ನ್ಯೂಸ್

ಆರೋಗ್ಯಕ್ಕೆ ಆದ್ಯತೆ: ಸರ್ಕಾರಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಸಿಎಂ ಗಡುವು

Webdesk - Ravikanth

ಆರೋಗ್ಯ ಕಾಳಜಿ ಎಂಬುದು ವ್ಯಕ್ತಿಗತ ಸಂಗತಿಯಾದರೂ, ಇದರಲ್ಲಿ ಸರ್ಕಾರ ಸಹ ಒಂದಷ್ಟು ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ಹೊಂದಿದೆ. ಸಾರ್ವತ್ರಿಕ ಆರೋಗ್ಯ ದೃಷ್ಟಿಯಿಂದ ಸರ್ಕಾರಿ ವ್ಯವಸ್ಥೆ ಸದಾ ಸಜ್ಜಾಗಿರಬೇಕಾಗುತ್ತದೆ ಮತ್ತು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಕುವ ನಿಟ್ಟಿನಲ್ಲಿ ಸತತ ಪ್ರಯತ್ನಶೀಲವಾಗಿರಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಆರೋಗ್ಯ ರಂಗಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆಗಳನ್ನು ನಡೆಸಿ, ಕೆಲ ಸಲಹೆಸೂಚನೆಗಳನ್ನು ನೀಡಿದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿದ್ದರು. ತಾಲೂಕು ಆಸ್ಪತ್ರೆಗಳ ಸ್ಥಿತಿಗತಿ ಬಗ್ಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ತಮಿಳುನಾಡು ಹಾಗೂ ರಾಜಸ್ಥಾನದಲ್ಲಿನ ಸಾರ್ವತ್ರಿಕ ವಿಮಾ ಯೋಜನೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಆರೋಗ್ಯ ಮಿಷನ್​ನ ಅನುದಾನ ಸಕಾಲದಲ್ಲಿ ವೆಚ್ಚವಾಗದಿರುವುದನ್ನು ಗುರುತಿಸಿ, ಈ ವ್ಯವಸ್ಥೆ ಬಲಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಯೋಜನೆಯಡಿ ಶೇ. 52 ರಷ್ಟು ತಜ್ಞ ವೈದ್ಯರ ಕೊರತೆ ಇದೆ. ಶೇ.31ರಷ್ಟು ಎಂಬಿಬಿಎಸ್ ವೈದ್ಯರ ಕೊರತೆ ಹಾಗೂ ಶೇ.18 ರಷ್ಟು ನರ್ಸ್ ಸಿಬ್ಬಂದಿ ಕೊರತೆ ಇದೆ. ಈ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಎಂ.ಆರ್.ಐ. ಸ್ಕ್ಯಾನಿಂಗ್ ಹಾಗೂ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಬೇಕು ಹಾಗೂ ತಂತ್ರಜ್ಞರನ್ನು ನೇಮಕ ಮಾಡಬೇಕು ಎಂದ ಸಿಎಂ, ಮೂರು ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು. ಇನ್ನೊಂದೆಡೆ, ಔಷಧ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಸಿರಪ್, ಸೈಕೋಟ್ರೋಪಿಕ್ ಔಷಧಗಳ ಮಾರಾಟ ಹಾಗೂ ಸ್ಟೇಷನರಿ ಅಂಗಡಿಗಳಲ್ಲಿ ಅಪ್ರಾಪ್ತರಿಗೆ ಲಿಕ್ವಿಡ್ ಎರೇಸರ್​ಗಳ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಸೂಚನೆ ನೀಡಿದ್ದಾರೆ. ಅಕ್ರಮವಾಗಿ ಮಾರಾಟ ಮಾಡುವ ಮೆಡಿಕಲ್ ಶಾಪ್​ಗಳ ವಿರುದ್ಧ ಔಷಧ ನಿಯಂತ್ರಕರ ಮೂಲಕ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಈ ಕುರಿತಂತೆ ಇರುವ ಕಾನೂನುಗಳನ್ನು ಬಳಸಿಕೊಂಡು ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.

ವೈದ್ಯರ ಚೀಟಿ ಇಲ್ಲದೆ ಔಷಧ ಅಂಗಡಿಗಳಲ್ಲಿ ಔಷಧ ಖರೀದಿಸುವ ಪ್ರವೃತ್ತಿ ನಮ್ಮಲ್ಲಿ ವ್ಯಾಪಕವಾಗಿದೆ. ಆದರೆ ಮಾನಸಿಕ ತೊಂದರೆಗೆ ಸಂಬಂಧಿಸಿದ ಔಷಧಗಳನ್ನು ಸಹ ಹೀಗೆ ವೈದ್ಯರ ಸಲಹೆಯಿಲ್ಲದೆ ನೇರವಾಗಿ ತೆಗೆದುಕೊಳ್ಳುವುದು ಅಪಾಯಕಾರಿ. ವಿಶೇಷವಾಗಿ ಮಕ್ಕಳು ಹೀಗೆ ಮಾಡುವುದು ಕಳವಳದ ಸಂಗತಿ. ಇದರ ಜತೆಗೆ, ಆನ್​ಲೈನ್​ನಲ್ಲಿ ಮಾಹಿತಿ ನೋಡಿಕೊಂಡು ಸ್ವಯಂವೈದ್ಯ ಮಾಡಿಕೊಳ್ಳುವವರೂ ಇದ್ದಾರೆ. ಇಂಥ ಸಾಹಸಕ್ಕೆ ಕೈಹಾಕಿ ಆರೋಗ್ಯ ಸಮಸ್ಯೆ ತಂದುಕೊಂಡವರು ಎಷ್ಟೋ ಜನ. ಆರೋಗ್ಯವೆಂಬುದು ನಾಜೂಕು ವಿಷಯವಾಗಿದ್ದು, ಇದನ್ನು ಸರಿಯಾಗಿ ಬಲ್ಲವರು ಮಾತ್ರ ಚಿಕಿತ್ಸೆ ನೀಡಬೇಕೆ ವಿನಾ, ಅರೆಬರೆ ತಿಳಿದವರು ಔಷಧ ನೀಡುವುದು ಅಥವಾ ಸ್ವಯಂವೈದ್ಯ ಅಪೇಕ್ಷಣೀಯವಲ್ಲ. ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ಸುಧಾರಣೆಗೆ ಒಂದಷ್ಟು ಕ್ರಮಗಳಾಗಿವೆ; ಹಾಗೇ ಇನ್ನಷ್ಟು ಕ್ರಮಗಳು ಅಗತ್ಯ ಎಂಬುದು ಸಹ ನಿಜ. ಅದೇ ಕಾಲಕ್ಕೆ, ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯರು ಸಹ ಬದ್ಧತೆಯಿಂದ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಅಪೇಕ್ಷಿತ ಫಲಿತಾಂಶ ಸಿಗಬಲ್ಲದು.