ನ್ಯೂಸ್

ಕಠಿಣ ಕ್ರಮ ಅನಿವಾರ್ಯ: ಮತ್ತೆ ಹೆಚ್ಚುತ್ತಿರುವ ಖಲಿಸ್ತಾನ ಚಟುವಟಿಕೆ

Webdesk - Ravikanth

ಕೆಲ ದಿನಗಳಿಂದ ಪಂಜಾಬಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೇಶ-ವಿದೇಶಗಳ ಗಮನ ಸೆಳೆಯುತ್ತಿವೆ. ಅಷ್ಟೇ ಅಲ್ಲ, ಖಲಿಸ್ತಾನ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದು ಹಿಂಸಾತ್ಮಕವಾದೀತೇ ಎಂಬ ಕಳವಳವೂ ಶುರುವಾಗಿದೆ. ಹೀಗಾಗಿ ಪಂಜಾಬ್ ಮತ್ತು ಕೇಂದ್ರ ಸರ್ಕಾರಗಳು ಆರಂಭದಲ್ಲೇ ಬಿಗಿ ಕ್ರಮಗಳ ಮೂಲಕ ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳಬೇಕಿದೆ. ಖಲಿಸ್ತಾನ ಹೋರಾಟಗಾರ ಹಾಗೂ ವಾರಿಸ್ ದೇ ಪಂಜಾಬ್ ಸಂಘಟನೆಯ ಮುಖ್ಯಸ್ಥ ಅಮೃತ್​ಪಾಲ್ ಸಿಂಗ್ ಎಂಬಾತನ ಸಹಚರನೊಬ್ಬನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿಸಲು ಪೊಲೀಸರು ಹೋದಾಗ, ಬೆಂಬಲಿಗರು ಅಡ್ಡಿಪಡಿಸಿದ್ದಲ್ಲದೆ, ಕತ್ತಿ ಹಾಗೂ ಶಸ್ತ್ರಾಸ್ತ್ರಗಳನ್ನೂ ಝುಳಪಿಸಿದ್ದರು. ಆಗ ಪೊಲೀಸರು ಬರಿಗೈಲಿ ವಾಪಸಾಗಿದ್ದರು. ಭಾರತದಲ್ಲಿ ಖಲಿಸ್ತಾನ ಬೆಂಬಲಿಗರ ಮೇಲೆ ಕ್ರಮ ಖಂಡಿಸಿ, ನಂತರದಲ್ಲಿ ಲಂಡನ್​ನಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿನ ತ್ರಿವರ್ಣಧ್ವಜವನ್ನು ಖಲಿಸ್ತಾನ ಬೆಂಬಲಿಗರು ಕೆಳಗಿಳಿಸಿದ್ದರು. ತರುವಾಯ, ರಾಯಭಾರ ಕಚೇರಿ ಸಿಬ್ಬಂದಿ ಧ್ವಜವನ್ನು ಮರುಹಾರಿಸಿದರು.

ಇದಲ್ಲದೆ, ಅಮೃತ್​ಪಾಲ್ ಸಿಂಗ್ ಮತ್ತು ಇತರ ಕಾರ್ಯಕರ್ತರ ಮೇಲಿನ ಕ್ರಮ ವಿರೋಧಿಸಿ ಖಲಿಸ್ತಾನ ಬೆಂಬಲಿಗರು ಆಸ್ಟ್ರೇಲಿಯಾದ ಕ್ಯಾನ್ಬೆರಾದ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಮೆರಿಕ ಸ್ಯಾನ್​ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ಮೂಲಕ ವಿಷಯವನ್ನು ಹೆಚ್ಚು ಪ್ರಚಾರಗೊಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಹಾಗೂ ಹೋರಾಟಕ್ಕೆ ಸಹಾನುಭೂತಿ ಗಿಟ್ಟಿಸಿಕೊಳ್ಳುವ ಇರಾದೆ ಇವರಿಗೆ ಇದ್ದಂತಿದೆ.

