ನ್ಯೂಸ್

ರಕ್ಷಣಾ ಇಲಾಖೆ ಭೂಮಿ ಮೆಟ್ರೋಗೆ ಮಾರಾಟ; ಚರ್ಚ್​ ಆಫ್​ ಸೌತ್​ ಇಂಡಿಯಾದ 59.52 ಕೋಟಿ ರೂ. ಇ.ಡಿ. ವಶಕ್ಕೆ

ಬೆಂಗಳೂರು: ರಕ್ಷಣಾ ಇಲಾಖೆಯ ಭೂಮಿಯನ್ನು ಮೆಟ್ರೋಗೆ ನೀಡಿ ಭಾರಿ ಮೊತ್ತದ ಪರಿಹಾರ ಪಡೆದಿದ್ದ ಚರ್ಚ್​ ಆಫ್​ ಸೌತ್​ ಇಂಡಿಯಾದ ಹಣವನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ವಯ ಜಾರಿ ನಿರ್ದೇಶನಾಲಯವು ಸ್ಟೇಟ್​ ಬ್ಯಾಂಕ್​ ಇಂಡಿಯಾದ ಸುಧಾಮನಗರ ಶಾಖೆಯ ಚರ್ಚ್​ ಆಫ್​ ಸೌತ್​ ಇಂಡಿಯಾ ಟ್ರಸ್ಟ್​ ಅಸೋಸಿಯೇಷನ್​ ಖಾತೆಯಲ್ಲಿದ್ದ 59.52 ಕೋಟಿ ರೂ.ಗಳನ್ನು ಸ್ವಾಧೀನಕ್ಕೆ ಪಡೆಯಲು ಆದೇಶ ಹೊರಡಿಸಿದೆ. ಈ ಖಾತೆಯಲ್ಲಿ ಠೇವಣಿ ರೂಪದಲ್ಲಿ ಹಣವನ್ನು ಇರಿಸಲಾಗಿತ್ತು.

ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ಬೆಂಗಳೂರಿನ ಆಲ್​ ಸೇಂಟ್ಸ್​ ಚರ್ಚ್​ಗೆ ಧಾರ್ಮಿಕ ಉದ್ದೇಶಗಳಿಗಾಗಿ ನೀಡಲಾಗಿತ್ತು. ಆದರೆ, ಇದರ ಒಡೆತನ ರಕ್ಷಣಾ ಇಲಾಖೆಯ ಬಳಿಯೇ ಇತ್ತು. ಆದರೆ, ಈ ಪೈಕಿ 7,421.886 ಮೀಟರ್​ ಜಾಗವನ್ನು ಚರ್ಚ್​ ಆಫ್​ ಸೌತ್​ ಇಂಡಿಯಾ ಮೆಟ್ರೋಗೆ ಹಸ್ತಾಂತರಿಸಿತ್ತು. ಬದಲಿಗೆ ಪರಿಹಾರವಾಗಿ 59.52 ಲಕ್ಷ ರೂ.ಗಳನ್ನು ಪಡೆದಿತ್ತು. ಇದು ಅಕ್ರ ಎಂದು ಅಶೋಕ್​ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.

ಪ್ರಕರಣದ ತನಿಖೆ ವೇಳೆ ಚರ್ಚ್​ ಆಫ್​ ಸೌತ್​ ಇಂಡಿಯಾ ಭೂಮಿಯ ಒಡೆತನ ಹೊಂದಿಲ್ಲವೆಂದು ತಿಳಿದು ಬಂದಿತ್ತು. ಬದಲಿಗೆ ಧಾರ್ಮಿಕ ಕಾರ್ಯ ನಡೆಸಲಷ್ಟೇ ಭೂಮಿಯನ್ನು ನೀಡಲಾಗಿತ್ತು. ಹೀಗಾಗಿ ಭೂಮಿಯ ಒಡೆತನ ಹೊಂದಿದ ರಕ್ಷಣಾ ಇಲಾಖೆಗೆ ಪರಿಹಾರ ದೊರೆಯಬೇಕಿತ್ತು. ಹೀಗಾಗಿ ಪರಿಹಾರ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.