮಾಡಿದರೆಂಬುದು ಯಾರಿಗೂ ಗೊತ್ತಾಗಲಿಲ್ಲ.

ಅಧಿಕಾರಿಗಳು ದುರ್ಘಟನೆ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಬದಲು, ನಿಯಮಿತವಾಗಿ ಸುರಕ್ಷಾ ಕ್ರಮಗಳ ಪರಿಶೀಲನೆ ನಡೆಸಬೇಕು. ಸುರಕ್ಷೆಯನ್ನು ಉಪೇಕ್ಷೆ ಮಾಡುವವರಿಗೆ ದಂಡ ವಿಧಿಸಬೇಕು. ಸಾರ್ವಜನಿಕರು ಕೂಡ ತಮ್ಮ ಸುತ್ತಮುತ್ತ ಅಗ್ನಿಸುರಕ್ಷೆಗೆ ಕ್ರಮ ವಹಿಸಲಾಗಿದೆಯೇ ಎಂಬುದನ್ನು ಆಗಾಗ ಖಚಿತಪಡಿಸಿಕೊಳ್ಳುವುದು ವಿಹಿತ.