ಕಲಬುರಗಿ: ಪ್ರೀತಿಗೆ ಕಣ್ಣಿಲ್ಲ, ವಯಸ್ಸು, ಜಾತಿ ಅಂತರ ಇಲ್ಲ ಎನ್ನುವುದನ್ನು ನಾವು ಕೇಳಿದ್ದೇವೆ. ಹೀಗೆ ಇಲ್ಲೊಂದು ಅಣ್ಣ-ತಂಗಿ ವರಸೆ ಇರುವ ಜೋಡಿಯ ಪ್ರೀತಿಗೆ ಪೋಷಕರು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ.
ಶಶಿಕಲಾ (20) ಗೊಲ್ಲಾಳಪ್ಪ ( 24) ಮೃತರು. ಶಶಿಕಲಾ ಮತ್ತು ಗೊಲ್ಲಾಳಪ್ಪ ಇಬ್ಬರು ಕೂಡ ವರಸೆಯಲ್ಲಿ ಅಣ್ಣ ತಂಗಿ ಆಗಿದ್ದರು. ಅದರಿಂದ ಎರಡೂ ಮನೆಯವರು ಅಣ್ಣ-ತಂಗಿ ಪ್ರೀತಿಗೆ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು ಇಬ್ಬರು ಮೃತರಾಗಿದ್ದಾರೆ.
ಗೊಲ್ಲಾಳಪ್ಪ ಪ್ರೀತಿಯನ್ನು ನಿರಾಕರಿಸಿ ಶಶಿಕಲಾಗೆ ಬೇರೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಅದರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಗ್ರಾಮದ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.
ಪ್ರೇಯಸಿಗೆ ಮದುವೆ ನಿಶ್ಚಯ ಆಗಿರುವ ವಿಷಯ ತಿಳಿದ ಗೊಲ್ಲಾಳಪ್ಪ ನಿನ್ನೆ ರಾತ್ರಿ ಶಶಿಕಲಾಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ನಂತರ ಮಾಗಣಪುರ ಗ್ರಾಮದ ದೇವಸ್ಥಾನದಲ್ಲಿ ಜೋಡಿ ಮದುವೆ ಮಾಡಿಕೊಂಡಿದ್ದಾರೆ. ಬಳಿಕ ಅದೇ ಗ್ರಾಮದ ಹೊರವಾಲಯದ ತೋಟದ ಜಮೀನಿನಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಪ್ರೇಮಿಗಳಿಬ್ಬರು ನೇಣಿಗೆ ಶರಣಾಗುವ ಮುನ್ನ ತಾವು ಮದುವೆ ಮಾಡಿಕೊಂಡಿರುವುದರ ಬಗ್ಗೆ ಸೆಲ್ಫಿ ಫೋಟೋ ತೆಗೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.