ಉದ್ಯೋಗಪ್ರಾಪ್ತಿ ನಿಟ್ಟಿನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಕ-ಯುವತಿಯರು ನಡೆಸುವ ತಯಾರಿಯ ಶ್ರಮ ಅಷ್ಟಿಷ್ಟಲ್ಲ. ಪಿಯು ಶಿಕ್ಷಣ ಅಥವಾ ಪದವಿ ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ಉದ್ಯೋಗಬೇಟೆ ಆರಂಭವಾಗುತ್ತದೆ. ಉತ್ತಮ ಉದ್ಯೋಗ ಪಡೆದುಕೊಂಡು, ಬದುಕು ಕಟ್ಟಿಕೊಳ್ಳುವ ಕನಸು ಬಹುತೇಕ ಎಲ್ಲರಲ್ಲೂ ಇರುತ್ತದೆ. ಈ ನಿಟ್ಟಿನಲ್ಲಿ ವಿವಿಧ ಪರೀಕ್ಷಾ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳಿಗೆ ಅಭ್ಯರ್ಥಿಗಳು ವರ್ಷಗಟ್ಟಲೇ ತಯಾರಿ ನಡೆಸುತ್ತಾರೆ. ಪರೀಕ್ಷೆಗಳನ್ನು ಚೆನ್ನಾಗಿ ಎದುರಿಸಲು ದಿನದ ಹಲವು ಗಂಟೆಗಳನ್ನು ಅಧ್ಯಯನಕ್ಕೆಂದೇ ಮೀಸಲಾಗಿ ಇಡಬೇಕು. ಅಧ್ಯಯನ ಸಾಮಗ್ರಿ ಖರೀದಿ, ಪರೀಕ್ಷಾ ಶುಲ್ಕ ಇತ್ಯಾದಿಗೆಲ್ಲ ಹಣ ಹೊಂದಿಸಬೇಕು. ಈ ಅವಧಿಯಲ್ಲಿ ಓದಿನ ಪ್ರಕ್ರಿಯೆಯಲ್ಲಿ ಏನೇ ಅಡ್ಡಿ ಆತಂಕಗಳು ಎದುರಾದರೂ ಮೀರಿ ನಿಲ್ಲಬೇಕು. ಅಂತಿಮವಾಗಿ, ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ಎದುರಿಸಿ, ಉತ್ತಮ ಫಲಿತಾಂಶ ಪಡೆಯಬೇಕು ಎಂಬುದೇ ಅಭ್ಯರ್ಥಿಗಳ ಗುರಿ ಆಗಿರುತ್ತದೆ. ಹೀಗಿರುವಾಗ, ಒಂದೇ ದಿನ ಹಲವು ಪರೀಕ್ಷೆಗಳನ್ನು ಇಟ್ಟರೆ, ಅದು ಅಭ್ಯರ್ಥಿಗಳ ಅವಕಾಶವನ್ನು ಕಸಿದುಕೊಂಡು, ಅವರ ಭವಿಷ್ಯದೊಡನೆ ಚೆಲ್ಲಾಟವಾಡಿದಂತೆ. ಸರ್ಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಈ ಸಾವಿರಾರು ಅಭ್ಯರ್ಥಿಗಳ ನೋವು, ಆತಂಕ ಅರ್ಥವಾಗುವುದಿಲ್ಲವೆ?
ನವೆಂಬರ್ 5 (ಭಾನುವಾರ)ರಂದು ಕರ್ನಾಟಕ ಲೋಕ ಸೇವಾ ಆಯೋಗವು ಲೆಕ್ಕ ಸಹಾಯಕ ಹುದ್ದೆಗೆ ಪರೀಕ್ಷೆ ನಡೆಸುತ್ತಿದೆ. ಇದೇ ದಿನ, ಐಬಿಪಿಎಸ್ ಪರೀಕ್ಷೆ ಮತ್ತು ಪೊಲೀಸ್ ಪೇದೆ ನೇಮಕಾತಿಗೆ ಪರೀಕ್ಷೆ ನಡೆಯಲಿದೆ. ಅಂದರೆ, ಒಂದೇ ದಿನ ಮೂರು ಪರೀಕ್ಷೆಗಳು! ಬಹುತೇಕ ಅಭ್ಯರ್ಥಿಗಳು ಹಲವು ಪರೀಕ್ಷೆಗಳಿಗೆ ತಯಾರಿ ನಡೆಸಿರುತ್ತಾರೆ, ಪರೀಕ್ಷಾ ಶುಲ್ಕವನ್ನೂ ಪಾವತಿಸಿರುತ್ತಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ವಿವಿಧ ನಿಗಮ ಮಂಡಳಿಗಳಿಗೆ ಒಂದೇ ದಿನ ಪರೀಕ್ಷೆ ನಡೆಸುತ್ತಿದೆ (ಅಕ್ಟೋಬರ್ 29 ಮತ್ತು 30). ಪ್ರತಿ ನಿಗಮ ಮಂಡಳಿಗಳ ಪರೀಕ್ಷೆಯನ್ನು ಪ್ರತ್ಯೇಕವಾಗಿ ನಡೆಸುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಹೀಗೆ ಒಂದೇ ದಿನ ವಿವಿಧ ಪರೀಕ್ಷೆಗಳ ಆಯೋಜನೆಯ ಪರಿಣಾಮ, ಎಲ್ಲ ಹುದ್ದೆಗೂ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಓದಿರುವ ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗುತ್ತಾರೆ. ಅಲ್ಲದೆ, ಯಾವ ಪರೀಕ್ಷೆಯನ್ನು ಎದುರಿಸಬೇಕು, ಯಾವುದನ್ನು ಬಿಡಬೇಕು ಎಂಬ ಸಹಜ ಗೊಂದಲಕ್ಕೆ ಒಳಗಾಗುತ್ತಾರೆ. ಪರೀಕ್ಷಾ ಶುಲ್ಕವೂ ವ್ಯರ್ಥವಾಗುತ್ತದೆ.
ಐಬಿಪಿಎಸ್ ಸಾಕಷ್ಟು ಮುಂಚೆಯೇ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಆದರೂ, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಲೆಕ್ಕ ಸಹಾಯಕ ಪರೀಕ್ಷೆಯನ್ನು ನ.5ರಂದೇ ನಿಗದಿ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಆಯೋಗದ ಬಳಿ ಸ್ಪಷ್ಟ ಉತ್ತರವಿಲ್ಲ. ವೇಳಾಪಟ್ಟಿ ಬದಲಾಯಿಸಬೇಕು ಎಂಬ ಅಭ್ಯರ್ಥಿಗಳ ಆಗ್ರಹಕ್ಕೂ ಕೆಪಿಎಸ್ಸಿ ಯಾವುದೇ ಸ್ಪಂದನೆ ನೀಡಿಲ್ಲ. ಪೊಲೀಸ್ ಪೇದೆ ನೇಮಕಾತಿಗೂ ಈಗ ಇದೇ ದಿನ ಪರೀಕ್ಷೆ ನಡೆಯಲಿರುವುದರಿಂದ, ಗೊಂದಲ ಮತ್ತಷ್ಟು ಹೆಚ್ಚಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು, ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಸೂಕ್ತ ಹಾಗೂ ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕು. ಸಾವಿರಾರು ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಬೇಡ. ಅವರ ನೋವಿಗೆ ಸರ್ಕಾರ ಮತ್ತು ಸಂಬಂಧಿತ ಪರೀಕ್ಷಾ ಪ್ರಾಧಿಕಾರಗಳು ಸ್ಪಂದಿಸಲಿ.