ನ್ಯೂಸ್

ಭ್ರಷ್ಟಾಚಾರ ನಿಯಂತ್ರಣಕ್ಕೆ ಬಲ; ಸಾಂದರ್ಭಿಕ ಸಾಕ್ಷ್ಯ ಪರಿಗಣನೆಗೆ ಸುಪ್ರೀಂಕೋರ್ಟ್ ತೀರ್ಪು

Webdesk - Ravikanth

ಭ್ರಷ್ಟಾಚಾರ ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿ ಹಾಗೂ ನೌಕರರ ವಿರುದ್ಧ ನೇರ ಮೌಖಿಕ ಅಥವಾ ದಾಖಲೆ ಸ್ವರೂಪದ ಸಾಕ್ಷ್ಯಗಳಿಲ್ಲದ ವೇಳೆ ಸಾಂರ್ದಭಿಕ ಸಾಕ್ಷ್ಯಗಳ ಆಧಾರದ ಮೇಲೆ ಅಪರಾಧ ಸಾಬೀತುಪಡಿಸಬಹುದು. ದೂರುದಾರರು ಸಾವನ್ನಪು್ಪವುದರಿಂದ ಹಾಗೂ ಇತರ ಕಾರಣಗಳಿಂದಾಗಿ ನೇರ ಸಾಕ್ಷ್ಯಗಳು ಲಭ್ಯವಿಲ್ಲದಿದ್ದರೂ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್​ನ ಸಾಂವಿಧಾನಿಕ ಪೀಠವು ತೀರ್ಪು ನೀಡಿದೆ. ಈ ಅಂಶವನ್ನು ಸೂಕ್ತ ರೀತಿಯಲ್ಲಿ ಕಾರ್ಯಗತಗೊಳಿಸಿದರೆ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಬಹುದಾಗಿದೆ.

ಟ್ರಾನ್ಸ್​ಪರೆನ್ಸಿ ಇಂಟರ್​ನ್ಯಾಷನಲ್ ಸಂಸ್ಥೆಯು ಇದೇ ವರ್ಷ ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯ ಅನುಸಾರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಜಗತ್ತಿನ 180 ರಾಷ್ಟ್ರಗಳ ಪೈಕಿ ಭಾರತ 85ನೇ ಸ್ಥಾನದಲ್ಲಿದೆ. ಕಳೆದ ವರ್ಷ 86ನೇ ಸ್ಥಾನದಲ್ಲಿತ್ತು. ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗುತ್ತಲೇ ಸಾಗುತ್ತಿದೆ ಎಂಬ ಕಳವಳಕಾರಿ ಸಂಗತಿಯ ಸೂಚಕ ಇದಾಗಿದೆ. ಸಾರ್ವಜನಿಕರು ಯಾವುದೇ ಸರ್ಕಾರಿ ಕಚೇರಿಗೆ ತೆರಳಿದರೂ ಹಣ ಕೊಡದೆ ಕೆಲಸವಾಗುವುದು ದುಸ್ತರ ಎಂಬಂತಹ ವಾತಾವರಣ ಮನೆ ಮಾಡಿದೆ. ಯಾವುದೇ ಯೋಜನೆ ಫಲಾನುಭವಿಗಳಾಗಲು, ಸರ್ಕಾರಿ ದಾಖಲೆಗಳನ್ನು ಪಡೆದುಕೊಳ್ಳಲು, ಕಾಮಗಾರಿ ಮಂಜೂರು ಮಾಡಿಸಿಕೊಳ್ಳಲು, ಅನುಮತಿ ಪಡೆದುಕೊಳ್ಳಲು... ಹೀಗೆ ಪ್ರತಿಯೊಂದು ಕೆಲಸಕ್ಕೂ ನೌಕರರ ಕೈ ಬೀಸಿ ಮಾಡಲೇಬೇಕು ಎಂಬುದು ಜನರ ಅಳಲು. ಈ ಕೆಲಸಗಳು ಕಾನೂನುಬದ್ಧವಾಗಿದ್ದರೂ ಅಗತ್ಯವಿದ್ದ ದಾಖಲೆಗಳನ್ನು ಒದಗಿಸಿದ್ದರೂ ಲಂಚ ನೀಡದಿದ್ದರೆ ಸಾರ್ವಜನಿಕರನ್ನು ಸತಾಯಿಸುವ ಪರಿಪಾಠ ಇಲಾಖೆಗಳಲ್ಲಿ ಕಂಡುಬರುತ್ತಿದೆ. ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿರುವವರು ಸಹ ಲಂಚ ಸ್ವೀಕರಿಸುವುದು ತಮ್ಮ ಹಕ್ಕು ಎಂಬಂತೆ ವರ್ತಿಸುವುದು ಗೋಚರಿಸುತ್ತದೆ.

ಕರ್ತವ್ಯಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ, ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ ತೆಗೆದುಕೊಳ್ಳುವುದನ್ನು, ವಿಡಿಯೋ ಮಾಡಿಕೊಳ್ಳುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಆದರೆ, ಭ್ರಷ್ಟಾಚಾರದ ವ್ಯವಹಾರಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾದ ನಂತರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಆದೇಶ ರದ್ದುಪಡಿಸಿದ್ದರು. ಭ್ರಷ್ಟ ಸರ್ಕಾರಿ ಸಿಬ್ಬಂದಿ, ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯದಲ್ಲಿ ರೂಪಿಸಲಾದ ಲೋಕಾಯುಕ್ತ ಸಂಸ್ಥೆಯನ್ನು ಬಲಹೀನಗೊಳಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿತ್ತು. ಆದರೆ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಪಡಿಸಿ, ಹೆಚ್ಚಿನ ಅಧಿಕಾರ ನೀಡಲು ಹೈಕೋರ್ಟ್ ತೀರ್ಪು ನೀಡಿದ್ದರಿಂದ ಈಗ ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದೆ. ಕಾರ್ಯಾಂಗದ ಅದಕ್ಷತೆ ಹಾಗೂ ಭ್ರಷ್ಟಾಚಾರದ ವಿರುದ್ಧ ಆಗಾಗ ಚಾಟಿ ಬೀಸುವ ಮೂಲಕ ಕ್ರಿಯಾಶೀಲತೆ ತೋರುವ ನ್ಯಾಯಾಂಗವು ಭ್ರಷ್ಟಾಚಾರ ನಿಯಂತ್ರಣದ ಆಶಾಕಿರಣವಾಗಿ ಗೋಚರಿಸುತ್ತದೆ. ಸಾಕಷ್ಟು ಸಾರ್ವಜನಿಕರು ವಿಳಂಬಗತಿಯನ್ನು ತಪ್ಪಿಸಲು ಲಂಚ ಕೊಟ್ಟು ಕೆಲಸ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇಂತಹ ವ್ಯವಸ್ಥೆ ವಿರುದ್ಧ ಹೋರಾಡುವ ಛಲವಿರುವವರು ವಿರಳ. ಭ್ರಷ್ಟರ ವಿರುದ್ಧ ಪ್ರಕರಣ ದಾಖಲಿಸಿ ಹೋರಾಡಲು ಮುಂದಾಗುವವರಿಗೆ ಸುಪ್ರೀಂ ಕೋರ್ಟ್​ನ ಪ್ರಸ್ತುತ ತೀರ್ಪು ಬಲ ತುಂಬಬಹುದಾಗಿದೆ.