ಖಲಿಸ್ತಾನ ಪ್ರತ್ಯೇಕ ದೇಶದ ಬೇಡಿಕೆ ಹಲವು ದಶಕಗಳ ಹಿಂದಿನದು. ಈ ಕುರಿತ ಹೋರಾಟ ಪಂಜಾಬಿನಲ್ಲಿ ಉಗ್ರವಾದಕ್ಕೂ ಕಾರಣವಾಗಿ, ಹಿಂಸಾತ್ಮಕ ಹಾದಿ ಹಿಡಿದು, ಅಪಾರ ಸಾವುನೋವುಗಳೂ ಆದವು. ಬೇಅಂತ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ, ಕೆಪಿಎಸ್ ಗಿಲ್ ಪೊಲೀಸ್ ಮಹಾನಿರ್ದೇಶಕರಾಗಿದ್ದಾಗಿನ ಅವಧಿಯಲ್ಲಿ ಉಗ್ರವಾದದ ವಿರುದ್ಧ ಕಠಿಣ ನಿಲುವು ತಳೆದು, ಅಂತೂ ಆ ಪಿಡುಗನ್ನು ಕೊನೆಗೊಳಿಸಲಾಯಿತು. ಆದರೆ ಅದಕ್ಕೆ ತೆತ್ತ ಬೆಲೆ ಮಾತ್ರ ಅಪಾರ. ಖಲಿಸ್ತಾನ ಹೋರಾಟದ ಅಡ್ಡಪರಿಣಾಮವೋ ಎಂಬಂತೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾಯಿತು; ಬೇಅಂತ್ ಸಿಂಗ್ ಕೂಡ ಹತ್ಯೆಗೀಡಾದರು. ಇದಲ್ಲದೆ ಅನೇಕ ಸೇನಾಧಿಕಾರಿಗಳನ್ನು ಕೊಲ್ಲಲಾಯಿತು.

ಈಗ ಮುಖ್ಯವಾಗಿ ಕೆನಡಾವನ್ನು ಕೇಂದ್ರೀಕರಿಸಿಕೊಂಡು ಖಲಿಸ್ತಾನ ಚಳವಳಿ ಅಲ್ಪಜೀವ ಹಿಡಿದುಕೊಂಡಿದೆ. ಖಲಿಸ್ತಾನ ಬೇಡಿಕೆಗೆ ಪರೋಕ್ಷ ಬೆಂಬಲ ವಿಚಾರವಾಗಿ ಕೆನಡಾ ಪ್ರಧಾನಿ ಜತೆಗೆ ಭಾರತ ಈ ಹಿಂದೆ ವಿಷಯ ಪ್ರಸ್ತಾಪಿಸಿತ್ತು ಕೂಡ. ಜಮ್ಮು-ಕಾಶ್ಮೀರದಲ್ಲಿ ಸಹ ಭಯೋತ್ಪಾದನೆ ಈಗ ಹಿಡಿತಕ್ಕೆ ಬರುತ್ತಿರುವುದರಿಂದ, ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಕುಕೃತ್ಯ ನಡೆಸುವುದಕ್ಕೆ ಅವಕಾಶಗಳು ಕಡಿಮೆಯಾಗುತ್ತಿವೆ. ಈ ಹಿಂದೆ ಪಂಜಾಬಿನಲ್ಲಿ ವ್ಯಾಪಕವಾಗಿ ಮಾದಕವಸ್ತುಗಳನ್ನು ಪಸರಿಸುವುದರ ಮೂಲಕ ಇದೇ ಪಾಕಿಸ್ತಾನ ಡ್ರಗ್ಸ್ ಭಯೋತ್ಪಾದನೆ ನಡೆಸಿತ್ತು. ಈಗ ಖಲಿಸ್ತಾನ ಹೋರಾಟ ಮತ್ತೆ ಚಿಗುರಿದರೆ ಪಾಕಿಸ್ತಾನವೂ ಅವರಿಗೆ ಬೆಂಬಲ ನೀಡುವ ಸಾಧ್ಯತೆ ಇದ್ದೇ ಇದೆ. ಹಾಗೇನಾದರೂ ಈ ಆಂದೋಲನ ಮತ್ತಷ್ಟು ಬಲಿತಲ್ಲಿ ಪಂಜಾಬಿಗೆ ಮಾತ್ರವಲ್ಲ, ಒಟ್ಟಾರೆಯಾಗಿ ದೇಶಕ್ಕೂ ಮತ್ತೊಂದು ತಲೆನೋವು ತಪ್ಪಿದ್ದಲ್ಲ. ಈಗಿನ ವಾತಾವರಣ ದಲ್ಲಿ ಪ್ರತ್ಯೇಕತೆಯ ಮಾತಿನಿಂದ ಯಾರಿಗೂ ಸುಖವಿಲ್ಲ. ಹೀಗಾಗಿ ಆರಂಭದಲ್ಲೇ ಬಿಗಿ ನಿಲುವಿನ ಮೂಲಕ ಚಳವಳಿಯನ್ನು ನಿಗ್ರಹಿಸಬೇಕಾದ ಅಗತ್ಯವಿದೆ.