ನವದೆಹಲಿ: ಇಂದು ರಾಜಧಾನಿ ದೆಹಲಿ ಮತ್ತೊಮ್ಮೆ ಕಂಪಿಸಿದೆ. ಭಾನುವಾರವಷ್ಟೇ ಭೂಕಂಪನದ ಅನುಭವ ಎದುರಿಸಿದ್ದ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಮತ್ತೊಮ್ಮೆ ಭೂಕಂಪ ಸಂಭವಿಸಿಸ ನಡುಕ ಉಂಟಾಗಿ, ತೀವ್ರ ಆತಂಕ ಸೃಷ್ಟಿಯಾಗಿದೆ.
ದೆಹಲಿ ಮಾತ್ರವಲ್ಲದೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲೂ ಈ ಭೂಕಂಪ ಸಂಭವಿಸಿದೆ. ಈ ಭೂಕಂಪನದ ಕೇಂದ್ರಬಿಂದು ಅಫ್ಘಾನಿಸ್ತಾನದಲ್ಲಿ ಇತ್ತು ಎಂದು ಹೇಳಲಾಗಿದ್ದು, ಅದರ ತೀವ್ರತೆಗೆ ದೆಹಲಿ ಕೂಡ ಕಂಪಿಸಿದೆ. ಆದರೆ ಇದುವರೆಗೆ ಯಾವುದೇ ಸಾವು-ನೋವು, ಹಾನಿ ಇತ್ಯಾದಿ ವರದಿಯಾಗಿಲ್ಲ ಎನ್ನಲಾಗಿದೆ.
ಅಫ್ಘಾನಿಸ್ತಾನದ ಹಿಂದು ಕುಷ್ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.8 ಇತ್ತು. ಸುಮಾರು 189 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರಬಿಂದು ಇತ್ತೆಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸಸ್ (ಜಿಎಫ್ಝಡ್) ವರದಿ ಮಾಡಿದೆ. ಅಫ್ಘಾನ್ ರಾಜಧಾನಿ ಕಾಬೂಲ್, ಇಸ್ಲಾಮಾಬಾದ್ ಮಾತ್ರವಲ್ಲದೆ, ಪಾಕಿಸ್ತಾನದ ಕೆಲವು ಪ್ರದೇಶ ಹಾಗೂ ದೆಹಲಿಯಲ್ಲಿ ಈ ಕಂಪನ ಉಂಟಾಗಿದೆ ಎಂದು ಜಿಎಫ್ಝಡ್ ಹೇಳಿದೆ.
ಭಾನುವಾರ ಬೆಳಗಿನ ಜಾವ ಕೂಡ ದೆಹಲಿಯಲ್ಲಿ ಭೂಕಂಪ ಆಗಿದ್ದು, ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.8ರಷ್ಟಿತ್ತು ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಹೇಳಿದೆ. ಮಾತ್ರವಲ್ಲದೆ ನ. 12ರಂದು ಕೂಡ ದೆಹಲಿಯಲ್ಲಿ ಕಂಪನ ಉಂಟಾಗಿದ್ದು, ನೇಪಾಳದಲ್ಲಿ ಕೇಂದ್ರಬಿಂದು ಹೊಂದಿದ್ದ ಈ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.4 ವರದಿಯಾಗಿತ್ತು.