ರಾಜ್ಯದಲ್ಲಿರುವ ಲಕ್ಷಾಂತರ ಬಿ ಖಾತೆ ಆಸ್ತಿಗಳನ್ನು ಎ ಖಾತೆಗೆ ಪರಿವರ್ತಿಸುವ ನಿರ್ಧಾರ ಕೈಗೊಂಡಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಬಡ ಹಾಗೂ ಕೆಳ ಮಧ್ಯಮ ವರ್ಗದ ಪ್ರಸ್ತುತ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಅವಲೋಕಿಸಿದಾಗ ಸರ್ಕಾರದ ಈ ತೀರ್ವನವು ವಾಸ್ತವ ದೃಷ್ಟಿಕೋನದಿಂದ ತೆಗೆದುಕೊಂಡಿದ್ದೆಂಬುದು ವೇದ್ಯವಾಗುತ್ತದೆ. ಖಾತೆ ಪರಿವರ್ತನೆಗೆ ಎರಡು ತಿಂಗಳ ಗಡುವನ್ನು ವಿಧಿಸಿರುವುದು ಸಹ ಗಮನಾರ್ಹ. ಏಕೆಂದರೆ, ಬಿ ಖಾತೆಯಿಂದ ಎ ಖಾತೆಗೆ ಪರಿವರ್ತಿಸಬೇಕೆಂಬ ಬೇಡಿಕೆ ಹಲವಾರು ದಶಕಗಳದ್ದಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದ ಕಟೆಕಟೆಯನ್ನೂ ಏರಿವೆ. ಈಗಾಗಲೇ ಇರುವ ಎ ಖಾತೆಯಲ್ಲಿನ ಕಂದಾಯ ದಾಖಲೆಗಳು ಸಮಗ್ರವಾಗಿಲ್ಲ ಎಂಬ ದೂರುಗಳಿವೆ. ಎಷ್ಟೋ ದಾಖಲೆಗಳು ಕಳೆದುಹೋಗಿವೆ; ಸಾಕಷ್ಟು ಅಪೂರ್ಣ ರೂಪದಲ್ಲಿವೆ. ಇವುಗಳನ್ನೇ ಸರಿಪಡಿಸಿ ಸೂಕ್ತವಾಗಿ ನಿಭಾಯಿಸುವುದು ಸವಾಲಿನ ಸಂಗತಿಯಾಗಿದೆ. ಹೀಗಿರುವಾಗ, ಬಿ ಖಾತೆಗಳನ್ನು ಸಕ್ರಮಗೊಳಿಸಿ ಎ ಖಾತೆಗೆ ಪರಿವರ್ತಿಸುವುದು ಕಠಿಣ ಕಾರ್ಯವೇ ಆಗಿದೆ. ಯಾವುದೇ ಖಾತೆದಾರರಿಗೆ ಅನ್ಯಾಯವಾಗದಂತೆ ಹಾಗೂ ಒಂದೊಮ್ಮೆ ಕೋರ್ಟ್ ಮೆಟ್ಟಿಲೇರಿದಲ್ಲಿ ಸೂಕ್ತವಾಗಿ ಸಮರ್ಥಿಸಿಕೊಳ್ಳುವ ತಯಾರಿ, ಮುನ್ನೆಚ್ಚರಿಕೆಯೊಂದಿಗೆ ಈ ಕೆಲಸ ನಿಭಾಯಿಸಬೇಕಾದ ಸವಾಲು ಸರ್ಕಾರದ ಮೇಲಿದೆ.
