ನ್ಯೂಸ್

ಸುರಕ್ಷತೆಯ ಕ್ರಮಗಳು ಅವಶ್ಯ; ದುರ್ಘಟನೆಗಳು ಮರುಕಳಿಸದಿರಲಿ..

Ravikanth Kundapura

ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ವಣಗೊಳ್ಳುತ್ತಿರುವ ಸುರಂಗವೊಂದರ ಭಾಗ ಭಾನುವಾರ ಕುಸಿದು ಬಿದ್ದಿದ್ದು 40 ಕಾರ್ವಿುಕರು ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ. ಕಾರ್ವಿುಕರನ್ನು ಸುರಕ್ಷಿತವಾಗಿ ಹೊರಗೆ ತರಲು ಯುದ್ಧೋಪಾದಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾರ್​ಧಾಮ್ ರಸ್ತೆ ಯೋಜನೆಯಡಿ ಸಿಲ್ಕಿಯಾರಾವನ್ನು ದಂಡಲ್​ಗಾಂವ್​ಗೆ ಸಂರ್ಪಸಲು ಈ ಸುರಂಗ ಮಾರ್ಗವನ್ನು ನಿರ್ವಿುಸಲಾಗುತ್ತಿತ್ತು. ಕಾರ್ವಿುಕರ ನೆರವಿಗಾಗಿ ಸುರಂಗದೊಳಗೆ ಆಮ್ಲಜನಕ ಪೈಪ್ ಬಿಡಲಾಗಿದ್ದು, ಕಿರಿದಾದ ಕಿಂಡಿ ಕೊರೆಯಲಾಗಿದೆ. ಆದರೆ, ಈ ಸವಾಲಿನ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳಲು ಎರಡು-ಮೂರು ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಸಿಲುಕಿ ಹಾಕಿಕೊಂಡಿರುವ ಕಾರ್ವಿುಕರು ಉತ್ತರಪ್ರದೇಶ ಮತ್ತು ಬಿಹಾರ ಮೂಲದವರಾಗಿದ್ದಾರೆ.

ನಿಜಕ್ಕೂ ಇದು ದುರದೃಷ್ಟಕರ ಘಟನೆ. ಕಾರ್ವಿುಕರನ್ನು ಸುರಕ್ಷಿತವಾಗಿ ಹೊರಗೆ ತೆಗೆಯಲು ಅವಶ್ಯಕವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ನಿರ್ಮಾಣ ಹಂತದಲ್ಲಿನ ಕಟ್ಟಡಗಳು, ಸೇತುವೆಗಳು, ಸುರಂಗಗಳು ಕುಸಿಯುತ್ತಿರುವ ಪ್ರಕರಣಗಳು ಇತ್ತೀಚೆಗೆ ಏರುಮುಖವಾಗಿದ್ದು, ಇಂಥ ಘಟನೆಗಳಲ್ಲಿ ಜೀವಹಾನಿಯ ಪ್ರಮಾಣವು ಹೆಚ್ಚುತ್ತಿರುವುದನ್ನು ಗಂಭೀರ ವಿಷಯವಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಪರಿಗಣಿಸಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣ ಕಾಮಗಾರಿಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿದೆ. ನಿಖರವಾಗಿ ಮತ್ತು ವೇಗವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಇದರಿಂದ ನೆರವಾಗುತ್ತಿದೆ. ಹೀಗಿದ್ದರೂ, ಅವಘಡಗಳ ಸಂಖ್ಯೆ ಹೆಚ್ಚುತ್ತಿರುವುದು ಏಕೆ? ಮೂರು ತಿಂಗಳ ಹಿಂದಷ್ಟೇ ಮಿಜೋರಾಂನಲ್ಲಿ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಕುಸಿದ ಪರಿಣಾಮ 17 ಕಾರ್ವಿುಕರು ಪ್ರಾಣ ಕಳೆದುಕೊಂಡರು. 35-40 ಕಾರ್ವಿುಕರು ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು.

ನಿರ್ಮಾಣ ಕಾಮಗಾರಿಯ ವೇಳೆ ಸುರಕ್ಷಾ ಕ್ರಮಗಳನ್ನು ನಿರ್ಲಕ್ಷಿಸಿದರೆ ಅವಘಡಗಳಿಗೆ ಆಹ್ವಾನ ನೀಡಿದಂತೆ. ಈ ಹಿಂದೆಯೇ ಇಂಥ ಘಟನೆಗಳು ನಡೆದಾಗ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಎಚ್ಚೆತ್ತುಕೊಳ್ಳಬೇಕಿತ್ತು. ಮುಖ್ಯವಾಗಿ, ಇಂಥ ದುರಂತಗಳ ತನಿಖೆ ಸಮರ್ಪಕವಾಗಿ ನಡೆಯುವುದಿಲ್ಲ. ಯಾರನ್ನೋ ಹೊಣೆಗಾರರನ್ನಾಗಿಸಿ ನಿಜವಾದ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಂಡು ಬಿಡುತ್ತಾರೆ. ಇಂಥ ದುರಂತಗಳು ಸಂಭವಿಸಿದ ಬಳಿಕ ಸ್ಥಳದಲ್ಲಿದ್ದ ಕೆಲಸಗಾರರನ್ನೋ, ಗುತ್ತಿಗೆದಾರರನ್ನೋ ಅಥವಾ ಇಂಜಿನಿಯರ್​ಗಳನ್ನೋ ಹೊಣೆಗಾರರನ್ನಾಗಿಸಿ, ಅಧಿಕಾರಿಗಳು ನೈಜ ಕಾರಣ ಮರೆಮಾಚಿ ಬಿಡುತ್ತಾರೆ. ನಿರ್ಮಾಣ ಕಾಮಗಾರಿಗಳಿಗೆ ಅಧಿಕಾರಿಗಳು ಅನುಮತಿ ನೀಡಿರುತ್ತಾರೆ, ಅದರಲ್ಲೂ ಸರ್ಕಾರಿ ಕಾಮಗಾರಿಗಳ ಪ್ರತಿ ಹಂತದಲ್ಲೂ ನಿಗಾ ವಹಿಸುವುದು ಅಧಿಕಾರಿಗಳ ಜವಾಬ್ದಾರಿಯೂ ಹೌದು. ಹೀಗಾಗಿ, ಕರ್ತವ್ಯಲೋಪ ಎಸಗಿದ ಅಥವಾ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ. ದುರಂತ ಸಂಭವಿಸಿದ ಬಳಿಕ ಪರಿಹಾರ ಘೋಷಿಸುವ ಬದಲು, ಮೊದಲೇ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಬೇಕು. ಉತ್ತರಾಖಂಡ ಪ್ರಕರಣದಿಂದ ಪಾಠ ಕಲಿಯಬೇಕು. ಮತ್ತು ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು.