ನ್ಯೂಸ್

ಝಣಝಣ ಕಾಂಚಾಣ: ಬೆಟ್ಟಿಂಗ್ ಆ್ಯಪ್​​ನವರಿಂದ ಮುಖ್ಯಮಂತ್ರಿಗೆ 508 ಕೋಟಿ ರೂ.!

ನವದೆಹಲಿ: ಚುನಾವಣೆಗಾಗಿ ಭಾರಿ ಮೊತ್ತದ ಹಣದ ಹೊಳೆ ಹರಿಸುವುದು ಹೊಸದೇನಲ್ಲ. ಚುನಾವಣೆ ಖರ್ಚಿಗೆಂದೇ ಎಲ್ಲೆಲ್ಲಿಂದಲೋ ಹಣವನ್ನು ಹೊಂದಿಸಲಾಗುತ್ತದೆ. ಅದರಲ್ಲೂ ಇಲ್ಲೊಂದು ಕಡೆ ಬೆಟ್ಟಿಂಗ್​ ಆ್ಯಪ್​ನವರಿಂದ ಕೋಟಿಗಟ್ಟಲೆ ಹಣ ಮುಖ್ಯಮಂತ್ರಿಯೊಬ್ಬರು ಪಡೆದಿರುವುದು ಚುನಾವಣೆ ಆಸುಪಾಸಲ್ಲೇ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿರುವ ಮಹದೇವ ಬೆಟ್ಟಿಂಗ್ ಆ್ಯಪ್​, ಛತ್ತೀಸ್​ಗಢ ಮುಖ್ಯಮಂತ್ರಿಗೆ ಈ ವರೆಗೆ ಭಾರಿ ಮೊತ್ತದ ಹಣ ಸರಬರಾಜು ಮಾಡಿರುವುದು ಜಾರಿ ನಿರ್ದೇಶನಾಲಯದ ದಾಳಿಯಿಂದ ಬೆಳಕಿಗೆ ಬಂದಿದೆ.

ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಮೋಟರ್ಸ್ ಕಡೆಯಿಂದ 508 ಕೋಟಿ ರೂ. ಸಂದಾಯ ಆಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದ್ದು, ತನಿಖೆ ನಡೆಯುತ್ತಿದೆ.

ನಿನ್ನೆ ಛತ್ತೀಸ್​ಗಢದ ಹಲವೆಡೆ ದಾಳಿ ನಡೆಸಿ ತಪಾಸಣೆ ಮಾಡಿದ್ದ ಜಾರಿ ನಿರ್ದೇಶನಾಲಯ ಮಹದೇವ ಬೆಟ್ಟಿಂಗ್ ಆ್ಯಪ್​ಗೆ ಸೇರಿದ್ದ 5.39 ಕೋಟಿ ರೂ. ನಗದು ವಶ ಪಡಿಸಿಕೊಂಡಿದ್ದು, ಬ್ಯಾಂಕ್​ ಖಾತೆಯಲ್ಲಿರುವ 15.59 ಕೋಟಿ ರೂ. ಮುಟ್ಟುಗೋಲು ಹಾಕಿಕೊಂಡಿದೆ.