ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಶಾಸಕ ಮತ್ತು ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ- ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಸಮಾಧಾನ ಹೊರಹಾಕಿದ್ದು ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರೂ ಆಗಿರುವ ಶಿವಶಂಕರಪ್ಪ ಅವರ ಈ ಆರೋಪವು ವಿರೋಧ ಪಕ್ಷಗಳಿಗೂ ಉತ್ತಮ ಆಹಾರವನ್ನೇ ಒದಗಿಸಿದ್ದು, ಸ್ವಪಕ್ಷೀಯರೇ ಮಾಡಿರುವ ಆಪಾದನೆಯು ಸರ್ಕಾರವನ್ನು ಒಂದಿಷ್ಟು ಇಕ್ಕಟ್ಟಿಗೆ ಸಿಲುಕಿಸಿದ್ದನ್ನು ಅಲ್ಲಗಳೆಯಲಾಗದು.
ರಾಜ್ಯದಲ್ಲಿ ಅತಿದೊಡ್ಡ ಸಮುದಾಯವಾದ ವೀರಶೈವ- ಲಿಂಗಾಯತಕ್ಕೆ ಕಾಂಗ್ರೆಸ್ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂಬ ಭಾವನೆ ಬಲವಾಗಿ ಬೇರೂರಿದೆ. ಈ ಸಮುದಾಯಕ್ಕೆ ಸೇರಿದ ವೀರೇಂದ್ರ ಪಾಟೀಲ ಅವರನ್ನು 1990ರ ಅಕ್ಟೋಬರ್ನಲ್ಲಿ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಎಸ್. ಬಂಗಾರಪ್ಪ ಅವರನ್ನು ಪಟ್ಟಕ್ಕೇರಿಸಿತು. ಆಗಿನಿಂದಲೂ ಲಿಂಗಾಯತ ಸಮುದಾಯವು ಕಾಂಗ್ರೆಸ್ನಿಂದ ದೂರವಾಗಿ, ಇದರ ಪ್ರಯೋಜನವನ್ನು ಬಿಜೆಪಿ ಪಡೆದುಕೊಂಡಿತು ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆಯಾಗಿದೆ. ತದನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಲಿಂಗಾಯತ ಸಮುದಾಯದವರ್ಯಾರೂ ಈ ಉನ್ನತ ಸ್ಥಾನದಲ್ಲಿ ವಿರಾಜಮಾನರಾಗಲಿಲ್ಲ. ಬದಲಾಗಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ಸಮುದಾಯಕ್ಕೆ ಸೇರಿದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಈ ರಾಜಕೀಯ ಇತಿಹಾಸದ ಹಿನ್ನೆಲೆಯಲ್ಲಿ ಕಾರ್ಯಾಂಗದಲ್ಲೂ ಲಿಂಗಾಯತರ ಕಡೆಗಣನೆ ಆರೋಪವು ಸಹಜವಾಗಿಯೇ ಹೆಚ್ಚು ಕಾವು ಪಡೆದುಕೊಳ್ಳುವ ಸಂಗತಿಯಾಗಿದೆ.
ವಿರೋಧ ಪಕ್ಷ ಬಿಜೆಪಿ ಕೂಡ ಶಾಮನೂರ ಆರೋಪಕ್ಕೆ ದನಿಗೂಡಿಸಿದ್ದು, ಲಿಂಗಾಯತ ಮತಗಳನ್ನು ಕಾಯ್ದುಕೊಳ್ಳುವ ತಂತ್ರಗಾರಿಕೆ ಅನುಸರಿಸಲು ಮುಂದಾಗಿದೆ. ಐಎಎಎಸ್, ಅಧಿಕಾರಿಗಳಿಗೆ ಆಯಕಟ್ಟಿನ ಜಾಗಗಳಲ್ಲಿ ಸೂಕ್ತ ಅವಕಾಶ ನೀಡದೆ ನಿರ್ಲಕ್ಷಿಸಲಾಗುತ್ತಿದೆ ಎಂಬ ಸ್ವಪಕ್ಷೀಯ ನಾಯಕನ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೌಮ್ಯವಾದ ರೀತಿಯಲ್ಲಿಯೇ ಪ್ರತಿಕ್ರಿಯಿಸಿದ್ದು, ತಮ್ಮ ಸರ್ಕಾರದಲ್ಲಿ ಯಾವುದೇ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗಿಲ್ಲ; ಮುಂದೆ ಆಗಲೂ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಭಾರತವು ವಿವಿಧ ಧರ್ಮ, ಜಾತಿ, ಉಪಜಾತಿ, ಸಮುದಾಯಗಳಿಂದ ಕೂಡಿರುವ ರಾಷ್ಟ್ರವಾಗಿದೆ. ವೈಯಕ್ತಿಕ ಬದುಕಿನಲ್ಲಿ ಮಾತ್ರವಲ್ಲದೆ, ಸಾಮಾಜಿಕ ಜೀವನದಲ್ಲೂ ಜಾತಿ ಆಧಾರಿತ ಸಂಗತಿಗಳು ಹಾಸುಹೊಕ್ಕಾಗಿವೆ. ರಾಜಕೀಯದಲ್ಲಿ, ಚುನಾವಣೆಗಳಲ್ಲಿ ಜಾತಿಯು ಮಹತ್ವದ ಪಾತ್ರವನ್ನು ವಹಿಸಿಕೊಂಡೇ ಬಂದಿದೆ. ಸಹಜವಾಗಿಯೇ ಇದು ಸರ್ಕಾರಿ ವ್ಯವಸ್ಥೆಗಳಲ್ಲಿ, ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಲ್ಲಿಯೂ ಬೆರೆತುಕೊಂಡಿದೆ.
ಚುನಾವಣೆಯಲ್ಲಿ ಗೆದ್ದುಬಂದ ನಂತರ ಯಾವುದೇ ಒಂದು ಸರ್ಕಾರಕ್ಕೆ ಗರಿಷ್ಠ 5 ವರ್ಷಗಳವರೆಗೆ ಆಡಳಿತ ನಡೆಸಲು ಅವಕಾಶ ಇರುತ್ತದೆ. ಯಾವುದೇ ಪಕ್ಷದ ಸರ್ಕಾರ ಬಂದರೂ ಕಾನೂನು, ನಿಯಮಾವಳಿಗೆ ಅನುಸಾರವಾಗಿ ಆಡಳಿತವನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಅಧಿಕಾರಿಗಳದ್ದಾಗಿರುತ್ತದೆ. ಹೀಗಾಗಿ, ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವ, ಸಮಾಜಮುಖಿ ಚಿಂತನೆ ಇರುವ ದಕ್ಷ ಅಧಿಕಾರಿಗಳಿಗೆ ಮಹತ್ವದ ಹಾಗೂ ಆಯಕಟ್ಟಿನ ಹುದ್ದೆಗಳನ್ನು ದೊರೆಯುವಂತಾಗಬೇಕು. ಸರ್ಕಾರಗಳು ಬದಲಾದಾಗ ಹಾಗೂ ಹಾಲಿ ಸರ್ಕಾರದಲ್ಲಿಯೇ ಸಚಿವರುಗಳು ಬದಲಾದಾಗ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ವರ್ಗಾವಣೆ ಮಾಡುವ, ಕಿರುಕುಳ ನೀಡುವ ಅಥವಾ ಪ್ರಮುಖವಲ್ಲದ ಹುದ್ದೆಗಳಿಗೆ ಸ್ಥಳಾಂತರಿಸುವ ಕೃತ್ಯ ಸರ್ವಥಾ ಸಲ್ಲದು.