ಗಡಿ ವಿವಾದ ಮುಗಿದ ಕತೆಯಾಗಿದ್ದು, ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿಯನ್ನು ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ನಡೆದಿರುವ ವಿಧಾನಮಂಡಲದ ಅಧಿವೇಶನದಲ್ಲಿ ಸ್ಪಷ್ಟವಾಗಿ, ಗಟ್ಟಿಯಾಗಿ ಪ್ರತಿಪಾದಿಸಿರುವುದು ಹಾಗೂ ಇದಕ್ಕೆ ರಾಜ್ಯದಲ್ಲಿನ ವಿರೋಧ ಪಕ್ಷಗಳು ಕೂಡ ಬೆಂಬಲ ವ್ಯಕ್ತಪಡಿಸಿರುವುದು ಕರ್ನಾಟಕದ ನೆಲದ ರಕ್ಷಣೆ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಗಡಿ ವಿಚಾರದಲ್ಲಿ ರಾಜ್ಯದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಕ್ಕೊರಲ ನಿಲುವನ್ನು ವ್ಯಕ್ತಪಡಿಸಿರುವುದು ಕರ್ನಾಟಕ ಪ್ರತಿಪಾದನೆಗೆ ಆನೆಬಲ ತಂದುಕೊಟ್ಟದಂತಾಗಿದೆ. 1956ರಲ್ಲಿ ಭಾಷಾವಾರು ಆಧರಿತವಾಗಿ ಪ್ರಾಂತ್ಯಗಳನ್ನು ರಚಿಸಿದಾಗ ಬೆಳಗಾವಿ ಸೇರಿದಂತೆ ಮುಂಬೈ ಪ್ರಾಂತ್ಯದಲ್ಲಿನ ಕನ್ನಡ ಭಾಷಿಕ ಪ್ರದೇಶಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಲಾಯಿತು. ನಂತರ ಬೆಳಗಾವಿಯನ್ನು ತನಗೆ ನೀಡಬೇಕೆಂದು ಮಹಾರಾಷ್ಟ್ರದ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ 1966ರಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೆಹರಚಂದ್ ಮಹಾಜನ್ ನೇತೃತ್ವದಲ್ಲಿ ಆಯೋಗ ರಚಿಸಿತು. ಆಗ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ವಿ.ಪಿ.ನಾಯಕ್ ಅವರು ಈ ಆಯೋಗ ಏನೇ ತೀರ್ಪು ನೀಡಿದರೂ ಒಪ್ಪಿಕೊಳ್ಳುವುದಾಗಿ ಹೇಳಿದ್ದರು.
ದಕ್ಷಿಣ ಸೊಲ್ಲಾಪುರದ 65 ಹಳ್ಳಿಗಳು, ಸಂಪೂರ್ಣ ಅಕ್ಕಲಕೋಟೆ ತಾಲೂಕು, ಜತ್ತ ತಾಲೂಕಿನ 44 ಹಳ್ಳಿಗಳು, ಗಡ ಹಿಂಗ್ಲಜ ತಾಲೂಕಿನ 15 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು ಎಂದು ಈ ಆಯೋಗವು ಶಿಫಾರಸು ಮಾಡಿತು. ಬೆಳಗಾವಿ ತಾಲೂಕಿನ 12 ಹಳ್ಳಿಗಳು, ಖಾನಾಪುರ ತಾಲೂಕಿನ 152 ಹಳ್ಳಿಗಳು, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ 41 ಹಳ್ಳಿಗಳು, ಹುಕ್ಕೇರಿ ತಾಲೂಕಿನ 9 ಹಳ್ಳಿಗಳು, ಇತಿಹಾಸ ಪ್ರಸಿದ್ಧ ನಂದಗಡ, ಕಕ್ಕಸಕೊಪ್ಪ ಜಲಾಶಯ ಇವೆಲ್ಲಾ ಮಹಾರಾಷ್ಟ್ರಕ್ಕೆ ಸೇರಬೇಕು ಎಂದೂ ಶಿಫಾರಸಿನಲ್ಲಿ ಹೇಳಲಾಯಿತು. ಈ ವರದಿ ಪ್ರಕಾರ ಬೆಳಗಾವಿ ನಗರ ಕರ್ನಾಟಕದಲ್ಲೇ ಉಳಿದುಕೊಂಡಿತು. ಕರ್ನಾಟಕ ಈ ವರದಿಯನ್ನು ಒಪ್ಪಿಕೊಂಡರೂ ಮಹಾರಾಷ್ಟ್ರದ ಅಪಸ್ವರ ಮುಂದುವರಿಯಿತು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಹೋರಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಬಲ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ಕ್ಷೀಣಿಸಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಎಂಇಎಸ್ ಸತತವಾಗಿ ಗೆದ್ದುಬರುತಿತ್ತು. ಅಲ್ಲದೆ, ಎರಡ್ಮೂರು ವಿಧಾನಸಭೆ ಕ್ಷೇತ್ರಗಳಲ್ಲೂ ಜಯಿಸುತ್ತಿತ್ತು. ಆದರೆ, ಕಳೆದೆರಡು ದಶಕಗಳಿಂದ ಎಂಇಎಸ್ ಒಗ್ಗಟ್ಟು ಮುರಿದಿದ್ದು, ರಾಜಕೀಯವಾಗಿ ಕಳೆಗುಂದಿದೆ. 2006ರಲ್ಲಿ ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರವು ಕ್ಷೀಣಗೊಂಡಿದ್ದ ಎಂಇಎಸ್ ಹೋರಾಟಕ್ಕೆ ಅಂತಿಮ ಪ್ರಹಾರವನ್ನೇ ನೀಡಿತು. ಆದರೂ, ಮಹಾರಾಷ್ಟ್ರದ ನಾಯಕರು ಆಗಾಗ, ಅದರಲ್ಲೂ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಈ ವಿಷಯದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ.
‘ಮುಖ್ಯಮಂತ್ರಿ ಬೊಮ್ಮಾಯಿಯವರು ಬೇಜವಾಬ್ದಾರಿಯುತ ಹೇಳಿಕೆಯನ್ನು ನಿಲ್ಲಿಸದಿದ್ದರೆ ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಕರ್ನಾಟಕಕ್ಕೆ ನೀರು ಹರಿಸುವ ಬಗ್ಗೆ ಮರು ಪರಿಶೀಲಿಸಬೇಕಾಗುತ್ತದೆ’ ಎಂದು ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ಈಗ ನೀಡಿರುವ ಎಚ್ಚರಿಕೆ ಭಾರತದ ಒಕ್ಕೂಟ ವ್ಯವಸ್ಥೆ ಒಡ್ಡಿರುವ ಬೆದರಿಕೆ ಎಂದೇ ಹೇಳಬೇಕಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿ ಹರಿಯುವ ಕೃಷ್ಣಾ ನದಿ ನೀರನ್ನು ಬಚಾವತ್ ಆಯೋಗದ ಐತೀರ್ಪಿನ ಪ್ರಕಾರ ಹಂಚಿಕೊಳ್ಳಲಾಗಿದೆ. ಇಂತಹ ಹೇಳಿಕೆಗಳು ಸನ್ನಿವೇಶವನ್ನು ಮತ್ತಷ್ಟು ಕದಡುತ್ತವೆಯೇ ವಿನಾ ಪರಿಹಾರ ನೀಡುವುದಿಲ್ಲ.