ನ್ಯೂಸ್

ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ...!

ನವದೆಹಲಿ: ಸದ್ಯ ಕರೊನಾಗೆ ಯಾವುದೇ ಲಸಿಕೆ ಕಂಡು ಹಿಡಿದಿಲ್ಲ. ಪರೀಕ್ಷೆಗಳು ಭಾರಿ ವೇಗದಲ್ಲಿ ನಡೆಯುತ್ತಿವೆ. ಹಾಗಿದ್ದರೆ ಕರೊನಾದಿಂದ ಜನರು ಗುಣವಾಗುತ್ತಿರೋದು ಹೇಗೆ ಅಂತೀರಾ?

ಬೇರೆ ಬೇರೆ ಕಾಯಿಲೆಗಳಿಗಾಗಿ ಕಂಡುಹಿಡಿದ ಔಷಧವನ್ನೇ ಅವರಲ್ಲಿರುವ ತೊಂದರೆಗೆ ಅನುಗುಣವಾಗಿ ನೀಡಲಾಗುತ್ತಿದೆ. ಅಂತೆಯೇ ಅವುಗಳ ಬೆಲೆ ನಮ್ಮ ತಲೆ ತಿರುವಂತೆ ಮಾಡುವುದು ಕೂಡ ಸತ್ಯ.

ರೆಮ್​ಡೆಸಿವಿರ್​ (Remdesivir): ಅಮೆರಿಕ ಮೂಲದ ಗಿಲಯಾಡ್​ ಕಂಪನಿ 2014ರಲ್ಲಿ ಎಬೊಲಾ ನಿವಾರಣೆಗೆ ಇದನ್ನು ಕಂಡುಹಿಡಿಯಿತು. ಅದರಲ್ಲಿ ಯಶಸ್ವಿಯಾಗಲಿಲ್ಲ. ಸದ್ಯ ಭಾರತ, ಅಮೆರಿಕ, ಚೀನಾ, ಜಪಾನ್​, ರಷ್ಯಾ ಸೇರಿ ಬಹುತೇಕ ರಾಷ್ಟ್ರಗಳಲ್ಲಿ ಕರೊನಾ ನಿಗ್ರಹಕ್ಕೆ ಇದರ ಬಳಕೆಯಾಗುತ್ತಿದೆ. ನಂಜನಗೂಡಿನ ಜುಬಿಲೆಂಟ್​ ಕಂಪನಿಯಲ್ಲಿ ಇದರ ಉತ್ಪಾದನೆ ನಡೆದಿದೆ. ಇದರ ಒಂದು ವಾಯಲ್​ಗೆ (ಟ್ಯೂಬ್​) 10,000 ದಿಂದ 20,000 ರೂ. ಬೆಲೆಯಿದೆ.

ಟೊಸಿಲಿಝುಮಾಬ್​ (Tocilizumab): ಇದು ಸಂಧಿವಾತಕ್ಕೆ ಬಳಸಲಾಗುವ ಲಸಿಕೆ. ಮುಂಬೈನಲ್ಲಿ 100ಕ್ಕೂ ಅಧಿಕ ಗಂಭೀರವಾಗಿ ಅನಾರೋಗ್ಯಕ್ಕೊಳಗಾದ ರೋಗಿಗಳ ಮೇಲೆ ಇದನ್ನು ಪ್ರಯೋಗಿಸಲಾಗಿದೆ. ಅಂದರೆ, ಉಸಿರಾಟ ತೀವ್ರ ತೊಂದರೆ ಉಂಟಾಗಿ ರೋಗಿ ವೆಂಟಿಲೇಟರ್​ ನೀಡಬೇಕಾದ ಸ್ಥಿತಿಗೆ ತಲುಪುವುದನ್ನು ತಡೆಯಲು ಇದನ್ನು ಬಳಕೆ ಮಾಡಲಾಗುತ್ತಿದೆ. ಇದರ ಒಂದು ಡೋಸ್​ಗೆ 40,000 ರಿಂದ 50 ಸಾವಿರ ರೂ. ಬೆಲೆಯಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇದನ್ನು ಉಚಿತವಾಗಿ ನೀಡಲಾಗುತ್ತಿದೆ.

