ನ್ಯೂಸ್

ಮತ್ತಲ್ಲಿ ಫುಟ್​ಪಾತ್​ ಮೇಲೆ Truck ಚಲಾಯಿಸಿದ ಚಾಲಕ; ಸ್ಥಳದಲ್ಲೇ ಮೂವರು ಸಾವು, 6 ಮಂದಿ ಗಂಭೀರ

ಪುಣ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಲಾರಿ (Truck) ಚಲಾಯಿಸಿ ಇಬ್ಬರು ಮಕ್ಕಳು ಸೇರಿದಂತೆ ಮೂವರನ್ನು ಕೊಂದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಇದೆ. ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಪೊಲೀಸರು ಗಜಾನನ ಶಂಕರ್ ತೋಟೆ (26) ಯನ್ನು ಬಂಧಿಸಿದ್ದು, ಈತ ಕುಡಿದು ವಾಹನ ಚಲಾಯಿಸಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಕುಡಿದು ಅತಿವೇಗವಾಗಿ ಟ್ರಕ್​ ಚಲಾಯಿಸಿದ ಪರಿಣಾಮ ಲಾರಿ ರಸ್ತೆಯಿಂದ ಫುಟ್‌ಪಾತ್‌ ಮೇಲೆ ಪಲ್ಟಿಯಾಗಿ ಬಿದ್ದಿದ್ದು, ಫುಟ್​​ಪಾತ್​ ಮೇಲೆ ಮಲಗಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ವಘೋಲಿಯ ಕೇಸ್ನಂದ್ ಫಾಟಾ ಬಳಿ ಈ ಘಟನೆ ನಡೆದಿದ್ದು, 12 ಮಂದಿ ಫುಟ್​ಪಾತ್​ನಲ್ಲಿ ಮಲಗಿದ್ದರು ಎಂದು ವರದಿಯಾಗಿದೆ. ಮೃತರನ್ನು ವಿಶಾಲ್ ವಿನೋದ್ ಪವಾರ್ (22), ವೈಭವಿ ರಿತೇಶ್ ಪವಾರ್ (1), ಮತ್ತು ವೈಭವ್ ರಿತೇಶ್ ಪವಾರ್ (2) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಜಾನಕಿ ದಿನೇಶ್ ಪವಾರ್ (21) ರಿನಿಶಾ ವಿನೋದ್ ಪವಾರ್ (18) ರೋಷನ್ ಶಶಾದು ಭೋಸಲೆ (9), ನಾಗೇಶ ನಿವೃತ್ತಿ ಪವಾರ್ (27), ದರ್ಶನ್ ಸಂಜಯ್ ವೈರಾಲ್ (18) ಮತ್ತು ಅಲಿಶಾ ವಿನೋದ್ ಪವಾರ್ (47) ಎಂದು ಗುರುತಿಸಲಾಗಿದ್ದು, ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.