ಕಾಂಗ್ರೆಸ್ನ ಐದು ಗ್ಯಾರಂಟಿಗಳಲ್ಲಿ ಒಂದಾದ ಐದು ಕೆಜಿ ಅಕ್ಕಿ ವಿತರಣೆ ವಿಚಾರ ಗೋಜಲಿನಲ್ಲಿ ಸಿಲುಕಿಕೊಂಡಿದ್ದು ಸದ್ಯಕ್ಕೆ ಅಕ್ಕಿ ಲಭ್ಯತೆ ಕಷ್ಟ ಎಂಬ ಸನ್ನಿವೇಶ ಉಂಟಾಗಿದೆ. ಹೀಗಾಗಿ ಸರ್ಕಾರ ಬದಲಿ ಹಾದಿ ಕಂಡುಕೊಂಡಿದ್ದು, ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ಹಣ ನೀಡಲು ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಪಡಿತರ ಚೀಟಿದಾರರಿಗೆ ಈಗಾಗಲೇ ತಲಾ ಐದು ಕೆಜಿ ಅಕ್ಕಿ ವಿತರಿಸಲಾಗುತ್ತಿದ್ದು, ಇದಕ್ಕೆ ಐದು ಕೇಜಿ ಸೇರಿಸಿ ತಲಾ ಹತ್ತು ಕೆಜಿ ನೀಡುವುದಾಗಿ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ವಾಗ್ದಾನ ಮಾಡಿತ್ತು. ಚುನಾವಣಾ ಪ್ರಣಾಳಿಕೆಯಲ್ಲೂ ಈ ಅಂಶವನ್ನು ಸೇರಿಸಿತ್ತು. ಸರ್ಕಾರ ರಚನೆಯಾದ ತರುವಾಯ ಮೊದಲ ಸಂಪುಟ ಸಭೆಯಲ್ಲಿಯೇ ಎಲ್ಲ ಐದೂ ಗ್ಯಾರಂಟಿಗಳ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು. ನಂತರದಲ್ಲಿ ಆಯಾ ಯೋಜನೆಗಳಿಗೆ ಸಂಬಂಧಿಸಿ ನೀತಿನಿಯಮಗಳು ರೂಪಿತವಾಗಿ ಜಾರಿಯಾಗುತ್ತಿವೆ.
‘ಅಗತ್ಯವಾದಷ್ಟು ಅಕ್ಕಿ ಒದಗಿಸಲು ಕೇಂದ್ರ ಸರ್ಕಾರ ಮೊದಲು ಒಪ್ಪಿತ್ತು. ಆದರೆ ಬಳಿಕ, ರಾಜಕೀಯ ಕಾರಣಕ್ಕೆ ಅಕ್ಕಿ ನೀಡಲು ನಿರಾಕರಿಸುತ್ತಿದೆ’ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಕೇಂದ್ರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ ಬಿಜೆಪಿ ನಾಯಕರು ಈ ಆಪಾದನೆಯನ್ನು ಅಲ್ಲಗಳೆದಿದ್ದು, ‘ಗ್ಯಾರಂಟಿ ಈಡೇರಿಸಲಾಗದ್ದಕ್ಕೆ ವೃಥಾ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಅಕ್ಕಿ ಲಭ್ಯತೆ ಬಗ್ಗೆ ಪಂಜಾಬ್, ತೆಲಂಗಾಣ, ಛತ್ತೀಸ್ಗಢ ಮುಂತಾದ ರಾಜ್ಯಗಳನ್ನು ಕೂಡ ರಾಜ್ಯ ಸರ್ಕಾರ ವಿಚಾರಿಸಿದೆ. ಆದರೆ ಒಂದೂಕಾಲು ಲಕ್ಷ ಟನ್ನಷ್ಟು ಅಕ್ಕಿ ತಕ್ಷಣಕ್ಕೆ ಸಿಗುವುದು ಅನುಮಾನ. ಹೀಗಾಗಿ, ಬೇರೆ ಬೇರೆ ಮಾರ್ಗಗಳ ಪರಿಶೀಲನೆ ನಡೆಸಿದ ಸರ್ಕಾರ, ನಗದು ನೀಡುವ ಹಾದಿಯನ್ನು ಕಂಡುಕೊಂಡಿದೆ. ಈ ಪ್ರಕಾರ, ಪ್ರತಿ ಕೆಜಿಗೆ ತಲಾ 34 ರೂ.ಗಳಂತೆ ಒಬ್ಬ ವ್ಯಕ್ತಿಗೆ 170 ರೂ. ನೀಡಲಾಗುತ್ತದೆ. ಕುಟುಂಬದ ಎಲ್ಲ ಅರ್ಹ ಸದಸ್ಯರ ಹಣವನ್ನು ಯಜಮಾನನ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದೆಂದು ಸರ್ಕಾರ ಹೇಳಿದೆ.
‘ಅಕ್ಕಿ ಲಭ್ಯತೆವರೆಗೆ ಈ ವ್ಯವಸ್ಥೆ ಇರುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಪ್ರಕಾರ ತಿಂಗಳಿಗೆ ಸುಮಾರು 800 ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಅಕ್ಕಿ ಕೊಡಲಾಗದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ನಿಂದ ಭಾರಿ ಟೀಕೆಗಳನ್ನು ಎದುರಿಸುತ್ತಿದ್ದ ಕಾಂಗ್ರೆಸ್ ನಾಯಕರು, ಮುಜುಗರದಿಂದ ಪಾರಾಗಲು ತಾತ್ಕಾಲಿಕವಾಗಿ ಸೂಕ್ತ ಪರಿಹಾರವನ್ನೇ ಕಂಡುಕೊಂಡಿದ್ದಾರೆ ಎನ್ನಬಹುದು. ಆದರೆ ಅಕ್ಕಿ ಹೊಂದಿಸುವ ಸವಾಲು ಇದ್ದೇ ಇದೆ. ಮೆಗಾ ಹೂಡಿಕೆಗಳಿಗೆ ಪ್ರೋತ್ಸಾಹ ನೀಡಲು; ಸಂಘಟನೆಗಳು ಹಾಗೂ ವ್ಯಕ್ತಿಗಳ ಮೇಲೆ ಹೂಡಲಾಗಿರುವ ಕೇಸುಗಳನ್ನು ವಾಪಸ್ ಪಡೆಯುವುದು ಹಾಗೂ ನೀರಾವರಿ ನ್ಯಾಯಾಧಿಕರಣ ಮತ್ತು ಅನುಷ್ಠಾನ ಸಂಬಂಧ ಸಂಪುಟ ಸಮಿತಿಗಳನ್ನು ರಚಿಸುವುದು ಮುಂತಾದ ನಿರ್ಣಯಗಳನ್ನು ಸಹ ಸಂಪುಟ ತೆಗೆದುಕೊಂಡಿದೆ. ಇದರೊಟ್ಟಿಗೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡದಿದೆಯೆನ್ನಲಾದ ಹಗರಣಗಳ ತನಿಖೆ ನಡೆಸುವುದಾಗಿಯೂ ಸರ್ಕಾರ ಹೇಳಿದೆ. ಒಟ್ಟಿನಲ್ಲಿ ಸರ್ಕಾರದ ಹೆಗಲ ಮೇಲೆ ಭಾರಿ ಭಾರವೇ ಇದೆ.