ಮುಂಬೈ: ಮಲಯಾಳಂ ನಟಿ ನವ್ಯಾ ನಾಯರ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ವಿಚಾರಣೆಯ ಬಿಸಿ ತಟ್ಟಿದೆ. ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನ ಮಾಡಿಕೊಂಡ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತರಾದ ಐಆರ್ಎಸ್ ಅಧಿಕಾರಿ ಸಚಿನ್ ಸಾವಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ನವ್ಯಾ ನಾಯರ್ ಅವರನ್ನು ವಿಚಾರಣೆ ಮಾಡಲಾಗಿದೆ.
ಸಚಿನ್ ಸಾವಂತ್ ಮತ್ತು ನವ್ಯಾ ನಾಯರ್ ನಡುವೆ ನಿಕಟ ಸಂಪರ್ಕವಿದ್ದು, ದುಬಾರಿ ಚಿನ್ನಾಭರಣವನ್ನು ನವ್ಯಾ ಅವರು ಸಚಿನ್ರಿಂದ ಉಡುಗೊರೆಯಾಗಿ ಪಡೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಇಡಿ ಅಧಿಕಾರಿಗಳು ಸಚಿನ್ ಸಾವಂತ್ ಮತ್ತು ನವ್ಯಾ ಇಬ್ಬರ ಫೋನ್ ವಿವರಗಳನ್ನು ಪರಿಶೀಲಿಸಿದ್ದಾರೆ. ನಟಿಯನ್ನು ಭೇಟಿಯಾಗಲು ಸಚಿನ್ ಅವರು 8 ರಿಂದ 10 ಬಾರಿ ಕೊಚ್ಚಿಗೆ ಹೋಗಿದ್ದರು ಎಂದು ವರದಿಯಾಗಿದೆ. ಆದರೆ, ನಾವಿಬ್ಬರು ಸ್ನೇಹಿತರು ಮಾತ್ರ, ನಮ್ಮ ನಡುವೆ ಬೇರೆ ಸಂಬಂಧ ಏನೂ ಇಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ನವ್ಯಾ ನಾಯರ್ ಬಗ್ಗೆ ಮಾಹಿತಿ ನಮೂದಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಚಿನ್ ಸಾವಂತ್ ಅವರನ್ನು ಬಂಧಿಸಲಾಗಿದೆ. ಕಸ್ಟಮ್ಸ್ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಜೂನ್ 27ರಂದು ಲಕ್ನೋದಲ್ಲಿ ಸಚಿನ್ರನ್ನು ಇಡಿ ಬಂಧಿಸಿತು.
ನಟಿ ನವ್ಯಾ ನಾಯರ್ ಅವರು ದರ್ಶನ್ ಅಭಿನಯದ ಗಜ, ಬಾಸ್ ಹಾಗೂ ರವಿಚಂದ್ರನ್ ಅಭಿನಯದ ದೃಶ್ಯ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಸದ್ಯ ಮಲಯಾಳಂ ಸಿನಿ ರಂಗದಲ್ಲಿ ಬಿಜಿಯಾಗಿದ್ದು, ಇದರ ನಡುವೆ ನವ್ಯಾಗೆ ಇಡಿ ಬಿಸಿ ಮುಟ್ಟಿಸಿದೆ. (ಏಜೆನ್ಸೀಸ್)