ನ್ಯೂಸ್

ಮದ್ವೆ ಮೆರವಣಿಗೆಯಲ್ಲಿ ಪೊಲೀಸ್​ ಅಧಿಕಾರಿಯನ್ನು ಎಳ್ಕೊಂಡು ಮುತ್ತಿಟ್ಟ ಯುವಕ! ಮುಂದೇನಾಯ್ತು ನೀವೇ ನೋಡಿ…

ನವದೆಹಲಿ: ಮದುವೆ ಅಥವಾ ಹಬ್ಬದ ಸಂಭ್ರಮವೆಂದರೆ ಅಲ್ಲಿ ಅತ್ಯುತ್ಸಾಹಕ್ಕೆ ಕೊರತೆ ಇರುವುದೇ ಇಲ್ಲ. ಅದರಲ್ಲೂ ಮದ್ಯದ ಮತ್ತಿನಲ್ಲಿ ತೇಲಾಡುವವರ ಮೋಜು ಮಸ್ತಿ ಹಾಗು ಅವರು ಮಾಡುವ ಕಿತಾಪತಿ ಎಂದೆರಡಲ್ಲ. ಹೀಗೆ ಯುವಕನೊಬ್ಬ ಮದ್ಯದ ಅಮಲಿನಲ್ಲಿ ಪೊಲೀಸ್​ ಅಧಿಕಾರಿಗೆ ಮುತ್ತಿಟ್ಟ ಪ್ರಸಂಗಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ಮದುವೆ ಮೆರವಣಿಗೆಯ ಸಂದರ್ಭದಲ್ಲಿ ಯುವಕರ ಗುಂಪೊಂದು ಮದ್ಯದ ಅಮಲಿನಲ್ಲಿ ಡಾನ್ಸ್​ ಮಾಡುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಭದ್ರತೆಯಲ್ಲಿದ್ದ ಪೊಲೀಸ್​ ಅಧಿಕಾರಿಯೊಬ್ಬರು ಡಾನ್ಸ್​ ಮಾಡುತ್ತಿರುವವರ ಪಕ್ಕದಲ್ಲಿ ಹಾದು ಹೋಗುವಾಗ ಯುವಕನೊಬ್ಬ ಅಧಿಕಾರಿಯ ಹತ್ತಿರಬಂದು ಕೈಗ ಹಿಡಿದು ಎಳೆದುಕೊಂಡು ತಬ್ಬಿಕೊಳ್ಳುತ್ತಾನೆ ಮತ್ತು ಅಧಿಕಾರಿಯ ಕೆನ್ನೆಗೆ ಚುಂಬಿಸುತ್ತಾನೆ. ಇದರಿಂದ ಕೋಪಗೊಳ್ಳುವ ಅಧಿಕಾರಿ ಯುವಕನ ಕೆನ್ನೆಗೆ ಬಾರಿಸುತ್ತಾರೆ. ಕೆನ್ನೆಗೆ ಏಟು ತಿಂದರೂ ತನಗೇನು ಆಗೇ ಇಲ್ಲ ಎನ್ನುವಂತೆ ಯುವಕ ತನ್ನ ಡಾನ್ಸ್​ ಮುಂದುವರಿಸುತ್ತಾನೆ.

ಈ ಪ್ರಸಂಗ ನಡೆದಿದ್ದು ಎಲ್ಲಿ? ಯಾವಾಗ ನಡೆಯಿತು? ಎಂಬುದರ ಯಾವುದೇ ಮಾಹಿತಿ ಇಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಡಿಯೋವನ್ನು ಘರ್​ ಕೆ ಕಲೇಶ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ. ಇದುವರೆಗೂ 1 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಮಂದಿ ಕಾಮೆಂಟ್​ ಮಾಡಿದ್ದು, ಬಗೆಬಗೆಯ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)