ಇನ್ನು ಬೆಂಗಳೂರಿನ ಅಕ್ರಮ-ಸಕ್ರಮ ಆಸ್ತಿಯ ವಿಚಾರ ಸುಪ್ರೀಂ ಕೋರ್ಟ್ ಮುಂದಿದೆ. ಹೀಗಾಗಿ, ಬೆಂಗಳೂರು ಹೊರತುಪಡಿಸಿ ಇನ್ನುಳಿದ ನಗರಗಳಲ್ಲಿ ಪರಿವರ್ತನೆ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದಾಗಿ, ಸರ್ಕಾರದ ಈ ತೀರ್ವನದ ಲಾಭವು 6 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಬೆಂಗಳೂರಿನ ಬಿ ಖಾತಾದಾರರಿಗೆ ಸದ್ಯಕ್ಕೆ ದೊರೆಯದಂತಾಗಿದೆ. ಸೂಕ್ತ ದಾಖಲೆಗಳಿಲ್ಲದ, ಸಕ್ರಮವಾಗಿರದ ಆಸ್ತಿಗಳನ್ನು ಬಿ ಖಾತೆಗಳೆಂದು ಪರಿಗಣಿಸುವ ಪದ್ಧತಿಯನ್ನು ಬೆಂಗಳೂರು ಮಹಾನಗರ ಪಾಲಿಕೆ 2008ರಿಂದ ಆರಂಭಿಸಿದೆ. ಅಲ್ಲದೆ, ಬಿ ಖಾತೆಗಳಿಗೂ ಆಸ್ತಿ ಕರ ವಿಧಿಸುವ ಮೂಲಕ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 2 ಲಕ್ಷಕ್ಕೂ ಅಧಿಕ ಬಿ ಖಾತೆದಾರರಿದ್ದು, ಉಳಿದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 10 ಲಕ್ಷ ಇರಬಹುದೆಂದು ಅಂದಾಜು ಮಾಡಲಾಗಿದೆ. ಇನ್ನು ಬಿ ಖಾತೆಯಿಂದ ಎ ಖಾತೆಗೆ ಸಕ್ರಮಗೊಳಿಸುವ ಸಂದರ್ಭದಲ್ಲಿ ಒಂದಿಷ್ಟು ಕಂದಾಯ ಶುಲ್ಕಗಳನ್ನು ಆಕರಿಸಲಾಗುತ್ತದೆ; ಕರಗಳನ್ನೂ ತುಂಬಿಸಿಕೊಳ್ಳಲಾಗುತ್ತದೆ. ಪ್ರತಿ ವರ್ಷ 100 ರಿಂದ 150 ಕೋಟಿ ರೂ. ಆದಾಯವು ಸ್ಥಳೀಯ ನಗರ ಸಂಸ್ಥೆಗಳಿಗೆ ಬರಲಿದೆ ಎಂಬ ನಿರೀಕ್ಷೆ ಸರ್ಕಾರದ್ದು. ಇನ್ನು ಖಾತೆ ಪರಿವರ್ತನೆಯಿಂದ ಆಸ್ತಿ ಮಾಲಿಕರಿಗೂ ಸಾಕಷ್ಟು ಅನುಕೂಲಗಳು ಆಗಲಿವೆ. ಎ ಖಾತೆಗೆ ಪರಿವರ್ತನೆಯಾದರೆ ಬ್ಯಾಂಕುಗಳಿಂದ ಆಸ್ತಿ ಮೇಲೆ ಸಾಲ ಪಡೆಯುವುದು ಸುಲಭವಾಗಲಿದೆ. ಮೂಲಸೌಕರ್ಯಗಳನ್ನು ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಪಡೆದುಕೊಳ್ಳಲು ಅನುವಾಗುತ್ತದೆ. ಆದರೆ, ಅಕ್ರಮ ಆಸ್ತಿಗಳನ್ನು ಸಕ್ರಮಗೊಳಿಸುವ ಇಂತಹ ಕ್ರಮವು ಅಕ್ರಮ ಕಾರ್ಯಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ; ಅಕ್ರಮ ನಿವೇಶನಗಳ ಮಾರಾಟ ದಂಧೆ ಪೋಷಿಸಿ ದಂತಾಗುತ್ತದೆ ಎಂಬ ಟೀಕೆಗಳೂ ಇವೆ. ಈ ವಾದಗಳೇನೇ ಇದ್ದರೂ, ಸರ್ಕಾರ ವಾಸ್ತವಿಕ ದೃಷ್ಟಿಕೋನದಲ್ಲಿ ಬಿ ಖಾತೆದಾರರಿಗೆ ಅನುಕೂಲವಾಗುವ ನಿರ್ಣಯ ಕೈಗೊಂಡಿದೆ.