ಟೊಲಿಝುಮಾಬ್​(tolizumab): ಸಾಮಾನ್ಯವಾಗಿ ಸೋರಿಯಾಸಿಸ್​ನಂತಹ ಚರ್ಮ ರೋಗ, ಸಂಧಿವಾತ, ರೋಗ ನಿರೋಧಕ ಶಕ್ತಿ ಕುಂದುವ ಕಾಯಿಲೆಗಳಿಗೆ ಇದನ್ನು ಬಳಸಲಾಗುತ್ತದೆ. ಸದ್ಯ ಮುಂಬೈ ಹಾಗೂ ದೆಹಲಿ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳಿಗೆ ಇದನ್ನು ನೀಡಲಾಗಿದ್ದು, ಫಲಿತಾಂಶ ಇನ್ನಷ್ಟೇ ತಿಳಿಯಬೇಕಿದೆ ಎನ್ನುತ್ತಾರೆ ವೈದ್ಯರು. ಒಂದು ಇಂಜೆಕ್ಷನ್​ ಬೆಲೆ 7,500 ರೂ.

ಹೈಡ್ರೋಕ್ಸಿಕ್ಲೊರೊಕ್ವಿನ್​ (Hydroxychloroquine): ಇದು ಮಲೇರಿಯಾ ನಿವಾರಕ. ಭಾರತದಲ್ಲೇ ಇದನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ತಲೆನೋವು, ಜ್ವರ, ಮೈಕೈ ನೋವು ಮೊದಲಾದ ಲಘು ಸೋಂಕಿತರಲ್ಲಿ ಕಂಡುಬರುವ ಲಕ್ಷಣಗಳಿಗೆ ಹಾಗೂ ಗಂಭೀರ ಅನಾರೋಗ್ಯಕ್ಕೆ ಒಳಗಾದವರಿಗೆ ಒಂಭತ್ತು ದಿನಗಳ ಕಾಲ ನೀಡಲಾಗುತ್ತದೆ. ನೀಡಲಾಗುತ್ತದೆ. ಇದರ ಹತ್ತು ಮಾತ್ರೆಗಳಿಗೆ 60ರಿಂದ 120 ರೂ.ವರೆಗೆ ಬೆಲೆಯಿದೆ.

ಡಾಕ್ಸಿಸೈಕ್ಲಿನ್​ ಹಾಗೂ ಐವರ್​ಮೆಕ್ಟಿನ್​ (Doxycycline + ivermectin): ಬಾಂಗ್ಲಾದೇಶದಲ್ಲಿ ಈ ಔಷಧದಿಂದ ಕರೊನಾ ರೋಗಿಗಳು ನಾಲ್ಕೇ ದಿನದಲ್ಲಿ ಗುಣವಾಗಿದ್ದರು ಎಂದು ಹೇಳಲಾಗಿದೆ. ಎಚ್​ಐವಿ ರೋಗಿಗಳಿಗೆ ನೀಡಲಾಗುವ ರೈಟೊನಾವಿರ್​ ಹಾಗೂ ಲೋಪಿನಾವಿರ್​(Ritonavir + lopinavir) ಲಸಿಕೆಯನ್ನು ಭಾರತದಲ್ಲಿ ಪ್ರಯೋಗಿಸಲಾಗುತ್ತಿದೆ. ಇದರೊಂದಿಗೆ ಅಲ್ಲಲ್ಲಿ ಪ್ಲಾಸ್ಮಾ ಚಿಕಿತ್ಸೆಗಳು ಕೂಡ ಯಶಸ್ವಿಯಾದ ಉದಾಹರಣೆಗಳಿವೆ.