ನ್ಯೂಸ್

ಅಪ್ಪ-ಅಮ್ಮನ ಸಮಾಧಿ ಬಳಿ 'ದುನಿಯಾ' ವಿಜಯ್​ ಹುಟ್ಟುಹಬ್ಬ

ಬೆಂಗಳೂರು: ತೆಲುಗಿನ 'ವೀರ ಸಿಂಹ ರೆಡ್ಡಿ' ಚಿತ್ರದಲ್ಲಿ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಟಾಲಿವುಡ್​ ಪ್ರವೇಶಿಸಿದ್ದ 'ದುನಿಯಾ' ವಿಜಯ್​, ಆ ಚಿತ್ರದ ಯಶಸ್ಸಿನಿಂದ ಫುಲ್​ ಖುಷಿಯಾಗಿದ್ದಾರೆ. ಆ ಖುಷಿಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಕ್ಕೆ ಸಜ್ಜಾಗುತ್ತಿದ್ದಾರೆ.

ನಾಳೆ (ಜ. 20) 'ದುನಿಯಾ' ವಿಜಯ್​ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಅವರು ತಮ್ಮ ತಂದೆ-ತಾಯಿಯ ಸಮಾಧಿ ಬಳಿ ಆಚರಿಸಿಕೊಳ್ಳುತ್ತಿದ್ದಾರೆ.

ವಿಜಯ್​ ಅವರ ತಾಯಿ ಕಳೆದ ವರ್ಷ ನಿಧನರಾಗಿದ್ದರು. ಅದಾದ ಕೆಲವೇ ದಿನಗಳಲ್ಲಿ ಅವರ ತಂದೆಯೂ ಇನ್ನಿಲ್ಲವಾಗಿದ್ದರು. ಅಪ್ಪ-ಅಮ್ಮನ ಅಂತ್ಯಕ್ರಿಯೆಯನ್ನು ವಿಜಯ್​, ತಮ್ಮ ಹುಟ್ಟೂರಾದ ಆನೇಕಲ್​ನ ಕುಂಬಾರನಹಳ್ಳಿಯಲ್ಲಿ ನೆರವೇರಿಸಿದ್ದರು. ಅಷ್ಟೇ ಅಲ್ಲ, ಅಲ್ಲೇ ಸಮಾಧಿಯನ್ನೂ ಕಟ್ಟಿಸಿದ್ದರು. ಆ ಸಮಾಧಿಯ ಎದುರೇ ವಿಜಯ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಹುಟ್ಟುಹಬ್ಬ ಇರುವುದು ನಾಳೆಯಾದರೂ, ಇಂದೇ ವಿಜಯ್​ ತಮ್ಮ ಹುಟ್ಟೂರಿನಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲಿ ತಮ್ಮ ತಂದೆ-ತಾಯಯ ಸಮಾಧಿ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬದ ಆಚರಣೆಗಳು ನಡೆಯುತ್ತಿವೆ.

ಅಂದಹಾಗೆ, ವಿಜಯ್​ ಸದ್ಯ 'ಭೀಮ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅದರಲ್ಲಿ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಅರ್ಧ ಆಗಿದ್ದು, ಸದ್ಯದಲ್ಲೇ ಇನ್ನೊಂದು ಹಂತದ ಚಿತ್ರೀಕರಣ ನಡೆಯಲಿದೆ.